ನವದೆಹಲಿ: ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಲ್ಲಿ ಟಿವಿ ನಿರೂಪಕ, ಹಿರಿಯ ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿ ಸೆಕ್ಸಿಸ್ಟ್ ಪ್ರಶ್ನೆಯೊಂದನ್ನು ಕೇಳಿದ್ದು, ಆ ಪ್ರಶ್ನೆಗೆ ಸಾನಿಯಾ ಖಡಕ್ ಉತ್ತರ ನೀಡಿದ್ದಾರೆ.
ಬುಧವಾರ ಸಾನಿಯಾ ಅವರ ಆತ್ಮಚರಿತ್ರೆ ‘ಏಸ್ ಅಗೇನಸ್ಟ್ ಆಡ್ಸ್’ ಕೃತಿ ಬಿಡುಗಡೆಯಾಗಿತ್ತು. ಈ ಬಗ್ಗೆ ಸಾನಿಯಾರನ್ನು ಮಾತಿಗೆಳೆದ ರಾಜ್‍ದೀಪ್ ಸರ್ದೇಸಾಯಿ, ಆಕೆಯ ಜೀವನದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಪ್ರಶ್ನೆಗಳಲ್ಲಿ ‘ಸೆಕ್ಸಿಸ್ಟ್’ ಧೋರಣೆ ಕಂಡಾಗ ಅದಕ್ಕೆ ಸಾನಿಯಾ ತಕ್ಕ ಉತ್ತರ ನೀಡಿದ್ದರು. ಕೊನೆಗೆ ಪ್ರಶ್ನೆ ಕೇಳಿ ಮುಜುಗರಕ್ಕೀಡಾದ ಸರ್ದೇಸಾಯಿ ವಾಹಿನಿ ಮೂಲಕವೇ ಸಾನಿಯಾಳ ಕ್ಷಮೆ ಕೇಳಬೇಕಾಗಿ ಬಂದಿತ್ತು.
ರಾಜ್‌ದೀಪ್ ಸರ್ದೇಸಾಯಿ ಕೇಳಿದ ಪ್ರಶ್ನೆಗಳಿಗೆ ಸಾನಿಯಾ ನೀಡಿದ ಉತ್ತರವೇನು?
ಸರ್ದೇಸಾಯಿ: ಎಲ್ಲ ಸೆಲೆಬ್ರಿಟಿಗಳಂತೆ ಸಾನಿಯಾ ಯಾವಾಗ ಸೆಟಲ್ ಆಗುವುದು? ದುಬೈನಲ್ಲೋ ಅಥವಾ ಬೇರೆ ಯಾವುದಾದರೂ ದೇಶದಲ್ಲಿಯೋ? ತಾಯ್ತನದ ಬಗ್ಗೆ, ನಿಮ್ಮ ಕುಟುಂಬ ಬೆಳೆಸುವ ಬಗ್ಗೆ ಏನಂತೀರಿ? ಇಂಥಾ ವಿಚಾರಗಳನ್ನು ನಾನು ನಿಮ್ಮ ಪುಸ್ತಕದಲ್ಲಿ ಕಂಡಿಲ್ಲ? ನೀವು ಸೆಟಲ್ ಆಗುವುದಕ್ಕೋಸ್ಕರ ನಿವೃತ್ತಿ ಪಡೆಯಲ್ಲ ಅಂತ ತೋರುತ್ತಿದೆ.
ಸಾನಿಯಾ : ನಾನು ಸೆಟಲ್ ಆಗಿಲ್ಲ ಎಂದು ನಿಮಗೆ ಅನಿಸುತ್ತಿದೆಯೆ?
ಸರ್ದೇಸಾಯಿ: ನಿಮ್ಮ ನಿವೃತ್ತಿ ಬಗ್ಗೆ ಹೇಳುತ್ತಿಲ್ಲ, ನಿಮ್ಮ ಕುಟುಂಬ ಬೆಳೆಸುವ ಬಗ್ಗೆ, ತಾಯ್ತನದ ಬಗ್ಗೆ..ಟೆನಿಸ್ ಜೀವನದ ಹೊರತಾಗಿರುವ ವಿಷಯ ಕೇಳುತ್ತಿದ್ದೇನೆ…
ಸಾನಿಯಾ: ವಿಶ್ವ ನಂಬರ್ 1 ಆಗಿದ್ದರೂ ನಾನು ತಾಯ್ತನವನ್ನು ಆಯ್ಕೆ ಮಾಡಿಲ್ಲವೆಂಬ ನಿರಾಸೆ ನಿಮ್ಮ ದನಿಯಲ್ಲೇ ಗೊತ್ತಾಗುತ್ತಿದೆ.ಆದರೂ ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ಒಬ್ಬ ಮಹಿಳೆಯಾಗಿ ನಾನು ಇಂಥಾ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ, ನಾನು ಮಾತ್ರವಲ್ಲ ಎಲ್ಲ ಮಹಿಳೆಯರೂ ಎದುರಿಸಬೇಕಾಗಿ ಬರುತ್ತದೆ. ಮಹಿಳೆಯೊಬ್ಬರಲ್ಲಿ ಮೊದಲು ಮದುವೆ ಯಾವಾಗ? ಎಂದು ಕೇಳಲಾಗುತ್ತದೆ. ಆಮೇಲೆ ತಾಯ್ತನದ ಬಗ್ಗೆ ಕೇಳುತ್ತಾರೆ. ನಾವೆಷ್ಟೇ ವಿಂಬಲ್ಡನ್ ಗೆದ್ದರೂ, ವಿಶ್ವ ನಂಬರ್ ಒನ್ ಸ್ಥಾನಕ್ಕೇರಿದರೂ ನಾವು ಸೆಟಲ್ ಆಗಿದ್ದೇವೆ ಎಂದು ಅನಿಸುವುದೇ ಇಲ್ಲ, ಮುಂದೊಂದು ದಿನ ಸೆಟಲ್ ಆಗಿ ತಾಯಿಯಾಗುವ ಯೋಚನೆ ಇದ್ದರೆ ನಾನೇ ನಿಮಗೆ ಮೊದಲು ತಿಳಿಸುತ್ತೇನೆ.
ಸರ್ದೇಸಾಯಿ: ನಾನು ಈ ರೀತಿಯ ಪ್ರಶ್ನೆ ಕೇಳಿದ್ದಕ್ಕೆ ಕ್ಷಮೆ ಇರಲಿ. ನಾನು ಪ್ರಶ್ನೆ ಕೇಳಿದ ರೀತಿ ಸರಿಯಿರಲಿಲ್ಲ. ನೀವು ಹೇಳಿದ್ದು ಸರಿ. ಇನ್ನು ಮುಂದೆ ಪುರುಷ ಅಥ್ಲೀಟ್‍ಗೂ ನಾನು ಈ ರೀತಿಯ ಪ್ರಶ್ನೆಯನ್ನು ಕೇಳುವುದಿಲ್ಲ.
ಸಾನಿಯಾ: ಖುಷಿಯಾಗುತ್ತಿದೆ, ನ್ಯಾಷನಲ್ ಚಾನೆಲ್‍ವೊಂದರಲ್ಲಿ ನನ್ನಲ್ಲಿ ಕ್ಷಮೆ ಕೇಳಿದ ಮೊದಲ ಪತ್ರಕರ್ತ ನೀವು.
Comments are closed.