
ಇಂಧನ ಚಾಲಿತ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಹುಡುಕುವ ಪ್ರಯತ್ನ ನಿರಂತರ ಜಾರಿಯಲ್ಲಿದೆ. ಹಾಗಿರುವಾಗ ಹೊಸ ಕನಸನ್ನು ಕಟ್ಟಿಕೊಂಡು ಎಂಜಿನಿಯರಿಂಗ್ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳ ತಂಡವೊಂದು ತಮ್ಮ ಕೊಡುಗೆಯನ್ನು ಸಲ್ಲಿಸಿದೆ.
ಗುಜರಾತ್‌ನ ರಾಜಕೋಟ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವು ಪೆಟ್ರೋಲ್, ಡೀಸೆಲ್ ಗಳಂತಹ ಇಂಧನ ಚಾಲಿತ ವಾಹನಗಳಿಗೆ ಬದಲಿಯಾಗಿ ಬರಿ ಗಾಳಿಯಿಂದಲೇ ಓಡುವ ವಾಹನವೊಂದನ್ನು ನಿರ್ಮಿಸಿದೆ.
ಏರ್ ಕಂಪ್ರೆಸರ್ ನಿಂದ ಓಡುವ ಈ ಗಾಡಿಯನ್ನು ನಾಲ್ವರ ವಿದ್ಯಾರ್ಥಿಗಳ ತಂಡವು ಕಳೆದೊಂದು ವರ್ಷದ ಸತತ ಪ್ರಯತ್ನದ ಬಳಿಕ ಅಭಿವೃದ್ಧಿಪಡಿಸಿದೆ. ಇಲ್ಲಿ ಇಂಧನ ಟ್ಯಾಂಕ್ ಬದಲಿಯಾಗಿ ಗಾಳಿಯನ್ನು ತುಂಬಿಡಲಾದ ಏರ್ ಕಂಪ್ರೆಸರ್ ಟ್ಯಾಂಕ್ ಬಳಕೆ ಮಾಡಲಾಗಿದೆ.
ಇನ್ನು ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಹಳೆಯ ಕಾರುಗಳ ಬಿಡಿಭಾಗ, ಚಕ್ರ ಇತ್ಯಾದಿ ಉಪಕರಣಗಳನ್ನು ಬಳಕೆ ಮಾಡಲಾಗಿದೆ. ಟ್ಯಾಂಕ್ ನಲ್ಲಿ ೧೨ ಬಾರಿ ಗಾಳಿಯನ್ನು ತುಂಬಿದರೆ ಒಂದರಿಂದ ಎರಡು ಕೀ.ಮೀ. ವರೆಗೆ ಸಾಗಬಹುದಾಗಿದೆ. ಅದೇ ಹೊತ್ತಿಗೆ ೧೫ ಬಾರಿ ತುಂಬಿಸಿದರೆ ಮೂರು ಕೀ.ಮೀ. ವರೆಗೂ ಸಂಚರಿಸಬಹುದಾಗಿದೆ.
ಗಾಳಿಯಿಂದ ಶಕ್ತಿಯನ್ನು ಉತ್ಪಾದಿಸುವ ಸಲುವಾಗಿ ೧೧೦ ಸಿಸಿ ಎಂಜಿನ್ ಬಳಕೆ ಮಾಡಲಾಗಿದೆ. ಇಲ್ಲಿ ಪೆಟ್ರೋಲ್ ಫೋರ್ ಸ್ಟ್ರೋಕ್ ಎಂಜಿನ್ ಟು ಸ್ಟ್ರೋಕ್ ಆಗಿ ಮಾರ್ಪಾಡುಗೊಂಡಿದೆ. ಸದ್ಯ ಪ್ರಾಥಮಿಕ ಹಂತದಲ್ಲಿರುವ ಯೋಜನೆಗೆ ಹಲವಾರು ಸವಾಲುಗಳು ಎದುರಾಗಿದೆ. ಇವುಗಳಲ್ಲಿ ಹೆಚ್ಚು ದೂರ ಸಾಗಲು ಕಂಪ್ರೇಸರ್ ಸಾಮರ್ಥ್ಯ ಹೆಚ್ಚಿಸುವುದು ಅತ್ಯಗತ್ಯವಾಗಿದೆ.
ಅಲ್ಲದೆ ಕಂಪ್ರೆಸರ್ ನಿಂದ ಹೊರಬರುತ್ತಿರುವ ಶಬ್ದವನ್ನು ಕಡಿಮೆ ಮಾಡಬೇಕಿದೆ. ಅಂತೆಯೇ ಹೆಚ್ಚು ಭಾರ ಹೊರಲು ಸಾಧ್ಯವೇ ಎಂಬುದು ಸಹ ಸವಾಲೆನಿಸಿದೆ. ಒಟ್ಟಿನಲ್ಲಿ ಮಾಲಿನ್ಯ ರಹಿತ ಪರಿಸರ ಸ್ನೇಹಿ ಗಾಳಿಯಿಂದ ಓಡುವ ವಾಹನವು ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬದುನ್ನು ಕಾದು ನೋಡಬೇಕಿದೆ.
Comments are closed.