ಕೆಆರ್‌ಪುರ, ಜು. ೧೫ – ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಜಾರ್ಜ್ ಅವರನ್ನು ಸರ್ಕಾರ ರಕ್ಷಣೆ ಮಾಡುತ್ತಿಲ್ಲ. ಅವರ ಆತ್ಮಹತ್ಯೆಗೂ ಜಾರ್ಜ್ ಅವರಿಗೂ ಸಂಬಂಧವಿಲ್ಲ ಎಂದು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕಾಲತ್ತು ವಹಿಸಿ ಮಾತನಾಡಿದ್ದಾರೆ.
ನಾಗವಾರದ ಹೆಣ್ಣೂರು ಕೆರೆ ಜೀವವೈವಿಧ್ಯ ವನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ಅವರ ರಾಜಕೀಯ ಪ್ರಭಾವಕ್ಕಾಗಿ ಜಾರ್ಜ್ ಅವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ 6 ಕೋಟಿ ಜನತೆ ರಾಜೀನಾಮೆ ಕೇಳುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳ ಹೇಳಿಕೆಯೇ ಹೊರತು, ರಾಜ್ಯದ ಜನತೆಯದ್ದಲ್ಲ. 99 ಪ್ರಕರಣಗಳಲ್ಲಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ ಆದರೆ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಕಾನೂನಿನ ಆಶಯ. ಅದರಂತೆ ನಾನು ನಿರಪರಾಧಿಯಾದ ಜಾರ್ಜ್ ಅವರ ರಾಜೀನಾಮೆ ಪಡೆಯುವುದು ಎಷ್ಟು ಸರಿ ಎಂದು ತಿಳಿಸಿದರು.
ಸರ್ಕಾರ ಯಾರ ರಕ್ಷಣೆಗೂ ನಿಂತಿಲ್ಲ, ಆದರೆ ನಿರಪರಾಧಿಗೆ ಶಿಕ್ಷೆ ಕೊಡುವ ನಿರ್ಧಾರಕ್ಕೆ ಮಾತ್ರ ಕೈಹಾಕುವುದಿಲ್ಲ ಎಂದು ಅವರು ತಿಳಿಸಿದರು.
ಈಗಾಗಲೇ ವಿರೋಧ ಪಕ್ಷದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಅವರು ತಿಳಿಸಿದರು.
ಪರಿಸರ ಸಮತೋಲನಕ್ಕೆ ಮನವಿ
ಬತ್ತಿ ಹೋಗಿರುವ ಕೆರೆಗಳನ್ನು ಹಾಗೂ ಒತ್ತುವರಿಯಾಗಿರುವ ಪ್ರದೇಶವನ್ನು ತೆರವು ಮಾಡಿ ಉದ್ಯಾನವನಗಳಾಗಿ ಮಾರ್ಪಡಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
ನಗರದ ಸೌಂದರ್ಯ ಕಾಪಾಡಲು ಉದ್ಯಾನವನಗಳು ಅತಿ ಮುಖ್ಯ. ಅದರಂತೆ ಪ್ರತಿಯೊಬ್ಬರು ಸಸಿಗಳು ನೆಟ್ಟು ಅದನ್ನು ಪೋಷಿಸಬೇಕೆಂದು ಹೇಳಿದರು.
ಪರಿಸರ ಸಮತೋಲನ ನಮ್ಮೆಲ್ಲರ ಜವಾಬ್ದಾರಿ. ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಪರಿಸರ ಸಮತೋಲನ ಸಾಧ್ಯವೆಂದು ಅವರು ತಿಳಿಸಿದರು.
ಹೆಣ್ಣೂರು ಕೆರೆ 34 ಎಕರೆ ವಿಸ್ತೀರ್ಣವಿದ್ದು, ಇದನ್ನು ಮಾದರಿ ಉದ್ಯಾನವನವನ್ನಾಗಿ ನಿರ್ಮಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ನಮ್ಮ ರಾಜ್ಯದಲ್ಲಿ ಶೇ. 21 ರಷ್ಟು ಅರಣ್ಯ ಪ್ರದೇಶವಿದ್ದು, ಅದನ್ನು ಶೇ. 33ಕ್ಕೆ ಏರಿಸುವ ಅಗತ್ಯವಿದೆ. ಇದರಿಂದ ಪರಿಸರ ಸಮತೋಲನಕ್ಕೆ ಬರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್ ಅವರು, ನಾನು ಯಾವ ತಪ್ಪನ್ನೂ ಮಾಡಿಲ್ಲ, ನನ್ನಿಂದ ಏನಾದರೂ ತಪ್ಪಾಗಿದ್ದರೆ ನಾನೇ ಸ್ವಯಂಪ್ರೇರಿತನಾಗಿ ರಾಜೀನಾಮೆ ನೀಡುತ್ತಿದ್ದೆ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವ ರಮಾನಾಥ ರೈ, ಮೇಯರ್ ಮಂಜುನಾಥ ರೆಡ್ಡಿ, ಶಾಸಕ ಬಿ.ಎ. ಬಸವರಾಜು, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಸರ್ಕಾರದ ಕಾರ್ಯದರ್ಶಿ ವಿಜಯಭಾಸ್ಕರ್, ಬಿಬಿಎಂಪಿ ಸದಸ್ಯರಾದ ಆನಂದ್ (ನಂದ), ರಾಧಮ್ಮ ವೆಂಕಟೇಶ್, ಎಸ್.ಜಿ. ನಾಗರಾಜ್, ಮುಖಂಡರಾದ ಸುನಿಲ್ ಕುಮಾರ್ ಸೊಣ್ಣಪ್ಪ, ಜಗದೀಶ್ ರೆಡ್ಡಿ ಇದ್ದಾರೆ.
Comments are closed.