ಕರ್ನಾಟಕ

ವೃತ್ತಿಧರ್ಮ ಪರಿಪಾಲಿಸಿ ವೈದ್ಯರಿಗೆ ಸಚಿವರ ಸೂಚನೆ

Pinterest LinkedIn Tumblr

dharmaಬೆಂಗಳೂರು, ಜು. ೧೦ – ಸರ್ಕಾರಿ ಆಸ್ಪತ್ರೆಗಳಲ್ಲಿ ವೃತ್ತಿ ಧರ್ಮಪಾಲನೆ ಕಡೆಗೆ ಗಮನ ನೀಡುವಂತೆ ಸೂಚನೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್‌ರವರು ಆಸ್ಪತ್ರೆಗೆ ಬರುವ ರೋಗಿಗಳ ಬದುಕನ್ನು ನರಕವಾಗಿಸಲು ಅವಕಾಶ ಮಾಡಿಕೊಡಬೇಡಿ ಎಂದು ವೈದ್ಯರು ಮತ್ತು ಸಿಬ್ಬಂದಿಗೆ ಮನವಿ ಮಾಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೃತ್ತಿ ಧರ್ಮ ಪಾಲಿಸಿದರೆ ಮಡಿಲು ಕಿಟ್‌ಗಳಲ್ಲಿ ಅಗತ್ಯ ವಸ್ತುಗಳು ಕಾಣೆಯಾಗುವುದಿಲ್ಲ. ಚಿಕೂನ್‌ಗೂನ್ಯ ಔಷಧಿಗಳು ಫಲಕಾರಿಯಾಗದೆ ಇರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಗಳಿಗೆ ಕೂರಲು ಬೆಂಚು, ಕುರ್ಚಿಯ ಸಮಸ್ಯೆ ಎದುರಾಗುವುದಿಲ್ಲ. ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಹಣ ಎಲ್ಲಿ ಹೋಗುತ್ತವೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಮನುಷ್ಯತ್ವವನ್ನು ಮರೆತರೆ ನೀವುಗಳು ಬದುಕಿದ್ದೂ ಸತ್ತಂತೆ ಎಂದು ಹೇಳಿದರು.

ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿ ಧರ್ಮ ಸೇರಿದಂತೆ ಅಜಾಗರೂಕತೆಯಿಂದ ಸರ್ಕಾರಿ ಆಸ್ಪತ್ರೆಗಳು ಕ್ರಮೇಣ ನಿರ್ವೀರ್ಯವಾಗುತ್ತಿವೆ. ಇದರಿಂದಾಗಿಯೇ ಖಾಸಗಿ ಆಸ್ಪತ್ರೆಗಳು ಬೇರು ಬಿಟ್ಟುಕೊಳ್ಳುತ್ತಿವೆ ಎಂದರು.
ಸಾರ್ವಜನಿಕರಿಗೆ, ಬಡವರಿಗೆ ಧೈರ್ಯವಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ವಾತಾವರಣವನ್ನು ಸೃಷ್ಟಿ ಮಾಡಬೇಕು. ಈ ನಿಟ್ಟಿನಲ್ಲಿ ಶ್ರಮಿಸುವ ಅಗತ್ಯವಿದೆ ಎಂದು ಹೇಳಿದರು.
ಶಾಸನ ನಿರುಪಯೋಗಿ
ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಾರ್ವಜನಿಕ ಆರೋಗ್ಯ ಸೇವೆ ಉತ್ತಮಪಡಿಸಲು, ವೈದ್ಯ ಧರ್ಮ ಕಾಪಾಡಲು, ಜನರ ಸೇವೆ ಮಾಡಲು ಸರ್ಕಾರ ಜಾರಿಗೆ ತಂದಿರುವ ಶಾಸನ ಜಾರಿಯಾಗುತ್ತದೆ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.
ಸರ್ಕಾರ ತಂದಿರುವ ಶಾಸನ ಜಾರಿಯಾಗದಿದ್ದರೆ, ಶಾಸನ ತನ್ನ ಕೆಲಸ ಮಾಡದಿದ್ದರೆ ಶಾಸನ ರೂಪಿಸಿಯೂ ವ್ಯರ್ಥ. ಇಂತಹ ಶಾಸನ ಇದ್ದರೆಷ್ಟು ಹೋದರಷ್ಟು ಈ ನಿಟ್ಟಿನಲ್ಲಿ ತಾವು ಗಂಭೀರವಾಗಿ ಚಿಂತಿಸುತ್ತಿರುವುದಾಗಿ ಹೇಳಿದರು.
ಬಹುತೇಕ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಡಾ. ಬಿ.ಸಿ. ರಾಯ್ ಅವರ ಆದರ್ಶವೇ ನೆನಪಿಲ್ಲ. ತಮ್ಮದೇ ಟ್ರಸ್ಟ್ ಮಾಡಿಕೊಂಡು ದೇಶದ ಆಸ್ತಿಯೆಲ್ಲಾ ನಮ್ಮ ಟ್ರಸ್ಟ್‌ನಲ್ಲೇ ಇರಲಿ ಎನ್ನುವ ಮನೋಭಾವ ಹೊಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪ‌ಡಿಸಿದರು.
ಜನಸಂಖ್ಯೆ ನಿಯಂತ್ರಣಕ್ಕೆ ಕೇವಲ ಕಾನೂನಿನಿಂದಷ್ಟೇ ಅಲ್ಲ, ಜನರಲ್ಲಿ ಅರಿವು ಅಗತ್ಯ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೆಣ್ಣಾಗಲಿ ಗಂಡಾಗಲಿ ಎರಡೂ ಒಂದೇ ಎಂಬ ಮನೋಭಾವ ಇರಬೇಕು. ಅದನ್ನು ಬಿಟ್ಟು ಹೆಣ್ಣುಭ್ರೂಣ ಹತ್ಯೆ ನೀಚ ಕೃತ್ಯ ಎಂದು ಹೇಳಿದರು.
ವಿಶ್ವ ಜನಸಂಖ್ಯೆ ನಿಯಂತ್ರಣದ ಬಗ್ಗೆ ಸಾಂಪ್ರದಾಯ ಬೇಡ, ಬದ್ಧತೆ ಇರಲಿ. ಅದಕ್ಕಾಗಿ ಯೋಜನೆ ಹಾಕಿಕೊಳ್ಳುವುದು ಒಳಿತು ಎಂದ ಅವರು, ಹೆಣ್ಣುಭ್ರೂಣ ಹತ್ಯೆಯನ್ನು ಮಾಡುತ್ತಾ ಹೋದರೆ ಲಿಂಗಾನುಪಾತದ ಮೇಲೆ ವ್ಯತ್ಯಾಸವಿರಲಿವೆ. ಇದು ಎಂತಹವರನ್ನೂ ಭಯ ಹುಟ್ಟಿಸುತ್ತವೆ ಎಂದರು.
ವೈದ್ಯರಿಗೆ, ಎಂಜಿನಿಯರ್‌ಗೆ, ಲಾಯರ್‌ಗೆ ಹಾಗೂ ಮಂತ್ರಿಯ ಮಕ್ಕಳಿಗೆ ವರದಕ್ಷಿಣೆಯ ಒಂದೊಂದು `ರೇಟ್ ಫಿಕ್ಸ್’ ಮಾಡಿದ್ದಾರೆ. ಇಂತಹ ಪದ್ಧತಿ ದೂರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ರತನ್ ಕೇಲ್ಕರ್, ಆರೋಗ್ಯ ಇಲಾಖೆ ನಿರ್ದೇಶಕಿ ವಿಮಲಾ ಆರ್. ಪಾಟೀಲ್, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವ ರಮೇಶ್ ಕುಮಾರ್, ಡಾ. ಧಮಯಂತಿ, ಡಾ. ಪರಮೇಶ್ವರಯ್ಯ, ಡಾ. ರಾಮಕೃಷ್ಣನ್ ಅವರನ್ನು ಸನ್ಮಾನಿಸಿದರು.

Comments are closed.