ಪಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆವರ ಹುಟ್ಟೂರ ಜಿಲ್ಲೆಯಾಗಿರುವ ನಾಲಂದಾದಲ್ಲಿ ವ್ಯಕ್ತಿಯೋರ್ವ ತನಗೆ ಗಂಡು ಮಗು ಹುಟ್ಟಬೇಕೆಂಬ ಆಸೆಯಲ್ಲಿ ಬಿಹಾರ್ ಷರೀಫ್ ನಲ್ಲಿನ ಮಸೀದಿ ಪಕ್ಕದಲ್ಲಿರುವ ತನ್ನ ಮನೆಯ ಟೆರೇಸ್ ಮೇಲೆ ಪಾಕ್ ಧ್ವಜವನ್ನು ಹಾರಿಸಿ ಪೊಲೀಸರಿಂದ ಬಂಧನಕ್ಕೆ ಗುರಿಯಾದ ಕುತೂಹಲಕಾರಿ ಘಟನೆ ವರದಿಯಾಗಿದೆ.
ನಾಲಂದಾ ಜಿಲ್ಲಾ ಕೇಂದ್ರದ ಖರಾಡಿ ಪ್ರದೇಶದಲ್ಲಿ ಜಾಮಾ ಮಸೀದಿಯ ಪಕ್ಕದಲ್ಲೇ ವಾಸ್ತವ್ಯವಿರುವ ಆರೋಪಿ ಅನ್ವರುಲ್ ಹಕ್ ನ ಮನೆಯ ಟೆರೇಸ್ ಮೇಲೆ ಪಾಕ್ ಧ್ವಜ ಹಾರಾಡುತ್ತಿರುವುದನ್ನು ಸ್ಥಳೀಯ ಟಿವಿ ಚ್ಯಾನಲ್ ಪ್ರಸಾರ ಮಾಡಿತ್ತು.
ಒಡನೆಯೇ ಕಾರ್ಯಾಚರಣೆಗಿಳಿದ ಪೊಲೀಸರು ಅನ್ವರುಲ್ ಹಕ್ ಮನೆಗೆ ದಾಳಿ ಮಾಡಿದರು. “ಪಾಕ್ ಧ್ವಜ ಹಾರಿಸುವ ಮೂಲಕ ತನ್ನ ಹೆಂಡತಿಗೆ ಗಂಡು ಮಗು ಹುಟ್ಟುವುದೆಂಬ ನಂಬಿಕೆಯಲ್ಲಿ ನಾನು ಹಾಗೆ ಮಾಡಿದ್ದೇನೆ’ ಎಂಬುದಾಗಿ ಅನ್ವರುಲ್ ಹಕ್ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಘಟನೆ ಸಂಬಂಧವಾಗಿ ನಾಲಂದಾ ಜಿಲ್ಲಾ ಮ್ಯಾಜಿಸ್ಟ್ರೇಟರನ್ನು ಸಂಪರ್ಕಿಸಿದಾಗ, “ಬಿಹಾರ್ ಷರೀಫ್ ನಲ್ಲೀಗ ಪಾಕ್ ಧ್ವಜ ಹಾರುತ್ತಿಲ್ಲ ; ಘಟನೆ ಸಂಬಂಧವಾಗಿ ನಾವು ತನಿಖೆ ನಡೆಸುತ್ತಿದ್ದೇವೆ’ ಎಂದಷ್ಟೇ ಉತ್ತರಿಸಿದರು.
ಪಟ್ನಾದಲ್ಲಿ ವಾರದ ಹಿಂದಷ್ಟೇ ಮುಂಬಯಿ ಮೂಲದ ವಿವಾದಿತ ಇಸ್ಲಾಂ ಪ್ರಚಾರಕ ಝಾಕೀರ್ ನಾಯ್ಕ್ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪರವಾಗಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳು ಕೇಳಿ ಬಂದಿದ್ದವು. ಆ ಸಂಬಂಧ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಅದಾಗಿ ವಾರದೊಳಗೆ ಈಗ ಪಾಕ್ ಧ್ವಜ ಹಾರಾಟ ನಡೆದಿರುವುದು ಗಮನಾರ್ಹವಾಗಿದೆ.
ಬಿಹಾರದಲ್ಲಿನ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತಿಕೂಟದ ಸರಕಾರವು ರಾಷ್ಟ್ರ ವಿರೋಧಿಗಳ ಬಗ್ಗೆ ಅನುಕಂಪ ತೋರುತ್ತಿದೆ ಎಂದು ಈ ನಡುವೆ ಬಿಜೆಪಿ ಆರೋಪಿಸಿದೆ.
-ಉದಯವಾಣಿ
Comments are closed.