ಕರ್ನಾಟಕ

ರಾಜ್ಯದಾದ್ಯಂತ ಈದುಲ್ ಫಿತ್ರ್ ಸಂಭ್ರಮ : ಮುಸ್ಲಿಂ ಬಾಂಧವರಿಗೆ ಗಣ್ಯರ ಶುಭಾಷಯ

Pinterest LinkedIn Tumblr

LITTEL ONE LOOKS ON RAMZAN PRAYER AT KUDUSHBEB MOSQUE ON MILLER ROAD

ಬೆಂಗಳೂರು: ಸಡಗರ ಸಂಭ್ರಮ, ಭಕ್ತಿಭಾವದಿಂದ ಆಚರಿಸುವ ಸಹೋದರ ಭಾವೈಕ್ಯತೆಯ ಸಂಕೇತವಾದ ಉಪವಾಸ ವ್ರತದ ಮೂಲಕ ಹಸಿವಿನ ಅರ್ಥ ಸಾರುವ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‍ನನ್ನು ಭಕ್ತಿಪೂರ್ವಕವಾಗಿ ರಾಜ್ಯಾದ್ಯಂತ ಇಂದು ಆಚರಿಸಲಾಯಿತು. ತಿಂಗಳಿಡೀ ಉಪವಾಸ ವ್ರತ ಆಚರಿಸಿ ಮನುಕುಲದ ಒಳಿತಿಗಾಗಿ ಪ್ರಾರ್ಥಿಸುವ ಈ ಹಬ್ಬವನ್ನು ಮುಸ್ಲಿಂ ಬಾಂಧವರು ವಿಶೇಷವಾಗಿ ಆಚರಿಸುತ್ತಾರೆ. ಇಂದು ಬೆಂಗಳೂರು, ಮೈಸೂರು, ಬೆಳಗಾಂ, ಹುಬ್ಬಳ್ಳಿ, ಧಾರವಾಡ, ಕೋಲಾರ ಚಿಕ್ಕಮಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿ ಪರಸ್ಪರ ಅಲಂಗಿಸಿ ಶುಭ ಕೋರಿದರು.

ಬೆಳಗ್ಗೆಯೇ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಾವೆಲ್ಲ ಮನುಜರು, ದ್ವೇಷ ಅಸೂಯೆಯನ್ನು ದೂರ ಮಾಡೋಣ, ಮೇಲುಕೀಳನ್ನು ತೊಲಗಿಸಿ, ಸಾಮಾರಸ್ಯದ ಬದುಕನ್ನು ಸಾರೋಣ ಇದು ಮುಸ್ಲಿಂ ಸಂದೇಶ ಎಂಬುದನ್ನು ಈ ಹಬ್ಬದ ಮೂಲಕ ಸಾರಿದರು.

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ, ಶಿವಾಜಿನಗರದ ಮಸೀದಿ, ಕೋರಮಂಗಲದ ಈದ್ಗಾ ಮೈದಾನ, ಮೈಸೂರು ರಸ್ತೆಯ ಈದ್ಗಾ ಮೈದಾನ ಸೇರಿದಂತೆ ನಗರದ ಹಲವೆಡೆ ತೆರಳಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಜಗತ್ತಿನ ಕಲ್ಯಾಣಕ್ಕಾಗಿ ಅಲ್ಲಾಹುನನ್ನು ಪ್ರಾರ್ಥಿಸಿದರು.

ಬೆಳಗಾಂ: ರಂಜಾನ್ ಹಬ್ಬದ ಹಿನ್ನೆಯಲ್ಲಿ ಬೆಳಗಾವಿ ಜಿಲ್ಲೆಯ ಅದ್ದೂರಿಯಾಗಿ ರಂಜಾನ್ ಹಬ್ಬ ಆಚರಿಸಲಾಯಿತು. ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮುಸ್ಲಿಂ ಬಾಂಧವರು ಪರಸ್ಪರ ಶುಭ ಕೋರಿದರು. ಪ್ರಾರ್ಥನೆಯಲ್ಲಿ ಶಾಸಕ ಫೀರೋಜ್ ಸೇಠ್ ಮುಂತಾದವರು ಪಾಲ್ಗೊಂಡಿದ್ದರು. ಬೀದರ್ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಎಸ್ಪಿ ಪ್ರಕಾಶ್ ನಿಕ್ಕಂ ಸೇರಿದಂತೆ ಹಲವರು ಭಾಗವಹಿಸಿದ್ದರು. ಗದಗ ನಗರದ ಡಂಬಳ ನಾಕಾ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್, ಜಿಪಂ ಅಧ್ಯಕ್ಷ ವಾಸಪ್ಪ ಕುರಡಗಿ ಮುಂತಾದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಗಣ್ಯರ ಶುಭಾಷಯ:
ರಂಜಾನ್ ಹಬ್ಬಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್ ಸೇರಿದಂತೆ ಹಲವು ಗಣ್ಯರು ಮುಸ್ಲಿಂ ಬಾಂಧವರಿಗೆ ಶುಭ ಕೋರಿದ್ದಾರೆ. ಭಾವೈಕ್ಯತೆಯ ಸಂಕೇತವಾದ ಪವಿತ್ರ ರಂಜಾನ್ ಹಬ್ಬವು ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಹಾರೈಸಿದ್ದಾರೆ.

Comments are closed.