ರಾಷ್ಟ್ರೀಯ

ದೆಹಲಿಯಲ್ಲಿ ಭಾರತ-ಪಾಕಿಸ್ತಾನ ರೀತಿಯ ಸ್ಥಿತಿ: ಕೇಜ್ರಿವಾಲ್

Pinterest LinkedIn Tumblr

kejriದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟಾಕ್ ಟು ಎಕೆ ಶೋನ ತಮ್ಮ ಮೊದಲ ಆವೃತ್ತಿಯಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾ ದೆಹಲಿಯಲ್ಲಿ ಭಾರತ-ಪಾಕಿಸ್ತಾನದ ರೀತಿಯ ಸ್ಥಿತಿ ನೆಲೆಸಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಶ್ನೋತ್ತರದ ಒಂದು ಭಾಗ ಸೆಷನ್ ದೆಹಲಿಯಲ್ಲಿ ಆಮ್ ಆದ್ಮಿ ಸಾಧನೆಯ ಆತ್ಮಾಲಾಪವಾಗಿದ್ದರೆ ಇನ್ನೊಂದು ಭಾಗವು ಕೇಂದ್ರಸರ್ಕಾರ, ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ದೂರುವುದಕ್ಕೆ ವೇದಿಕೆಯಾಗಿತ್ತು.

ದೆಹಲಿ ಮುಖ್ಯಮಂತ್ರಿಗಳಿಗೆ ಪ್ರಶ್ನೆಗಳು ಹರಿದುಬರುತ್ತಿದ್ದಂತೆ ಫೋನ್ ಲೈನ್ ಜಾಮ್ ಆಗಿತ್ತು. ಮೋದೀಜಿ ನಿಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಒಂದು ಕಡೆ ಹೇಳುತ್ತೀರಿ. ಆದರೆ ದೆಹಲಿಯಲ್ಲಿ ನೀವು ಏನು ಮಾಡುತ್ತಿದ್ದೀರೆಂದು ಪ್ರಚಾರ ಮಾಡಲು ಕೋಟ್ಯಂತರ ರೂ. ಜಾಹೀರಾತು ಪ್ರಕಟಿಸುತ್ತಿದ್ದೀರಿ ಎಂದು ಒಬ್ಬರು ಪ್ರಶ್ನೆಯ ಬಾಣ ಎಸೆದರು.

ಇದಕ್ಕೆ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ, ಸಂಗೀತ ರಚನೆಕಾರ ವಿಶಾಲ್ ದದ್ಲಾನಿ ಜತೆಗಿತ್ತ ಕೇಜ್ರಿವಾಲ್, ಕೇಂದ್ರ ಸರ್ಕಾರವು ಭಾರತ-ಪಾಕಿಸ್ತಾನದ ರೀತಿಯ ಸ್ಥಿತಿಯನ್ನು ದೆಹಲಿಯಲ್ಲಿ ಸೃಷ್ಟಿಸಿರದಿದ್ದರೆ, ನಾವು ನಾಲ್ಕು ಪಟ್ಟು ಸಾಧನೆ ಮಾಡುತ್ತಿದ್ದೆವು ಎಂದು ತಿರುಗೇಟು ನೀಡಿದರು.

ನಮ್ಮ ಸರ್ಕಾರವನ್ನು ಮೋದಿ ಸರ್ಕಾರ ನಿಷ್ಕ್ರಿಯಗೊಳಿಸುತ್ತಿದೆ. ಪೊಲೀಸ್, ನೆಲ ಮತ್ತು ಕಾನೂನು ಸುವ್ಯವಸ್ಥೆ ಮೇಲೆ ಕೇಂದ್ರದ ನೇರ ಹತೋಟಿಯಿಂದ ದೆಹಲಿ ಸರ್ಕಾರ ಸಂಪೂರ್ಣ ಶಕ್ತಿಹೀನವಾಗಿರುವ ಬಗ್ಗೆ ಪಟ್ಟಿ ಮಾಡಿದರು.

ತಮ್ಮ ಆಪ್ತ ರಾಜೇಂದ್ರ ಕುಮಾರ್ ಬಂಧನ ಮತ್ತು ಸಚಿವರ ವಿರುದ್ಧ ಆರೋಪಗಳನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ಹರಿಹಾಯ್ದ ಕೇಜ್ರಿವಾಲ್ ಅಮಿತ್ ಶಾ ಸಿಬಿಐಯನ್ನು ಮುಷ್ಠಿಯಲ್ಲಿಟ್ಟಿದ್ದಾರೆಂದು ನಾವು ಕೇಳಿದ್ದೇವೆ ಎಂದರು. ಟಾಕ್ ಟು ಎಕೆ ಕಾರ್ಯಕ್ರಮವು ಪ್ರಧಾನಿ ಮೋದಿಯ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಉತ್ತರವೆಂದು ಕಾಣಲಾಗಿದ್ದು, ಎರಡು ಗಂಟೆಗಳ ಸೆಷನ್ ವೆಬ್‌ನಲ್ಲಿ ನೇರ ಪ್ರದರ್ಶಿಸಲಾಗಿದೆ.

Comments are closed.