ಕರಾವಳಿ

ಉಳ್ಳಾಲದಲ್ಲಿ ಹಾಡುಹಗಲೇ ತಂಡದಿಂದ ಯುವಕನ ಮೇಲೆ ಚೂರಿ, ಸೋಡಾ ಬಾಟಲಿ,ರಾಡಿನಿಂದ ಹಲ್ಲೆ

Pinterest LinkedIn Tumblr

ullala_attack_boy_1

ಮಂಗಳೂರು,ಜುಲೈ.13: ಮೂವರ ತಂಡವೊಂದು ಹಾಡುಹಗಲೇ ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಅಳೇಕಲ ನಿವಾಸಿ ನಾಸೀರ್ ಎಂಬವರ ಪುತ್ರ ಮಹಮ್ಮದ್ ಖಮಾಲುದ್ದೀನ್ (25) ಎನ್ನಲಾಗಿದ್ದು, ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಖಮಾಲುದ್ದೀನ್ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈತ ಉಳ್ಳಾಲ ಮಾಸ್ತಿಕಟ್ಟೆಯ ಬೀಫ್ ಸ್ಟಾಲಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಮಹಮ್ಮದ್ ಖಮಾಲುದ್ದೀನ್ ಉಳ್ಳಾಲ ಮಾಸ್ತಿಕಟ್ಟೆಯ ಬೀಫ್ ಸ್ಟಾಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಉಳ್ಳಾಲ ನಿವಾಸಿಗಳು ಎನ್ನಲಾದ ಅರ್ಫಾನ್, ಮಿತ್ತ ನಿಸಾರ್ ಹಾಗೂ ಜಾಫರ್ ಎಂಬವರ ತಂಡ ಏಕಾಏಕಿ ಅಂಗಡಿಗೆ ನುಗ್ಗಿ ಖಮಾಲುದ್ದೀನ್ ಅವರಿಗೆ ಚೂರಿ, ಸೋಡಾ ಬಾಟಲಿ ಹಾಗೂ ರಾಡಿನಿಂದ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ullala_attack_boy_2

ದೂರು ಹಿಂಪಡೆಯಲು ಬೆದರಿಕೆ :

ರಂಝಾನ್ ಉಪವಾಸದ ಸಂದರ್ಭ ಅರ್ಫಾನ್, ನಿಸಾರ್, ಜಾಫರ್ ಸೇರಿದಂತೆ ಮುಖ್ತಾರ್ ಎಂಬವರ ತಂಡ ಇದೇ ಮಾಸ್ತಿಕಟ್ಟೆಯ ಬೀಫ್ ಸ್ಟಾಲಿಗೆ ನುಗ್ಗಿ ಖಮಾಲುದ್ದೀನ್ ಅವರಿಗೆ ಹಲ್ಲೆ ನಡೆಸಿ ರೂ.12,000 ಹಣ ದರೋಡೆಗೈದಿದ್ದರು. ಈ ಬಗ್ಗೆ ಖಮಾಲುದ್ದೀನ್ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಮುಖ್ತಾರ್ ಎಂಬಾತನನ್ನು ಬಂಧಿಸಿದ್ದರು. ಆತ ಈಗಲೂ ಆತ ಜೈಲಿನಲ್ಲಿದ್ದಾನೆ ಎನ್ನಲಾಗಿದೆ.

ಇದರಿಂದ ಕೆರಳಿದ ತಂಡ ನಿರಂತರವಾಗಿ ಖಮಾಲುದ್ದೀನ್ ಗೆ ದೂರು ಹಿಂಪಡೆಯುವಂತೆ ಬೆದರಿಕೆ ಹಾಕುತಿತ್ತು. ಅಲ್ಲದೆ ಆರೋಪಿಗಳ ಪೈಕಿ ಅರ್ಫಾನ್ ಎಂಬಾತನ ತಂದೆ ಜಲ್ದೀ ಸಿದ್ಧೀಕ್ ಎಂಬಾತನೂ ಕರೆ ಮಾಡಿ `ಉಳ್ಳಾಲಕ್ಕೆ ನಾನೇ ಡಾನ್, ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಕೇಸು ಹಿಂಪಡೆಯದಿದ್ದಲ್ಲಿ ಎರಡು ದಿನಗಳಲ್ಲಿ ಹೆಣ ಉರುಳಿಸುವುದಾಗಿ ಬೆದರಿಕೆಯೊಡ್ಡಿದ್ದ. ಈ ಕುರಿತು ಖಮಾಲುದ್ದೀನ್ ಈ ಹಿಂದೆಯೇ ಮೌಖಿಕವಾಗಿ ದೂರು ನೀಡಿದ್ದರು ಎನ್ನಲಾಗಿದೆ..

ಆರೋಪಿಯೋರ್ವನ ತಂದೆಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಸಾರ್ವಜನಿಕರು:

ಗಂಭೀರ ಗಾಯಗೊಂಡ ಖಮಾಲುದ್ದೀನ್ ನನ್ನು ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಿಸುವ ಸಂದರ್ಭ, ಅಲ್ಲಿಗೂ ಜಲ್ದೀ ಸಿದ್ಧೀಕ್ ಮತ್ತು ತಂಡ ಬಂದಿತ್ತು. ಇದನ್ನು ಕಂಡ ಸಾರ್ವಜನಿಕರು ಜಲ್ದೀ ಸಿದ್ಧೀಕ್ ನನ್ನು ಹಿಡಿಯಲು ಮುಂದಾದಾಗ ಆತ ಓಡಲು ಯತ್ನಿಸಿದ್ದಾನೆ. ಆಸ್ಪತ್ರೆಯಿಂದ ದೂರದ 1 ಕಿ.ಮೀ ವರೆಗೂ ಓಡಿಸಿದ ಸಾರ್ವಜನಿಕರು ಬಳಿಕ ಹಿಡಿದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಸಿದ್ಧೀಕ್ ಉಳ್ಳಾಲದಾದ್ಯಂತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯುವಕರ ತಂಡವೊಂದನ್ನು ರಚಿಸಿದ್ದಾನೆ. ಇದರಿಂದ ಉಳ್ಳಾಲದಲ್ಲಿ ಆಗಾಗ್ಗ ಅಶಾಂತಿ ಉಂಟಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Comments are closed.