
ಶ್ರೀನಗರ, ಜು.೧೦: ಹಿಝ್ಬುಲ್ ಉಗ್ರ ಬುರ್ಹಾನ್ ಹತ್ಯೆ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಉಂಟಾಗಿರುವ ಘರ್ಷಣೆ, ಉದ್ವಿಗ್ನತೆ ಮುಂದುವರಿದಿದ್ದು, ಸತ್ತವರ ಸಂಖ್ಯೆ ೧೬ಕ್ಕೇರಿದೆ. ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ೧೨೦೦ ಅರೆಸೇನಾ ಪಡೆಯನ್ನು ರವಾನಿಸಿ ಹಿಂಸಾಚಾರ ತಹಬದಿಗೆ ತರಲು ಎಲ್ಲ ರೀತಿಯ ಪ್ರಯತ್ನ ಕೈಗೊಂಡಿದೆ. ಕಣಿವೆಯಾದ್ಯಂತ ಕರ್ಫ್ಯೂ ಮುಂದುವರಿದಿದ್ದು, ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕನ್ನಡಿಗರು ಸೇರಿದಂತೆ ಸಾವಿರಾರು ಯಾತ್ರಾರ್ಥಿಗಳು ಸಂಕಷ್ಟದಲ್ಲಿದ್ದಾರೆ.
ನಿನ್ನೆ ನಡೆದ ಬುರ್ಹಾನಿಯ ಅಂತ್ಯಸಂಸ್ಕಾರದಲ್ಲಿ ೩೦ ಸಾವಿರಕ್ಕೂ ಅಧಿಕ ಕಾಶ್ಮೀರಿಗಳು ಪಾಲ್ಗೊಂಡಿದ್ದರು. ಇದುವರೆಗಿನ ಹಿಂಸಾಚಾರಕ್ಕೆ ಒಟ್ಟು ೧೨ ಮಂದಿ ಬಲಿಯಾಗಿದ್ದು, ೨೫೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಎಲ್ಲ ರೀತಿಯ ಮೊಬೈಲ್ ಅಂತರ್ಜಾಲ ಸೇವೆಯನ್ನು ಇಂದು ಕೂಡ ಸ್ಥಗಿತಗೊಳಿಸಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.
ಶನಿವಾರ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿದ್ದು, ಪ್ರತಿಭಟನಕಾರರು ಸರ್ಕಾರಿ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದಾಗ ಹಿಂಸಾಚಾರ ಭುಗಿಲೆದ್ದಿದೆ. ಪೊಲೀಸ್ ಠಾಣೆಗಳು ಹಾಗೂ ನೂರಾರು ವಾಹನಗಳು ಬೆಂಕಿಗಾಹುತಿಯಾಗಿವೆ.
ಉಗ್ರನ ಹತ್ಯೆಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡರೆ, ಗಡಿಯಲ್ಲಿರುವ ಪ್ರತ್ಯೇಕತಾವಾದಿಗಳು ಆತನನ್ನು “ಹುತಾತ್ಮ’ ಎಂದು ಘೋಷಿಸಿ, ಭಾರತ ಸರ್ಕಾರ ಕಾಶ್ಮೀರಿಗಳ ಮೇಲೆ ದೌರ್ಜನ್ಯವೆಸಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ರಾಜ್ಯದ ಜನತೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
“ಬುರ್ಹಾನಿ ಸಾವಿನಿಂದ ಪ್ರಸಕ್ತ ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಯುನೈಟೆಡ್ ಕೌನ್ಸಿಲ್ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಹೇಳಿಕೆ ನೀಡಿದ್ದಾನೆ.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಣಿವೆಯಾದ್ಯಂತ ಕರ್ಫ್ಯೂ ಹೇರಲಾಗಿದೆ. ಶಾಂತಿ ಕಾಪಾಡಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ಅಸ್ಗರ್ ಹುಸೈನ್ ಸಮೂನ್ ಮನವಿ ಮಾಡಿದ್ದಾರೆ.
ಹಿಂಸಾನಿರತರು ಒಟ್ಟು ನಾಲ್ಕು ಪೊಲೀಸ್ ಠಾಣೆಗಳು, ಎರಡು ಸಣ್ಣ ಪೊಲೀಸ್ ಚೌಕಗಳು ಮತ್ತು ತಹಶೀಲ್ದಾರ್ ಕಚೇರಿಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ನಿನ್ನೆ ನಡೆದ ಘರ್ಷಣೆಯ ವೇಳೆ ಮೂವರು ಪೊಲೀಸರು ಕಾಣೆಯಾಗಿದ್ದಾರೆ. ೯೬ ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರು ಸಿಡಿಸಿದ ಗುಂಡು, ಅಶ್ರುವಾಯುಗಳಿಗೆ ೨೦೦ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ. ಕಣಿವೆಯಾದ್ಯಂತ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಮೂಲ ಶಿಬಿರದಲ್ಲಿ ಅಮರನಾಥ ಯಾತ್ರೆಯನ್ನೂ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇಂದು ನಡೆಯಬೇಕಿದ್ದ ಶಾಲಾ ಮಂಡಳಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಾನಿ ಹತ್ಯೆಯನ್ನು ಪ್ರತಿಭಟಿಸಲು ಕಣಿವೆಯಾದ್ಯಂತ ಬಂದ್ಗೆ ಕರೆ ನೀಡಿದ್ದ ಸೈಯದ್ ಅಲಿ ಗೀಲಾನಿ ಹಾಗೂ ಮಿರ್ವೈಝ್ ಉಮರ್ ಫಾರೂಕ್ ಸಹಿತ ಹಲವು ಪ್ರತ್ಯೇಕತಾವಾದಿ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಪ್ರತಿಭಟನಾ ಮೆರವಣಿಗೆಯೊಂದರ ನೇತೃತ್ವ ವಹಿಸುವೆನೆಂದು ಹೇಳಿದ ಬಳಿಕ ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ನ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲಿಕ್ನನ್ನು ಬಂಧಿಸಲಾಗಿದೆ.
ಗುಪ್ತಚರ ನೇತೃತ್ವದ ಪೊಲೀಸ್ ಕಾರ್ಯಾಚರಣೆಯೊಂದರಲ್ಲಿ ವಾನಿ ಹಾಗೂ ಇತರ ಇಬ್ಬರು ಭಯೋತ್ಪಾದಕರನ್ನು ಶುಕ್ರವಾರ ಅಪರಾಹ್ನ ಕೊಲ್ಲಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಂತಹ ಅಂತ್ಯಕ್ರಿಯೆಗಳಿಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಕಾಶ್ಮೀರದಲ್ಲಿ ಉಗ್ರವಾದದ ವಿರುದ್ಧ ಹೋರಾಟ ನಡೆಸುತ್ತಿರುವ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿದೆ. ಸಮಾಧಿಯಿಂದಲೇ ಉಗ್ರವಾದಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿರುವ ಬುರ್ಹಾನ್ನ ಸಾಮರ್ಥ್ಯವು ಆತ ಸಾಮಾಜಿಕ ಮಾಧ್ಯಮಗಳ ಮೂಲಕ ಸಾಧಿಸಿದ್ದ ಎಲ್ಲ ವಿಷಯಗಳನ್ನು ಹಿಂದೆ ಹಾಕಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಟ್ವೀಟಿಸಿದ್ದಾರೆ
ಸಂಕಷ್ಟದಲ್ಲಿ ಕನ್ನಡಿಗರು
ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಹಿಂಸಾಚಾರ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ. ರಾಜ್ಯದಿಂದ ಯಾತ್ರೆಗೆ ತೆರಳಿದ್ದ ೫೦೦ಕ್ಕೂ ಹೆಚ್ಚು ಭಕ್ತರು ಸಂಕಷ್ಟದಲ್ಲಿದ್ದಾರೆ. ಜಮ್ಮು ನಗರದಿಂದ ಯಾರನ್ನೂ ಯಾತ್ರೆಗೆ ಬಿಡುತ್ತಿಲ್ಲ. ಅದೇ ರೀತಿ ಯಾತ್ರೆ ಮುಗಿಸಿದವರನ್ನೂ ವಾಪಾಸು ಕಳುಹಿಸುತ್ತಿಲ್ಲ. ನಿನ್ನೆಯಿಂದಲೇ ನೂರಾರು ಯಾತ್ರಾರ್ಥಿಗಳನ್ನು ಟೆಂಟ್ಗಳಲ್ಲಿ ಇರಿಸಲಾಗಿದೆ. ಭದ್ರತಾ ಪಡೆ ಸಿಬ್ಬಂದಿ ಆಹಾರ, ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದಾರೆ. ಕೆಲವು ಟೆಂಟ್ಗಳಲ್ಲಿ ಆಹಾರದ ಕೊರತೆ ಎದುರಾಗಿದೆ. ಕನ್ನಡಿಗ ಯಾತ್ರಾರ್ಥಿಗಳು ಪರದಾಟುತ್ತಿದ್ದಾರೆ. ಅನಂತನಾಗ್ ಜಿಲ್ಲೆಯಲ್ಲಿ ಮೂರು ದಿನ ಕರ್ಫ್ಯೂ ಘೋಷಿಸಲಾಗಿದೆ.
Comments are closed.