ನವದೆಹಲಿ: ಗುಜರಾತ್ ನ ಉನಾ ಪಟ್ಟಣದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣ ಗುರುವಾರವೂ ಲೋಕಸಭೆಯ ಉಭಯ ಕಲಾಪಗಳಲ್ಲೂ ಗಂಭೀರವಾದ ಚರ್ಚೆಗೆ ಕಾರಣವಾಯಿತು. ಅಲ್ಲದೇ ಮಾಯಾವತಿ ವಿರುದ್ಧ ಬಿಜೆಪಿ ಮುಖಂಡ ದಯಾಶಂಕರ್ ನೀಡಿರುವ ಕೀಳು ಹೇಳಿಕೆ ಕೂಡಾ ಪ್ರತಿಧ್ವನಿಸಿತು.
ಗುಜರಾತ್ ನಲ್ಲಿ ದಲಿತರನ್ನು ಭಯಭೀತಗೊಳಿಸಲು ಗೋ ರಕ್ಷಕರಿಗೆ ಅವಕಾಶ ನೀಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದವು. ಬಿಎಸ್ಪಿ ನಾಯಕಿ, ಉತ್ತರಪ್ರದೇಶ ಮಾಜಿ ಸಿಎಂ ಮಾಯಾವತಿ ಮಾತನಾಡಿ, ಗೋ ರಕ್ಷಣೆಯ ಹೆಸರಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಗುತ್ತಿದ್ದರೆ, ಈಗ ದಲಿತರ ಮೇಲೆ ಮುಂದುವರಿಸಲಾಗಿದೆ.
ಇದೇನು ಕೇವಲ ಗುಜರಾತ್ ಗೆ ಮಾತ್ರ ಸೀಮಿತವಾಗಿಲ್ಲ, ಪ್ರಮುಖವಾಗಿ ದೇಶದಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಈ ರೀತಿಯ ಹಲ್ಲೆಗಳು ಹೆಚ್ಚಳವಾಗುತ್ತಿರುವುದಾಗಿ ಮಾಯಾವತಿ ದೂರಿದರು.
ಸ್ವಾತಂತ್ರ್ಯ ಬಂದು 69 ವರ್ಷಗಳು ಕಳೆದಿವೆ, ಆದರೆ ಈವರೆಗೂ ಅರ್ಧದಷ್ಟು ದಲಿತ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಲಾಭ ಸಿಕ್ಕಿಲ್ಲ ಎಂದರು. 2014ರಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದಾಗ ದಲಿತರ ಪರ ಸರ್ಕಾರ ಏನಾದರು ಮಾಡಬಹುದೆಂಬ ವಿಶ್ವಾಸವಿತ್ತು. ಆದರೆ ಈವರೆಗೆ ದಲಿತರಿಗೆ ಸಂಬಂಧಪಟ್ಟ ಮಸೂದೆಯೂ ಪಾಸ್ ಆಗಿಲ್ಲ ಎಂದು ಟೀಕಿಸಿದರು.
ಬಿಹಾರ ಸಂಸದ ಶರದ್ ಯಾದವ್ ಮಾತನಾಡಿ, ಸರ್ಕಾರಗಳು ಗೋ ರಕ್ಷಕರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಸರ್ಕಾರ ಯಾಕೆ ಈ ಗೋ ರಕ್ಷಕ ಗುಂಪುಗಳನ್ನು ನಿಷೇಧಿಸಬಾರದು ಎಂದು ಪ್ರಶ್ನಿಸಿದರು.
-ಉದಯವಾಣಿ
Comments are closed.