ಕರ್ನಾಟಕ

ವಿಧಾನಸಭೆಯಲ್ಲಿಂದು ಆರಂಭದಲ್ಲೇ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು

Pinterest LinkedIn Tumblr

32

ಬೆಂಗಳೂರು: ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಗದ್ದಲ ಕೋಲಾಹಲಕ್ಕೆ ಎಡೆ ಮಾಡಿಕೊಟ್ಟಿದ್ದರಿಂದ ಸದನ ಮುಂದೂಡಿದ ಪ್ರಸಂಗ ನಡೆಯಿತು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರಿಂದ ಇಂದು ಸದನ ಸಮಾವೇಶಗೊಳ್ಳುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈಎಸ್ವಿ ದತ್ತ ಸೇರಿದಂತೆ ಪ್ರತಿ ಪಕ್ಷಗಳ ಸದಸ್ಯರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಲು ಮುಂದಾದರು.

ಜಗದೀಶ್ ಶೆಟ್ಟರ್ ಮಾತನಾಡಿ, ಗೃಹ ಇಲಾಖೆಯಲ್ಲಿ ಸೂಪರ್ ಮಿನಿಸ್ಟಾರ್ ಇದ್ದಾರೆ. ಈ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಅಧಿಕಾರಿಗಳು ಒಬ್ಬರ ಹಿಂದೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕೆಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಲ್ಲಿ ಮನವಿ ಮಾಡಿದರು. ಅದಕ್ಕೆ ಜೆಡಿಎಸ್ ಸದಸ್ಯರು ದನಿಗೂಡಿಸಿ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದರು.

ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಅಷ್ಟರಲ್ಲಿ ಗೃಹಸಚಿವ ಪರಮೇಶ್ವರ್ ಅವರು ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸ್ವಯಂ ಹೇಳಿಕೆ ನೀಡಲು ಎದ್ದು ನಿಂತರು. ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪಿಸಿ ಮೊದಲು ಚರ್ಚೆಗೆ ಅವಕಾಶ ನೀಡಿ ಆನಂತರ ಹೇಳಿಕೆ ನೀಡಲಿ ಎಂದು ಏರಿದ ದನಿಯಲ್ಲಿ ಹೇಳುತ್ತಿದ್ದಂತೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಕೆ.ಬಿ.ಕೋಳಿವಾಡ ಅವರು ಪ್ರತಿಪಕ್ಷಗಳು ನೀಡಿರುವ ನಿಲುವಳಿ ಸೂಚನೆಯನ್ನು ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಚಾರವಾಗಿ ಚರ್ಚೆ ಮಾಡಲು ಅವಕಾಶ ನೀಡುವುದಾಗಿ ರೂಲಿಂಗ್ ನೀಡಿದರು. ಆದರೆ ಇದಕ್ಕೊಪ್ಪದ ಪ್ರತಿಪಕ್ಷಗಳು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಲು ಪಟ್ಟು ಹಿಡಿದವು. ಈ ನಡುವೆ ಗೃಹ ಸಚಿವರು ತಮ್ಮ ಹೇಳಿಕೆ ನೀಡಲು ಮುಂದಾದರು. ಇದನ್ನು ವಿರೋಧಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಕೆಲಕಾಲ ಧರಣಿ ನಡೆಸಿದರು. ಆ ಸಂದರ್ಭದಲ್ಲಿ ಜಾರ್ಜ್ ರಾಜೀನಾಮೆ ನೀಡಬೇಕು, ಆತ್ಮಹತ್ಯೆ ಭಾಗ್ಯ ಎಂಬ ಫಲಕಗಳನ್ನು ಪ್ರದರ್ಶಿಸಿದ್ದಲ್ಲದೆ ಕಾಗದವನ್ನು ಹರಿದು ತೂರಿದರು.

ಒಂದೆಡೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಲೇ ಇದ್ದರೆ ಮತ್ತೊಂದೆಡೆ ಪರಮೇಶ್ವರ್ ಹೇಳಿಕೆ ಮಂಡಿಸಿದರು. ಈ ಗದ್ದಲದಿಂದ ಸದನ ಸಹಜ ಸ್ಥಿತಿಗೆ ಮರಳದಿರುವುದನ್ನು ಗಮನಿಸಿದ ಸಭಾಧ್ಯಕ್ಷರು ಸದನವನ್ನು ಕೆಲಕಾಲ ಮುಂದೂಡಿದರು.

Comments are closed.