ಕಾಸರಗೋಡು: ಕಾಸರಗೋಡಿನಿಂದ ನಾಪತ್ತೆಯಾಗಿ ಐಎಸ್ ಉಗ್ರಗಾಮಿ ಸಂಘಟನೆ ಸೇರಿದ್ದಾರೆ ಎಂದು ಶಂಕಿಸಲಾಗುತ್ತಿರುವ ವ್ಯಕ್ತಿಗಳಲ್ಲಿ ಡಾ. ಇಜಾಸ್ ಅವರ ಪತ್ನಿ ರಫೀಲಾ ಭಾನುವಾರ ಸಂಜೆ ಅವರ ಅಪ್ಪನಿಗೆ ದನಿ ಸಂದೇಶ ಕಳುಹಿಸಿದ್ದಾರೆ.
ದನಿ ಸಂದೇಶದಲ್ಲಿ ರಫೀಲಾ, ನಾವು ಉಗ್ರರಾಗಿಲ್ಲ, ಕೆಲಸಕ್ಕಾಗಿ ಅಲ್ಲಿಗೆ ಹೋಗಿದ್ದೇವೆ ಎಂದು ಹೇಳಿದ್ದಾರೆ. ಇಲ್ಲಿ ಕೆಲಸ ಸಿಕ್ಕಿದೆ. ಇಲ್ಲೊಂದು ಫ್ಲಾಟ್ ಖರೀದಿಸಿದ್ದು, ಅದರ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಾವು ಉಗ್ರ ಸಂಘಟನೆ ಸೇರಿದ್ದೇವೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ನಾವಿಲ್ಲಿ ಸುರಕ್ಷಿತರಾಗಿದ್ದೇವೆ ಎಂದು ಹೇಳಿರುವ ರಫೀಲಾ, ಇದೀಗ ಎಲ್ಲಿದ್ದಾರೆ ಎಂಬುದನ್ನು ತಿಳಿಸಿಲ್ಲ.
ಇದೀಗ ಸಂದೇಶದ ಮೂಲವನ್ನು ಅರಸಿ ಇವರನ್ನು ಪತ್ತೆ ಹಚ್ಚಲು ಪೊಲೀಸರು ಯತ್ನಿಸುತ್ತಿದ್ದಾರೆ. ಸಂದೇಶ ಕಳುಹಿಸಿರುವ ಸಂಖ್ಯೆಗೆ ಉತ್ತರಿಸಲು ಅವರ ಅಪ್ಪ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ,
ತೃಕ್ಕರಿಪುರ್ನಿಂದ ಕಾಣೆಯಾದ 12 ಮಂದಿ ನಾಲ್ಕು ಗುಂಪುಗಳಾಗಿ ಇರಾನ್ಗೆ ಹೋಗಿದ್ದರು
ಕಾಸರಗೋಡು ಜಿಲ್ಲೆಯ ತೃಕ್ಕರಿಪುರ್ ನಿಂದ ನಾಪತ್ತೆಯಾದ 12 ಮಂದಿ ನಾಲ್ಕು ಗುಂಪುಗಳಾಗಿ ಇರಾನ್ಗೆ ತೆರಳಿದ್ದರು. ಕೋಝಿಕ್ಕೋಡ್ ನಲ್ಲಿರುವ ಟ್ರಾವೆಲ್ ಏಜೆನ್ಸಿ ಮೂಲಕ ವಿಮಾನ ಟಿಕೆಟ್ಗಳನ್ನು ಬುಕ್ ಮಾಡಿದ್ದ ಇವರು, ಮೇ 24, ಜೂನ್ 27, ಜೂನ್ 28 ಮತ್ತು ಜುಲೈ 3 ರಂದು ನಾಲ್ಕು ಗುಂಪುಗಳಾಗಿ ಟೆಹ್ರಾನ್ಗೆ ಹೋಗಿದ್ದರು ಎಂದು ತನಿಖಾ ದಳ ಪತ್ತೆ ಹಚ್ಚಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ವಿಮಾನ ನಿಲ್ದಾಣದಿಂದ ಇವರು ಪ್ರಯಾಣ ಬೆಳೆಸಿದ್ದರು.
ತೃಕ್ಕರಿಪುರ್ ಪಡನ್ನ ನಿವಾಸಿಗಳಾದ ಡಾ. ಇಜಾಸ್ (34) , ಪತ್ನಿ ರಾಫಿಲ (24) ಇವರ ಒಂದೂವರೆ ವರ್ಷದ ಮಗು , ಇಜಾಸ್ ಅವರ ಸಹೋದರ ಶಿಯಾಸ್ (28), ಪತ್ನಿ ಅಜ್ಮಲ (20), ಒಂದೂವರೆ ವರ್ಷದ ಮಗ, ಪಿಕೆ ಅಶ್ಪಾಕ್ (25) , ಅಶ್ಫಾಕ್ ಪತ್ನಿ ಶಂಸಿಯಾ (24), ಈ ದಂಪತಿಗಳ ಎರಡು ವರ್ಷದ ಮಗಳು, ಎಳಿಂಬಚ್ಚಿ ನಿವಾಸಿ ಮುಹಮ್ಮದ್ ಮನ್ಸಾದ್ (26). ತೃಕ್ಕರಿಪುರ್ ನಿವಾಸಿ ಮರ್ವಾನ್ ಬಕ್ಕರ್ ಇಸ್ಮಾಯಿಲ್ (23), ಪಡನ್ನ ನಿವಾಸಿ ಹಫೀಸುದ್ದೀನ್ (23) ಮೊದಲಾದವರು ಟೆಹ್ರಾನ್ಗೆ ತೆರಳಿದವರಾಗಿದ್ದಾರೆ,
ಹೈದರಾಬಾದ್ನಲ್ಲಿ ಇಬ್ಬರು ಉಗ್ರರ ಬಂಧನ
ಹೈದರಾಬಾದ್ : ಇಸ್ಲಾಮಿಕ್ ಸ್ಟೇಟ್ನ ಇಬ್ಬರು ಉಗ್ರರನ್ನು ರಾಷ್ಟ್ರೀಯ ತನಿಖಾ ದಳ ಹೈದರಾಬಾದ್ನಲ್ಲಿ ಮಂಗಳವಾರ ಬಂಧಿಸಿದೆ. ಐಎಸ್ ಹೈದರಾಬಾದ್ ಘಟಕದ ಮುಖ್ಯಸ್ಥ ಯಾಸಿರ್ ನಿಯಮತುಲ್ಲಾ ಮತ್ತು ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಹಣ ಸಂಗ್ರಹ ಮಾಡುವ ಜವಾಬ್ದಾರಿ ಹೊತ್ತಿರುವ ಅತುಲ್ಲಾ ರೆಹಮಾನ್ ಎಂಬವರನ್ನು ಎನ್ಐಎ ಬಂಧಿಸಿದೆ.
Comments are closed.