ಕರ್ನಾಟಕ

ಮಾತು ಬಾರದವರಿಗೆ ಮಾತನಾಡುವ ‘ಸ್ಮಾರ್ಟ್ ಗ್ಲೋವ್’ ಅಭಿವೃದ್ಧಿ

Pinterest LinkedIn Tumblr

32

ಬೆಂಗಳೂರು: ಇಲ್ಲಿನ ಅಮೃತಾ ಸ್ಕೂಲ್ ಆಫ್ ಎಂಜಿನಿಯರಿಂಗ್‍ನ ಅಮೃತಾ ರೋಬೊಟಿಕ್ ಲ್ಯಾಬ್(ಎಆರ್‍ಆರ್‍ಎಲ್)ನ ವಿದ್ಯಾರ್ಥಿಗಳು ಮುದ್ರ ಎಂಬ ಸ್ಮಾರ್ಟ್ ಗ್ಲೋವ್ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದರಿಂದ ಭಾರತೀಯ ಭಾಷೆಗಳನ್ನು ಇಂಗ್ಲೀಷ್‍ಗೆ ತರ್ಜುಮೆ ಮಾಡಬಹುದಾಗಿದೆ. ಇದು ವಿಶೇಷವಾಗಿ ಮಾತು ಬಾರದವರಿಗೆ ಕೈ ಸನ್ನೆ ಮೂಲಕ ಮಾತನಾಡುವ ಸಾಧನವಾಗಿದೆ. ಇಲ್ಲಿನ ಇಸಿಇ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರು ಎಚ್‍ಆರ್ ನಂದಿ ವರ್ಧನ್ ಅವರ ಮಾರ್ಗದರ್ಶನದಲ್ಲಿ ಬಿ.ಟೆಕ್ ವಿದ್ಯಾರ್ಥಿಗಳಾದ ಅಭಿಜಿತ್ ಭಾಸ್ಕರನ್, ಅನೂಪ್ ನಾಯರ್, ದೀಪಕ್ ರಾಮ್ ಮತ್ತು ಕೃಷ್ಣನ್ ಅನಂತನಾರಾಯಣ ಅವರು ಈ ವಿಶೇಷ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಅಮೃತಾ ಸ್ಕೂಲ್ ಆಫ್ ಎಂಜಿನಿಯರಿಂಗ್‍ನ ಬೆಂಗಳೂರು ಕ್ಯಾಂಪಸ್‍ನ ರೀಸರ್ಚ್ ಮುಖ್ಯಸ್ಥ ಡಾ.ಟಿಎಸ್‍ಬಿ ಸುದರ್ಶನ್ ಈ ಬಗ್ಗೆ ಮಾಹಿತಿ ನೀಡಿದ್ದು, 2011ರ ಜನಗಣತಿ ಪ್ರಕಾರ ಭಾರತದಲ್ಲಿ 12 ದಶಲಕ್ಷ ಜನರು ಮಾತು ಬಾರದವರಿದ್ದಾರೆ.

ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗದೇ ಇವರು ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇವಲ ಕೈ ಸನ್ನೆ ಮೂಲಕ ತಮ್ಮ ಭಾವನೆಗಳನ್ನು ಹೇಳಿಕೊಳ್ಳುವಾಗ ಅಭದ್ರತೆ ಅವರನ್ನು ಕಾಡುತ್ತಿರುತ್ತದೆ. ಇಂತಹವರಿಗಾಗಿಯೇ ಅಮೃತಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮುದ್ರ ಎಂಬ ಸ್ಮಾರ್ಟ್ ಗ್ಲೋವ್ ಅನ್ನು ಅಭಿವೃದ್ಧಿಪಡಿಸಿದ್ದು, ಇದರಿಂದ ಇತರರೊಂದಿಗೆ ಸುಲಭವಾಗಿ ಮಾತನಾಡಬಹುದಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಈ ಸಾಧನವನ್ನು ಅಭಿವೃದ್ಧಿಪಡಿಸಲು ಮಾರ್ಗದರ್ಶನ ನೀಡಿದ ಎಚ್‍ಆರ್ ನಂದಿ ವರ್ಧನ್ ಮಾತನಾಡಿ, ಕೈ ಸನ್ನೆಯನ್ನು ಭಾರತೀಯ ಭಾಷೆಗಳ ಧ್ವನಿಗೆ ಪರಿವರ್ತನೆ ಮಾಡುವ ರೀತಿಯಲ್ಲಿ ಈ ಗ್ಲೋವ್(ಕೈಗವಸು) ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ನಮ್ಮ ಪ್ರಾಥಮಿಕ ಆದ್ಯತೆಯಾದರೂ ಈ ಗ್ಲೋವ್ ಬಹುಪಯೋಗಿ ಮತ್ತು ಬಹುಮುಖದ ಪರಿಣಾಮಕಾರಿಯಾದ ಸಾಧನವಾಗಿದೆ. ಗೇಮಿಂಗ್ ಸ್ಟೇಷನ್ಸ್, ವರ್ಚುವಲ್ ರಿಯಾಲಿಟಿ, ರಿಮೋಟ್ ಕಂಟ್ರೋಲ್ ಡಿವೈಸ್, ರೋಬೊಟಿಕ್ ಮತ್ತು ಮೆಡಿಕಲ್ ಇಂಡಸ್ಟ್ರಿಗಳಲ್ಲಿ ಅತ್ಯುತ್ತಮವಾಗಿಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಅತ್ಯಂತ ಹಗುರವಾದ ಈ ಮುದ್ರ ಗ್ಲೋವ್‍ನಲ್ಲಿ ಅಳವಡಿಸಿರುವ ಸ್ಪೀಕರ್‍ಗಳ ಮೂಲಕ ಸಂಭಾಷಣೆಯನ್ನು ತಿಳಿಸುತ್ತದೆ. ಈ ಕೈಗವಸು ಧರಿಸಿದ ವ್ಯಕ್ತಿಗೆ ಸೂಕ್ತ ನಿರ್ದೇಶನಗಳನ್ನು ನೀಡುತ್ತದೆ. ಇದರ ಮತ್ತೊಂದು ವಿಶೇಷವೆಂದರೆ, ಕೈಗೆಟುಕುವ ದರದ್ದಾಗಿದ್ದು, ಅತ್ಯುತ್ತಮ ಗುಣಮಟ್ಟ ಮತ್ತು ಪರಿಣಾಮಕಾರಿಯಾಗಿದೆ.ಅಭಿಜಿತ್ ಭಾಸ್ಕರನ್ ಮಾತನಾಡಿ, ಈ ಗ್ಲೋವ್ ಅನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಆರಂಭದಲ್ಲಿ ಕ್ಯಾಮೆರಾ ಆಧಾರಿತ ಸಾಧನವನ್ನು ಅಭಿವೃದ್ಧಿಪಡಿಸಲು ಚಿಂತಿಸಿದ್ದರು. ಆದರೆ, ಅದು ಸಾಕಷ್ಟು ದುಬಾರಿ ಎಂಬ ಕಾರಣಕ್ಕೆ ಆ ಯೋಜನೆ ಕೈಬಿಟ್ಟರು. ಸಾಕಷ್ಟು ಸಂಶೋಧನೆ ನಂತರ ಫ್ಲೆಕ್ಸ್ ಸೆನ್ಸಾರ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪ್ರತಿ ಬೆರಳು ನಾಲ್ಕು ಅಂಶಗಳನ್ನು ಗುರುತಿಸಬಲ್ಲಂತಹ ರೀತಿಯಲ್ಲಿ ಕೈಗವಸನ್ನು ಅಭಿವೃದ್ಧಿಪಡಿಸಲಾಗಿದೆ.

ಅಮೃತಾ ರೋಬೊಟಿಕ್ ರೀಸರ್ಚ್ ಲ್ಯಾಬ್(ಎಆರ್‍ಆರ್‍ಎಲ್)ನ ಅತ್ಯಂತ ಯಶಸ್ಸಿನ ಯೋಜನೆ ಈ ಮುದ್ರ ಗ್ಲೋವ್‍ನ ಅಭಿವೃದ್ಧಿ. ರಿಮೋಟ್ ಮೂಲಕ ರೋಬೊಟ್ ನಿಯಂತ್ರಣಕ್ಕೊಳಪಡುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಲವು ರೀತಿಯ ತಂತ್ರಜÁ್ಞನಗಳನ್ನು ಅಧ್ಯಯನ ಮಾಡಿದರು. ಕೈ ಸನ್ನೆ ಮೂಲಕ ರೋಬೊಟ್ ಕಾರ್ಯನಿರ್ವಹಣೆ ಮಾಡುವ ಆಲೋಚನೆ ಹೊಳೆಯಿತು. ನಂತರ ಈ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿದರು, ಚರ್ಚೆ ನಡೆಸಿದರು. ನಂತರ ಹುಟ್ಟಿಕೊಂಡಿದ್ದೇ ಈ ಮಾತನಾಡುವ ಗ್ಲೋವ್.

Comments are closed.