
ಮಂಗಳೂರು, ಜು.4: ನಗರದ ಬಿಲ್ಡರ್ ಒಬ್ಬರ ಮನೆಯಿಂದ ಅವರ ಕೆಲಸದಾಳುಗಳೇ ಸುಮಾರು 18 ಲಕ್ಷ ರೂ. ಮೌಲ್ಯದ ನಗ-ನಗದು ಕಳವುಗೈದಿರುವ ಘಟನೆ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ.
ನಗರದ ಕೊಂಚಾಡಿ ಸಮೀಪದ ನಾಗಕನ್ನಿಕೆ ದೇವಸ್ಥಾನದ ಬಳಿಯ ಬಿಲ್ಡರ್ ನರಸಿಂಹ ರಾವ್ ಎಂಬವವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದ್ದು, ನರಸಿಂಹ ರಾವ್ ಅವರ ಮನೆ ಕೆಲಸದವರಾದ ಉತ್ತರ ಕರ್ನಾಟಕ ಮೂಲದ ಶಿವು ಯಾನೆ ಶಿವಕುಮಾರ್ ಹಾಗೂ ಜ್ಯೋತಿ ಎಂಬವರೇ ಕಳವುಗೈದಿರುವ ಆರೋಪಿಗಳು.
ಇವರು ಜೂನ್ 22ರಂದು ನರಸಿಂಹ ರಾವ್ ಅವರ ಮನೆಗೆ ಕೆಲಸಕ್ಕೆಂದು ಸೇರಿಕೊಂಡಿದ್ದರು. ಶನಿವಾರ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಈ ಕಳವು ಘಟನೆ ನಡೆದಿದ್ದು, ನರಸಿಂಹ ರಾವ್ ಅವರ ಕುಟುಂಬ ಸಂಬಂಧಿಕರ ಮನೆಗೆ ತೆರಳಿತ್ತು ಎಂದು ಹೇಳಲಾಗಿದೆ.
ರಾತ್ರಿ ಸುಮಾರು 9 ಗಂಟೆಗೆ ಇವರು ಮನೆಗೆ ಹಿಂದಿರುಗಿದಾಗ ಕಳವು ಸಂಗತಿ ಬೆಳಕಿಗೆ ಬಂದಿದೆ. ಮನೆಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಆರೋಪಿಗಳ ಕಳ್ಳತನದ ದೃಶ್ಯಾವಳಿಗಳು ಸೆರೆಯಾಗಿವೆ. ಸುಮಾರು 18 ಲಕ್ಷ ರೂ. ನಗದು, ಹಾಗೂ 3 ಮೊಬೈಲ್ಗಳನ್ನು ಕದ್ದು ಪರಾರಿಯಾಗಿದ್ದಾರೆ. ಪ್ರಕರಣ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Comments are closed.