ತುಮಕೂರು,ಜು.3- ಜಗತಿಕವಾಗಿ ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಅರಣ್ಯೀಕರಣವೊಂದೇ ಶಾಶ್ವತ ಪರಿಹಾರ ಎಂದು ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ. ತುಮಕೂರು ವಿವಿ ಆವರಣದಲ್ಲಿ ಕೋಟಿ ವೃಕ್ಷ ಆಂದೋಲನ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಅರಣ್ಯನಾಶದಿಂದ ಹವಾಮಾನದಲ್ಲಿ ವಿಪರೀತ ಬದಲಾವಣೆಯಾಗುತ್ತಿದೆ.ವಾತಾವರಣದ ಉಷ್ಣತೆ ಹೆಚ್ಚುತ್ತಿದೆ. ಕಳೆದ ಬೇಸಿಗೆಯಲ್ಲಿ ಇದರ ಅನುಭವ ನಮಗಾಗಿದೆ.ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಜೀವರಾಶಿಗಳು ಭೂಮಿಯಲ್ಲಿ ಬದುಕುಳಿಯುವುದು ದುಸ್ತರ ಎಂದು ಆತಂಕ ವ್ಯಕ್ತಪಡಿಸಿದರು.
ಗಿಡ ನೆಡುವುದಷ್ಟೇ ಅಲ್ಲ, ನೀರು, ಗೊಬ್ಬರ ಹಾಕಿ ಪ್ರೀತಿಯಿಂದ ಪೋಷಿಸಬೇಕು. ಭೂಮಿಯಲ್ಲಿ 1/3 ರಷ್ಟು ಮರಗಳಿರಬೇಕು. ಆದರೆ, ರಾಜ್ಯದಲ್ಲಿ ಶೇ.1 ರಷ್ಟು ಪ್ರದೇಶ ಮಾತ್ರ ಗಿಡಮರಗಳಿಂದ ಕೂಡಿದ್ದು, ಶೇ.14ರಷ್ಟು ಹಸಿರಿನ ಕೊರತೆಯಿದೆ.ಇದನ್ನು ಸರಿದೂಗಿಸಲು ರಸ್ತೆ ಬದಿ, ನಗರ ವಸತಿ, ಶಾಲಾ-ಕಾಲೇಜು ಆವರಣ, ರೈತರ ಜಮೀನಿನಲ್ಲಿ ಸಸಿಗಳನ್ನು ನೆಡಬೇಕು ಎಂದು ಸೂಚಿಸಿದರು. ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ತುಮಕೂರು ನಗರ ವೇಗವಾಗಿ ಬೆಳೆಯುತ್ತಿದೆ.
ಜಿಲ್ಲೆಯ ಅಭಿವೃದ್ಧಿಗಾಗಿ ಕೈಗೊಂಡಿರುವ ರಾಯದುರ್ಗ ರೈಲುಮಾರ್ಗ, ತುಮಕೂರು-ದಾವಣಗೆರೆ ರೈಲುಮಾರ್ಗ, ನಾಲೆ ವಿಸ್ತರಣೆ, ಪವರ್ಗ್ರಿಡ್, ರಾಷ್ಟ್ರೀಯ ಹೆದ್ದಾರಿ ಹಾಗೂ ಕೆಶಿಪ್ ರಸ್ತೆಗಳ ನಿರ್ಮಾಣ ಮತ್ತು ಅಗಲೀಕರಣ ಕಾಮಗಾರಿಗಳಿಗಾಗಿ ಈಗಾಗಲೇ 4,12,328 ಮರಗಳು ಮಾರಣಹೋಮವಾಗಿವೆ. ಅಸಂಖ್ಯಾತ ಮರಗಳನ್ನು ಕಡಿದಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತಿದೆ.ಇದಕ್ಕೆ ಪರಿಹಾರವಾಗಿ ಕೋಟಿ ವೃಕ್ಷ ಕಾರ್ಯಕ್ರಮ ಎಷ್ಟು ಬಾರಿ ಹಮ್ಮಿಕೊಂಡರೂ ಸಾಲದು ಎಂದು ತಿಳಿಸಿದರು.
ಪಾವಗಡ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ,ಅರಣ್ಯ ಬೆಳೆಸುವುದು ಭಾಷಣಕ್ಕೆ ಸೀಮಿತವಾಗಬಾರದು. ಸರ್ಕಾರದ ಈ ಉತ್ತಮ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಮನವಿ ಮಾಡಿದರು. ವಿವಿಯ ಉಪಕುಲಪತಿ ಪ್ರೊ.ಎ.ಹೆಚ್.ರಾಜಸಾಬ್ ಮಾತನಾಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತರಾಮ್, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್ ಮಾತನಾಡಿದರು. ಮೇಯರ್ ಯಶೋಧಾ ಶ್ರೀನಿವಾಸ್, ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಾಗೇಂದ್ರರಾವ್ ಮತ್ತಿತರರು ಉಪಸ್ಥಿತರಿದ್ದರು.
Comments are closed.