ಶೀರ್ಷಿಕೆ ಓದುತ್ತಿದ್ದಂತೆಯೇ, ಕನ್ನಡದಲ್ಲಿ ಮತ್ತೂಮ್ಮೆ ಸ್ಟಾರ್ ವಾರ್ ಶುರುವಾಗಿಬಿಟ್ಟಿದೆಯಾ ಎಂಬ ಗುಮಾನಿ ಕನ್ನಡ ಚಿತ್ರಪ್ರೇಮಿಗಳಿಗೆ ಬಂದುಬಿvಬಹುದು. ಏಕೆಂದರೆ, ಇತ್ತೀಚೆಗಷ್ಟೇ “ರಾಜಕುಮಾರ’ ಚಿತ್ರೀಕರಣದ ಸಂದರ್ಭದಲ್ಲಿ ಸುದೀಪ್ ದಿಢೀರನೆ ಭೇಟಿ ನೀಡಿದ್ದರು. ಪುನೀತ್ ಮತ್ತು ಸುದೀಪ್ ಜೊತೆಯಾಗಿ ಹಲವು ನಿಮಿಷಗಳ ಕಾಲ ಜೊತೆಗೆ ಕಳೆದಿದ್ದರು. ಇಬ್ಬರು ಸ್ಟಾರ್ ನಟರು ಒಟ್ಟಿಗೆ ಹೀಗಿದ್ದಿದ್ದನ್ನು ನೋಡಿ ಅವರಿಬ್ಬರ ಅಭಿಮಾನಿಗಳು ಖುಷಿಪಡುವಾಗಲೇ, ಇದೇನಿದು ಬಿಗ್ ಫೈಟ್ ಎಂಬ ಸಂಶಯ ಬರಬಹುದು.
ಅದೇನೆಂದರೆ, ಈಗಿನ ಸುದ್ದಿಗಳ ಪ್ರಕಾರ, ಆರು ವರ್ಷಗಳ ನಂತರ ಪುನೀತ್ ಹಾಗೂ ಸುದೀಪ್ ಅವರ ಚಿತ್ರಗಳು ಒಂದೇ ದಿನದ ಗ್ಯಾಪ್‌ನಲ್ಲಿ ಬಿಡುಗಡೆಯಾಗಲಿವೆ. ಈ ಮುನ್ನ ಸುದೀಪ್ ಅಭಿನಯದ “ಕಿಚ್ಚ-ಹುಚ್ಚ’ ಮತ್ತು ಪುನೀತ್ ಅಭಿನಯದ “ಜಾಕಿ’ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಿದ್ದವು. ಈಗ ಅಂಥದ್ದೇ ಒಂದು ಸಂದರ್ಭ ಮತ್ತೂಮ್ಮೆ ರಿಪೀಟ್ ಆಗುವ ಸಾಧ್ಯತೆ ಕಂಡುಬರುತ್ತಿದೆ. ಇದಕ್ಕೂ ಮುನ್ನ ಪುನೀತ್ ರಾಜಕುಮಾರ್ ಅಭಿನಯದ “ದೊಡ್ಮನೆ ಹುಡುಗ’ ಚಿತ್ರವನ್ನು ಆಗಸ್ಟ್ 11ರ ಗುರುವಾರದಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡವು ತೀರ್ಮಾನಿಸಿದ್ದು ಸುದ್ದಿಯಾಗಿತ್ತು. ಈಗ ಸುದೀಪ್ ಅಭಿನಯದ “ಕೋಟಿಗೊಬ್ಬ 2′ ಚಿತ್ರವನ್ನು ಆಗಸ್ಟ್ 12ರ ವರಮಹಾಲಕ್ಷ್ಮೀ ಹಬ್ಬದ ದಿನದಂದು ಬಿಡುಗಡೆ ಮಾಡುವುದಾಗಿ ಆ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ. ಅಲ್ಲಿಗೆ ಒಂದೇ ದಿನದ ಅಂತರದಲ್ಲಿ ಇಬ್ಬರು ಸ್ಟಾರ್ ನಟರ, ಎರಡು ಮೆಗಾ ಬಜೆಟ್ ಚಿತ್ರಗಳು ಬಿಡುಗಡೆಯಾದಂತಾಗುತ್ತಿದೆ.
ವಿಶೇಷವೆಂದರೆ, ಆಗ “ಜಾಕಿ’ ಚಿತ್ರವನ್ನು ನಿರ್ದೇಶಿಸಿದ್ದೂ ಸೂರಿ. ಈಗ ಅವರೇ ಪುನೀತ್ ಅವರನ್ನು “ದೊಡ್ಮನೆ ಹುಡುಗ’ನನ್ನಾಗಿ ಮಾಡಿದ್ದಾರೆ. ಚಿತ್ರದಲ್ಲಿ ಅಂಬರೀಶ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್ ಮುಂತಾದ ದೊಡ್ಡ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು “ಕೋಟಿಗೊಬ್ಬ 2′ ಚಿತ್ರದಲ್ಲಿ ಸುದೀಪ್ ಜೊತೆಗೆ ಪ್ರಕಾಶ್ ರೈ, ದೇವರಾಜ್, ಮುಕೇಶ್ ತಿವಾರಿ ಮುಂತಾದವರಿದ್ದಾರೆ. ಚಿತ್ರವನ್ನು ಕೆ.ಎಸ್. ರವಿಕುಮಾರ್ ನಿರ್ದೇಶಿಸಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ, ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಎರಡೂ ದೊಡ್ಡ ಚಿತ್ರಗಳಾದ ಕಾರಣ, ನಿರೀಕ್ಷೆ ಕೂಡಾ ಹೆಚ್ಚಿದೆ.
ಸದ್ಯಕ್ಕಂತೂ ಎರಡೂ ಚಿತ್ರಗಳು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗುವುದಾಗಿ ಘೋಷಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಏನೇನು ಬೆಳವಣಿಗೆಗಳಾಗುತ್ತವೋ ಎಂಬ ಕುತೂಹಲ ಎಲ್ಲರಿಗೂ ಇದೆ.
-ಉದಯವಾಣಿ
Comments are closed.