
ಕೃಷ್ಣರಾಜಪೇಟೆ: ತಾಲೂಕಿನ ಸಿಂದಘಟ್ಟ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಗ್ರಾಮದ ಸರ್ಕಾರಿ ಆಸ್ಪತ್ತೆಯ ಹಿಂಭಾಗದಲ್ಲಿರುವ ನೂರು ಅಡಿ ಆಳದ ಬಾವಿಗೆ ಬಿದ್ದರೂ ಸಣ್ಣಪುಟ್ಟ ಗಾಯಗಳಾಗಿ ಬಾವಿಯೊಳಗೆ ನರಳುತ್ತಿದ್ದ ನಾಗರಾಜು(35)ವನ್ನು ಪಟ್ಟಣದ ಅಗ್ನಿಶಾಮಕ ಸಿಬ್ಬಂಧಿಗಳು ಆಶ್ಚರ್ಯಕರ ರೀತಿಯಲ್ಲಿ ರಕ್ಷಣೆ ಮಾಡಿ ಬಾವಿಯಿಂದ ಸುರಕ್ಷಿತವಾಗಿ ಹೊರಗೆ ತೆಗೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳಿಸಿಕೊಡುವ ಮೂಲಕ ಸಿಂದಘಟ್ಟ ಗ್ರಾಮಸ್ಥರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
ನಿನ್ನೆ ರಾತ್ರಿ ಬಾವಿಯ ಕಟ್ಟೆಯ ಮೇಲೆ ಕುಳಿತಿದ್ದ ಮಾನಸಿಕ ಅಸ್ವಸ್ಥನಾದ ಗ್ರಾಮದ ಹಲಗಯ್ಯ ಅವರ ಮಗ ನಾಗರಾಜು ಆಯತಪ್ಪಿ ಸುಮಾರು 80 ಅಡಿ ಆಳದ ಬಾವಿಗೆ ಆಯತಪ್ಪಿ ಬಿದ್ದಿದ್ದಾನೆ. ಬೆಳಿಗ್ಗೆ ಬಾವಿಯೊಳಗಿಂದ ವ್ಯಕ್ತಿಯೊಬ್ಬ ನರಳುತ್ತಿರುವ ಸದ್ದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಪಟ್ಟಣ ಪೋಲಿಸ್ ಠಾಣೆಗೆ ಹಾಗೂ ಅಗ್ನಿಶಾಮಕ ಸಿಬ್ಬಂಧಿಗಳಿಗೆ ಸುದ್ದಿಮುಟ್ಟಿಸಿಡಿದ್ದಾರೆ. ತಕ್ಷಣವೇ ಸನ್ನದ್ಧರಾದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿಗಳಾದ ಬೊಮ್ಮಯ್ಯ ಮತ್ತು ಸಿಬ್ಬಂದಿಗಳು ಸಿಂಧಘಟ್ಟ ಗ್ರಾಮಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ನೀರಿಲ್ಲದ 80 ಅಡಿ ಬಾವಿಯೊಳಗೆ ಬಿದ್ದಿದ್ದ ನಾಗರಾಜುವನ್ನು ರಕ್ಷಣೆ ಮಾಡಿ ಬಾವಿಯಿಂದ ಮೇಲಕ್ಕೆತ್ತಿದರು. ಅಗ್ನಿಶಾಮಕ ಸಿಬ್ಬಂಧಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಬಾವಿಯೊಳಗೆ ಬಿದ್ದಿರುವ ವ್ಯಕ್ತಿಯನ್ನು ಹೊರಕ್ಕೆ ತೆಗೆದ ಧೃಶ್ಯವನ್ನು ಕಣ್ಣಾರೆ ಕಂಡ ಸಿಂದಘಟ್ಟ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂಧಿಗಳ ಸಾಹಸವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಅಗ್ನಿಶಾಮಕ ಠಾಣೆಯ ಸಿಬ್ಬಂಧಿಗಳಾದ ಹರೀಶ್ ವಿಶ್ವಕರ್ಮ, ನರೀಂದ್ರಬಾಬೂ ಮತ್ತು ಶಿವಣ್ಣ ಅವರ ಕಾರ್ಯದಕ್ಷತೆಯನ್ನು ಮುಕ್ತಕಂಠದಿಂದ ಅಭಿನಂದಿಸಿದ ಸಿಂಧಘಟ್ಟ ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ರವಿಕುಮಾರ್ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷ ಚಿದಂಬರ್ ತಾಲೂಕು ಕೇಂದ್ರವಾದ ಕೆ.ಆರ್.ಪೇಟೆ ಪಟ್ಟಣದಲ್ಲಿ ಸುಸಜ್ಜಿತವಾದ ಅಗ್ನಿಶಾಮಕ ಠಾಣೆಯನ್ನು ಹೊಂದಿರುವುದು ನಮ್ಮ ಸೌಭಾಗ್ಯವಾಗಿದೆ. ದಿನದ 24 ಗಂಟೆಗಳ ಕಾಲವೂ ಜನತೆಯ ಸೇವೆಗಾಗಿ ತಮ್ಮ ಜೀವಿತವನ್ನೇ ಮುಡುಪಾಗಿಟ್ಟು ದುಡಿಯುತ್ತಿರುವ ಅಗ್ನಿಶಾಮಕ ಸಿಬ್ಬಂಧಿಗಳ ಶ್ರಮ, ದುಡಿಮೆಯು ಎಲ್ಲಾ ಇಲಾಖೆಗಳಿಗೂ ಮಾದರಿಯಾಗಿದೆ ಎಂದು ಕೊಂಡಾಡಿದರು.
ಬಾವಿಯಿಂದ ಮೇಲಕ್ಕೆ ತಂದ ಗಾಯಾಳು ನಾಗರಾಜುವಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. 80 ಅಡಿಗಳಷ್ಟು ಆಳದ ಕಲ್ಲಿನ ಕಟ್ಟಡವನ್ನು ಹೊಂದಿರುವ ನೀರಿಲ್ಲದ ತೆರೆದ ಬಾವಿಗೆ ಬಿದ್ದಿದ್ದರೂ ನಾಗರಾಜು ಕೇವಲ ಸಣ್ಣ-ಪುಟ್ಟ ತರಚಿದ ಗಾಯದೊಂದಿಗೆ ಪಾರಾಗಿರುವುದು ಒಂದು ಪವಾಡದಂತಿದೆ ಎಂದು ಘಟನೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ತಾಲೂಕು ಪಂಚಾಯಿತಿ ಮಾಜಿಅಧ್ಯಕ್ಷೆ ಶಾಂತಮ್ಮ ಅಗ್ನಿಶಾಮಕ ಠಾಣೆಯ ಸಿಬ್ಬಂಧಿಗಳ ಕಾರ್ಯದಕ್ಷತೆಯನ್ನು ಕೊಂಡಾಡಿದ್ದಾರೆ. ಘಟನೆಯ ಬಗ್ಗೆ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆಯು ದಾಖಲಾಗಿದ್ದು ಸಬ್ಇನ್ಸ್ಪೆಕ್ಟರ್ ಹೆಚ್.ಎನ್.ವಿನಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.