
ಮಂಗಳೂರು, ಜು.20; ಮಂಗಳೂರು ಮಹಾನಗರ ಪಾಲಿಕೆಯಿಂದ 4 ಕೋಟಿ ವೆಚ್ಚದ ನಾಲ್ಕು ಕಾಮಾಗಾರಿಗಳಿಗೆ ಶಿಲಾನ್ಯಾಸ ಮತ್ತು ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಾತ್ರಿ ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ಜು.24 ರಂದು ನೆರವೇರಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹರಿನಾಥ್ ತಿಳಿಸಿದ್ದಾರೆ.
ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜು.24 ರಂದು ನಡೆಯಲಿರುವ ಈ ನಾಲ್ಕು ಕಾಮಾಗಾರಿಗಳ ಶಿಲಾನ್ಯಾಸ ಮತ್ತು ಕಸಬಾ ಬಜಾರ್ನಲ್ಲಿ ನಿರ್ಗತಿಕ, ರಾತ್ರಿ ವಸತಿ ರಹಿತ ನಾಗರಿಕರಿಗಾಗಿ ರೂ.99.80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ನೇಹಿ ವಸತಿ ವ್ಯವಸ್ಥೆಯ ನೆಲ ಅಂತಸ್ತು ಕಟ್ಟಡದ ಉದ್ಘಾಟನೆಯನ್ನು ಸಚಿವ ರೋಶನ್ ಬೇಗ್ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಜು.24 ರಂದು 99.85 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪುರಭವನದ ಭೋಜನ ಗೃಹ ನಿರ್ಮಾಣ, 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಳಕೆ ಮಾರುಕಟ್ಟೆ ನಿರ್ಮಾಣದ ಮೊದಲ ಹಂತ, 1 ಕೋಟಿ ವೆಚ್ಚದ ಕಾವೂರು ಪ್ರದೇಶದ ಮಾರುಕಟ್ಟೆ ನಿರ್ಮಾಣದ ಮೊದಲನೇ ಹಂತ 1.5 ಕೋಟಿ ರೂ. ವೆಚ್ಚದ ಕಾವೂರು ಜಂಕ್ಷನ್ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದರು.
ತುಂಬೆಯಲ್ಲಿ ಎರಡನೆ ಹಂತದ ಡ್ಯಾಮ್ ಆರಂಭಿಸಲು ಮೊದಲ ಪ್ರಯತ್ನವಾಗಿ 5 ಮೀಟರ್ ಹೆಚ್ಚಳಕ್ಕೆ ಸರ್ವೆ ಮಾಡಲಾಗಿದೆ. 5 ಮೀಟರ್ ಎತ್ತರ ಮಾಡಲು 53 ಎಕರೆ ಜಮೀನು ಸ್ವಾಧೀನಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈತರ ಜೊತೆ ಮಾತುಕತೆ ನಡೆಸಿ ಗಡಿ ಗುರುತು ಮಾಡಲಾಗವುದು ಎಂದು ಹೇಳಿದರು.
ಮನಪಾ ಆಯುಕ್ತ ಮೊಹಮ್ಮದ್ ನಝೀರ್, ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಜೆಸಿಂತ ವಿಜಯ್ ಆಲ್ಪ್ರೆಡ್, ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಮನಪಾ ಸದಸ್ಯರಾದ ಲ್ಯಾನ್ಸಿ ಲೋಟೋ ಪಿಂಟೊ ಅಪ್ಪಿಲತಾ, ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Comments are closed.