ಬೆಂಗಳೂರು, ಜು. ೧೦- ರಾಜ್ಯ ಬಿಜೆಪಿಯ ಕೋರ್ ಕಮಿಟಿ ಪುನಾರಚನೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿಂದು ಆಯೋಜಿಸಲಾಗಿದ್ದ ಕೇಂದ್ರ ಸಚಿವ ಎಂ. ವೆಂಕಯ್ಯನಾಯ್ಡು ಅವರ ಅಭಿನಂದನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ದೆಹಲಿಗೆ ತೆರಳಿ ಪಕ್ಷದ ವರಿಷ್ಠ ನಾಯಕರ ಜೊತೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಕೋರ್ ಕಮಿಟಿ ಪುನಾರಚನೆ ವಿಚಾರಣೆಯನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.
ರಾಜ್ಯದಲ್ಲಿ ಈ ಸರ್ಕಾರ ಸತ್ತಿದೆ, ರೈತರ ಆತ್ಮಹತ್ಯೆಯ ನಂತರ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ದೂರು ನೀಡಿದ್ದೇವೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯದಿಂದ ವರದಿ ತರಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಡಿವೈಎಸ್‌ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ. ಈ ಸರ್ಕಾರ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಾಳೆ ಬಿಜೆಪಿ ಸದನದಲ್ಲಿ ಹೋರಾಟ ನಡೆಸಲಿದೆ. ಸದನದ ಹೊರಗೂ ಹೋರಾಟ ನಡೆಸಲು ಪಕ್ಷ ತೀರ್ಮಾನಿಸಿದ್ದು, ಹೋರಾಟದ ಸ್ವರೂಪದ ಬಗ್ಗೆ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಯಡಿಯೂರಪ್ಪ ಅವರು ಹೇಳಿದರು.
ಕೊಡುಗೆ ಅಪಾರ
ಇದಕ್ಕೂ ಮೊದಲು ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪನವರು, ರಾಜ್ಯಕ್ಕೆ ವೆಂಕಯ್ಯನಾಯ್ಡು ಅವರ ಕೊಡುಗೆ ಅಪಾರ. ನೆಲ, ಜಲ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಪರವಾಗಿ ಅವರು ದೆಹಲಿಯಲ್ಲಿ ಧ್ವನಿ ಎತ್ತಿದ್ದಾರೆ ಎಂದರು.
ರಾಜ್ಯದ ಬಿಜೆಪಿ ಉಸ್ತುವಾರಿಯಾಗಿ ಅವರು ರಾಜ್ಯದ ಉದ್ದಗಲಕ್ಕೂ ಪ್ರವೇಶ ಮಾಡಿ ಪಕ್ಷ ಸಂಘಟಿಸಿದ ಪರಿಣಾಮವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಸದಾ ನಮಗೆ ಅವರು ಸಹೋದರನ ಸ್ಥಾನದಲ್ಲಿ ನಿಂತು ಪ್ರೇರಣೆ, ಮಾರ್ಗದರ್ಶನ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಪಿ.ಸಿ. ಮೋಹನ್, ವೆಂಕಯ್ಯನಾಯ್ಡು ನಾಲ್ಕನೇ ಬಾರಿಗೆ ರಾಜ್ಯಸ್ಥಾನದಿಂದ ಆಯ್ಕೆಯಾಗಿದ್ದು, ದುಃಖ ತಂದಿದೆ ಅವರು ಕರ್ನಾಟಕದಲ್ಲೇ ಆಯ್ಕೆಯಾಗಬೇಕಿತ್ತು. ಕರ್ನಾಟಕಕ್ಕೆ ಅವರ
ಕೊಡುಗೆ ಅಪಾರ ಎಂದರು.
ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರನ್ನು ರಾಜ್ಯ ಸಭೆಗೆ ಕಳುಹಿಸಲು ಹಲವು ರಾಜ್ಯಗಳು ಮುಂದೆ ಬಂದಿದ್ದವು ಎಂಬುದನ್ನು ಅವರು ನೆನಪು ಮಾಡಿ. ಸತತ ನಾಲ್ಕು ಬಾರಿ ರಾಜ್ಯ ಸಭೆಗೆ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಅವರನ್ನು ಅಭಿನಂದಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
Comments are closed.