ಕಾಸರಗೋಡು, ಜು.11: ಕಾಸರಗೋಡಿನಿಂದ ಇತ್ತೀಚೆಗೆ ನಾಪತ್ತೆಯಾಗಿ ಭಾರೀ ಆತಂಕಕ್ಕೆ ಕಾರಣವಾಗಿರುವ 16 ಯುವಕರು ಐಸಿಸ್ ಉಗ್ರರನ್ನು ಸೇರಿಕೊಂಡಿರುವುದನ್ನು ಎಳಂಬಚ್ಚಿ ನಿವಾಸಿ ಫಿರೋಸ್ ತನ್ನ ಮನೆಗೆ ಫೋನ್ ಮಾಡಿ ತಿಳಿಸಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಇದರೊಂದಿಗೆ ಕೇರಳದ ಯುವಕರಿಗೆ ಐಸಿಸ್ ನೊಂದಿಗೆ ಸಂಬಂಧವಿದ್ದು, ಕೇರಳದಿಂದ 16 ಯುವಕರು ನಾಪತ್ತೆಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಇದೀಗ ಈ ಸಂಖ್ಯೆ 20ನ್ನು ದಾಟಿದೆ ಎಂಬ ಆತಂಕಕಾರಿ ಅಂಶ ತನಿಖೆಯಿಂದ ಬಯಲಾಗಿದ್ದು, ಇವರೆಲ್ಲರಿಗೂ ಐಸಿಸ್ ಉಗ್ರರ ಸಂಪರ್ಕವಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ.
ಘಟನೆಯ ಕುರಿತು ತನಿಖೆ ನಡೆಸುತ್ತಿರುವ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ಸಿಬ್ಬಂದಿ ಪಡನ್ನ ಹಾಗೂ ತೃಕ್ಕರಿಪುರದಲ್ಲಿ ನಾಪತ್ತೆಯಾದವರ ಮನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದು, ಸಂಬಂಧಿಗಳ ಹೇಳಿಕೆ ಪಡೆದು ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ.
ಇಲ್ಲಿನ ಮನೆಗಳಿಗೆ ಒಂದು ಭಾರತೀಯ ದೂರವಾಣಿ ಸಂಖ್ಯೆ ಮತ್ತು ಮೂರು ವಿದೇಶಿ ದೂರವಾಣಿ ಸಂಖ್ಯೆಗಳಿಂದ ಸಂದೇಶ ಬಂದಿವೆ. ಆದರೆ ಈಗ ಆ ಸಂಖ್ಯೆಗಳು ನಿಷ್ಕ್ರೀಯವಾಗಿವೆ.
ಕಾಸರಗೋಡು ಜಿಲ್ಲೆಯ ತೃಕ್ಕರಿಪುರ, ಪಡನ್ನ ಪಂಚಾಯತ್ ವ್ಯಾಪ್ತಿಯ ಮೂರು ಕುಟುಂಬಗಳಿಂದ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 15 ಮಂದಿ, ಪಾಲಕ್ಕಾಡ್ ಜಿಲೆಯಿಂದ ಸಹೋದರರಿಬ್ಬರು ಹಾಗೂ ಅವರ ಪತ್ನಿಯರಾದ ಎರ್ನಾಕುಳಂ, ತಿರುವನಂತಪುರ ನಿವಾಸಿಗಳು ನಾಪತ್ತೆಯಾಗಿದ್ದಾರೆ.
ಕಾಸರಗೋಡು ತೃಕ್ಕಾರಿಪುರ ಉಡುಂಬುತ್ತಲದ ಅಬ್ದುಲ್ ರಶೀದ್ ಅಬ್ದುಲ್ಲ, ಅವರ ಪತ್ನಿ ಎರ್ನಾಕುಳಂ ನಿವಾಸಿ ಆಯಿಷಾ, ಪಡನ್ನ ನಿವಾಸಿ ಡಾ. ಇಜಸ್, ಪತ್ನಿ ರಪೀಲ್, ಇಜಾಸ್ ನ ಸಹೋದರ ಶಿಯಾಸ್, ಪತ್ನಿ ಅಜ್ಮಲ, ಎಳಂಬಚ್ಚಿ ನಿವಾಸಿ ಮುಹಮ್ಮದ್ ಮನ್ಸಾದ್, ತೃಕ್ಕರಿಪುರದ ಮರ್ವಾನ್, ನಿವಾಸಿಗಳಾದ ಹಯೀಸುದ್ದಿನ್, ಅಶ್ರಫ್, ಎಳಂಬಚ್ಚಿ ನಿವಾಸಿ, ಫಿರೋಸ್ ನಾಪತ್ತೆಯಾಗಿರುವುದಾಗಿ ಅವರ ಸಂಬಂಧಿಕರು ದೂರು ನೀಡಿದ್ದಾರೆ.
ಕಾಸರಗೋಡಿನ ನಿವಾಸಿಗಳು ಐಸಿಸ್ ಗೆ ಸೇರ್ಪಡೆಗೊಳ್ಳಲು ತೃಕ್ಕರಿಪುರ ನಿವಾಸಿ ಅಬ್ದುಲ್ ರಶೀದ್ ಅವರೇ ಸೂತ್ರಧಾರ ಎಂಬ ಶಂಕೆ ಬಲಗೊಳ್ಳುತ್ತಿದೆ. ಆತನ ಪತ್ನಿ ಹಾಗೂ ಎರಡೂವರೆ ವರ್ಷದ ಮಗಳೊಂದಿಗೆ ಅಬ್ದುಲ್ ರಶೀದ್ ಊರು ಬಿಟ್ಟಿದ್ದು, ಊರಿನಿಂದ ನಾಪತ್ತೆಯಾದವರ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ.
‘ರಾ’ ಈತನ ಮೇಲೆ ಕಣ್ಣಿಟ್ಟಿದೆ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ ರಶೀದ್ ಮುಂಬೈಯಲ್ಲಿ ಬಿಸಿನೆಸ್ ಎಂದು ಹೇಳಿ ಒಂದು ತಿಂಗಳ ಹಿಂದೆ ಪತ್ನಿ ಜತೆ ಮನೆಯಿಂದ ಹೊರಟಿದ್ದ. ಇದರ ಬೆನ್ನಲ್ಲೇ ಡಾ. ಇಜಾಸ್, ಪತ್ನಿ ರಫೀಲ, ಮಗಳು ಲಕ್ಷದ್ವೀಪದಲ್ಲಿ ನೌಕರಿಗೆ ಎಂದು ಹೇಳಿ ತೆರಳಿದ್ದರು. ಇಜಾಸ್ ನ ಸಹೋದರ ಶಿಯಾಸ್ ಹಾಗೂ ಕುಟುಂಬ ಮುಂಬಯಿಗೆ ಹೋಗುವುದಾಗಿ ತಿಳಿಸಿ ತೆರಳಿದೆ.

Comments are closed.