ಕರಾವಳಿ

ಜುಲೈ 15ರಿಂದ19 : ಮಂಗಳಗಂಗೋತ್ರಿ ಕ್ಯಾಂಪಸ್‍‌ನಲ್ಲಿ ಓಪನ್ ಹೌಸ್ ಕಾರ್ಯಕ್ರಮ ಹಾಗೂ ‘ಕ್ಯಾಂಪಸ್ – ಕಾಲೇಜು ನೋಡಬನ್ನಿ ಕಾರ್ಯಕ್ರಮ

Pinterest LinkedIn Tumblr

vv_press_meet_2

ಮಂಗಳೂರು,ಜು.13: ಮಂಗಳೂರು ವಿಶ್ವವಿದ್ಯಾನಿಲಯದ ಅಶ್ರಯದಲ್ಲಿ ಜುಲೈ 15ರಿಂದ 19ರವರೆಗೆ ‘ಕ್ಯಾಂಪಸ್ – ಕಾಲೇಜು ನೋಡಬನ್ನಿ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಕೆ. ಬೈರಪ್ಪ ಅವರು ಮಾಹಿತಿ ನೀಡಿದ್ದಾರೆ.

ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ವಿಶ್ವವಿದ್ಯಾನಿಲಯ ಹಾಗೂ ಕೊಡಗಿನಲ್ಲಿರುವ ಸ್ನಾತಕೋತ್ತರ ಕೇಂದ್ರ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್ ಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ಜುಲೈ 15ರಂದು ಬೆಳಗ್ಗೆ 10:30ಕ್ಕೆ ಮಂಗಳಗಂಗೋತ್ರಿ ಕ್ಯಾಂಪಸ್ ನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿಲಿರುವರು. ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ವಿವಿದ ಸ್ನಾತಕೋತ್ತರ ಕೋರ್ಸ್ ಗಳ ಕುರಿತ ಪ್ರಕಟನೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಿದ್ದಾರೆ.

vv_press_meet_1

ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ಬಾರಿಗೆ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸೌಲಭ್ಯಗಳು, ಪ್ರಾಧ್ಯಾಪಕರ ಸಾಧನೆಗಳು, ಉದ್ಯೋಗಾವಕಾಶಗಳು ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಮಗ್ರ ಮಾಹಿತಿ ನೀಡಲಾಗುವುದು. ಮಂಗಳಗಂಗೋತ್ರಿ ಕ್ಯಾಂಪಸ್ ನಲ್ಲಿ ಜುಲೈ 15 ಮತ್ತು 16ರಂದು ಓಪನ್ ಹೌಸ್ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಮಂಗಳೂರು ವಿವಿ ಆಡಳಿತಕ್ಕೆ ಒಳಪಟ್ಟ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಜು. 18ರಂದು ಮತ್ತು ಕುಶಾಲನಗರ ಸಮೀಪದ ಚಿಕ್ಕಾಳುವಾರು ಸ್ನಾತಕೋತ್ತರ ಕೇಂದ್ರದಲ್ಲಿ ಜು. 19ರಂದು ಮುಕ್ತ ಮುಖಾಮುಖಿ ಕಾರ್ಯಕ್ರಮ ನಡೆಯಲಿದೆ. ವಿವಿಧ ಸ್ನಾತಕೋತ್ತರ ಕೋರ್ಸ್ ಗಳನ್ನು ಆಯ್ಕೆ ಮಾಡಲಿರುವ ವಿದ್ಯಾರ್ಥಿಗಳು ಆಯಾ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಬೋಧ ವರ್ಗದೊಂದಿಗೆ ನೇರ ಸಮಾಲೋಚನೆ ಮಾಡುವ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

vv_press_meet_3

ಕಳೆದ ಬಾರಿ ಪರೀಕ್ಷಾ ಪದ್ಧತಿಯಲ್ಲಿ ಕಂಡು ಬಂದ ಲೋಪ ದೋಷಗಳನ್ನು ಪ್ರತಿ ಹಂತದಲ್ಲೂ ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾದ ಹಿನ್ನೆಲೆಯಲ್ಲಿ ಈ ಬಾರಿ ಸಾಕಷ್ಟು ಸುಧಾರಣೆಯಾಗಿದೆ ಲೋಪಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಕೆಲ ಕಚೇರಿ ಸಿಬ್ಬಂದಿಗೆ ಒಟ್ಟು 8 ತರಬೇತಿ ಕಾರ್ಯಾಗಾರಗಳ ಮೂಲಕ ಮಾಹಿತಿ ನೀಡಲಾಗಿದೆ. ಮಾತ್ರವಲ್ಲದೆ ಪರೀಕ್ಷಾ ಕೊಠಡಿಗಳಲ್ಲಿ ಸಂವೀಕ್ಷರಾಗಿರುವವರು (ಇನ್ವಿಜಿಲೇಟರ್) ವಿದ್ಯಾರ್ಥಿ ತನ್ನ ರಿಜಿಸ್ಟರ್ ನಂಬ್ರ, ಪ್ರಶ್ನೆ ಪತ್ರಿಕೆಯ ಕೋಡ್ ನಂ.ನ್ನು ನಮೂದಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು.

ಕಳೆದ ಬಾರಿ 35 ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ರಿಜಿಸ್ಟರ್ ಸಂಖ್ಯೆಯೇ ನಮೂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂವೀಕ್ಷಕರನ್ನು ಕರೆಯಿಸಿ ಅವರಿಗೆ ದಂಡ ಹಾಕುವ ಮೂಲಕ ಅವರು ನಿರ್ವಹಿಸಬೇಕಿದ್ದ ಕಾರ್ಯದ ಬಗ್ಗೆ ಮನವರಿಕೆ ಮಾಡಲಾಗಿದೆ. ಈ ಬಾರಿ ಇಂತಹ ದೋಷಗಳು ಸಾಕಷ್ಟು ನಿವಾರಣೆಯಾಗಿದ್ದು, ಇಂತಹ ಮೇಲ್ವಿಚಾರಣಾ ಕ್ರಮಗಳಿಂದಾಗಿಯೇ ಪರೀಕ್ಷಾ ಫಲಿತಾಂಶ 10 ದಿನಗಳ ಕಾಲ ತಡವಾಗಿದೆ. ಪ್ರಸಕ್ತ ಸಾಲಿನ ಪದವಿ ಪರೀಕ್ಷೆಗಳ ಫಲಿತಾಂಶವನ್ನು ನಿನ್ನೆಯಿಂದ ಪ್ರಕಟಿಸಲಾಗಿದೆ ಎಂದು ಪ್ರೊ. ಬೈರಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಉದಯ ಕುಮಾರ್, ಮಾಧ್ಯಮ ಸಮಿತಿಯ ಮೋಹನ್ ಚಂದ್ರ ನಂಬಿಯಾರ್,ಕೆ.ಎನ್. ಶ್ರೀಧರ್, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.

Comments are closed.