
ಮಂಗಳೂರು : ಸೋಮೇಶ್ವರ ಉಚ್ಚಿಲದ ಬೆಟ್ಟಂಪಾಡಿ(ಎಂಡ್ ಪಾಯಿಂಟ್) ಸಮುದ್ರ ಕಿನಾರೆಯ ಉಪ್ಪುನೀರಿನ ಹೊಳೆಯಲ್ಲಿ ಆದಿತ್ಯವಾರ ಮಧ್ಯಾಹ್ನ ಕಪ್ಪೆಚಿಪ್ಪನ್ನು ಹೆಕ್ಕಲು ಹೋದ ಮೂವರಲ್ಲಿ ಓರ್ವ ವ್ಯಕ್ತಿ ನೀರು ಪಾಲಾಗಿದ್ದು,ಸ್ಥಳೀಯ ಈಜುರಕ್ಷಕರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳಿಂದ ನೀರುಪಾಲಾದ ವ್ಯಕ್ತಿಯ ದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗಿದೆ.
ಕುಂಪಲ ಬಾಲಕೃಷ್ಣ ಮಂದಿರದ ಬಳಿಯ ನಿವಾಸಿ ಅಚ್ಯುತ(43)ಎಂಬವರೇ ನೀರುಪಾಲಾದ ವ್ಯಕ್ತಿ.ನೀರುಪಾಲಾದ ಅಚ್ಯುತ್ ಬಡ ಕೂಲಿ ಕಾರ್ಮಿಕರಾಗಿದ್ದು ಪತ್ನಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕಿದ್ದು ಚಿಕ್ಕ ಮಗ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ಆದಿತ್ಯವಾರದ ರಜಾದಿನದಂದು ಅಚ್ಯುತ್ ತನ್ನ ಸ್ನೇಹಿತರಾದ ಮಾಡೂರಿನ ಪಿಟ್ಟರ್ ಸತೀಶ್ ಮತ್ತು ತಲಪಾಡಿಯ ನಾರಾಯಣ ಎಂಬವರೊಂದಿಗೆ ಆಟೋ ರಿಕ್ಷಾದಲ್ಲಿ ಬೆಟ್ಟಂಪಾಡಿ ಕಡಲಕಿನಾರೆಗೆ ಬಂದಿದ್ದು ಮೂವರೂ ಯಾವುದೇ ಜೀವ ರಕ್ಷಕ ಸಾಮಾಗ್ರಿಗಳನ್ನು ಬಳಸದೆ ಉಪ್ಪುನೀರಿನ ಹೊಳೆಗಿಳಿದು ಕಪ್ಪೆಚಿಪ್ಪನ್ನು ಹೆಕ್ಕುತ್ತಿದ್ದರೆನ್ನಲಾಗಿದೆ.ಈ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದರಿಂದ ನಡುವಿನಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದ್ದು ಇದರ ಅರಿವಿಲ್ಲದ ಅಚ್ಯುತ್ ಕಪ್ಪೆ ಚಿಪ್ಪಿನ ಆಶೆಯಲ್ಲಿ ಮುಂದಕ್ಕೆ ಹೋಗಿದ್ದು ಹೊಳೆಯ ಸುಳಿಯು ಅವರನ್ನು ಅಳಕ್ಕೆ ಸೆಳೆದಿದೆ.ಇದನ್ನು ಕಂಡ ಜೊತೆಗಾರರಾದ ಸತೀಶ್ ಮತ್ತು ನಾರಾಯಣ್ ಅವರು ಈಜು ಗೊತ್ತಿಲ್ಲದಿದ್ದರೂ ಅಚ್ಯುತ್ ಅವರನ್ನು ರಕ್ಷಿಸಲು ಮುಂದಾಗಿ ಅವರೂ ಅಪಾಯಕ್ಕೆ ಸಿಲಿಕಿದ್ದರೆನ್ನಲಾಗಿದೆ.
ಶೌರ್ಯ ಮೆರೆದು ಇಬ್ಬರ ಪ್ರಾಣ ರಕ್ಷಸಿದ ಯುವಕ
ಈ ತಿಂಗಳಿನಲ್ಲಿ ಹೊಳೆಯಲ್ಲಿ ಕಪ್ಪು ಚಿಪ್ಪಿನ(ಕೋಲು)ಕಪ್ಪೆಚಿಪ್ಪುಗಳು ಹೇರಳವಾಗಿ ಸಿಗುವುದರಿಂದ ಜನರು ಕಾಲಹರಣಕ್ಕೋ ಅಥವಾ ಕಪ್ಪೆಚಿಪ್ಪಿನ ಆಶೆಯಲ್ಲಿ ಇಲ್ಲಿಗೆ ಬರುತ್ತಿದ್ದು,ಆದಿತ್ಯವಾರದಂದು ಪಿಲಾರಿನಿಂದ ಆರು ಜನರ ಇನ್ನೊಂದು ತಂಡವು ಕಪ್ಪೆ ಚಿಪ್ಪು ಹೆಕ್ಕಲು ಇಲ್ಲಿಗೆ ಬಂದಿತ್ತು.ಈ ತಂಡದಲ್ಲಿದ್ದ ಕುಂಪಲ ನಿವಾಸಿ ಹರೀಶ್(36)ಎಂಬವರು ಈಜು ಬಲ್ಲವರಾಗಿದ್ದು ಅಚ್ಯುತ್ ಮತ್ತು ಅವರ ಸ್ನೇಹಿತರು ನೀರು ಪಾಲಾಗುತ್ತಿದ್ದದನ್ನು ಗಮನಿಸಿ ತಡವರಿಸಿದೆ ನೀರಿಗೆ ಧುಮುಕಿ ಸತೀಶ್ ಮತ್ತು ನಾರಾಯಣರವರ ಪ್ರಾಣ ರಕ್ಷಿಸಿದ್ದು,ದಡದಲ್ಲಿದ್ದ ಸ್ಥಳೀಯರಾದ ಹಮೀದ್ ಎಂಬವರು ಕ್ಲಪ್ತ ಸಮಯಕ್ಕೆ ತಮ್ಮ ದೊಣಿಯಲ್ಲಿ ಸತೀಶ್,ನಾರಾಯಣ್ ಮತ್ತು ಅವರ ಪ್ರಾಣ ರಕ್ಷಸಿದ ಹರೀಶ್ ಅವರನ್ನು ದಡಕ್ಕೆ ಕರಕೊಂಡು ಬಂದಿದ್ದಾರೆ.
ಬೆಟ್ಟಂಪಾಡಿ ಹೊಳೆಯಲ್ಲಿ ಸ್ಥಳೀಯರಲ್ಲದೆ,ದೂರದ ಮಂಜೇಶ್ವರದವರೂ ಈಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸದೆ ಕಪ್ಪೆಚಿಪ್ಪು ಹೆಕ್ಕುತ್ತಿದ್ದು ಪ್ರಾಣಾಪಾಯಕ್ಕೆ ಎಡೆ ಮಾಡಿಕೊಡುತ್ತಿರುವುದರ ಬಗ್ಗೆ ಪೊಲೀಸರು ಎಚ್ಚೆತ್ತು ಹೊಳೆಗೆ ಇಳಿಯುವುದನ್ನು ನಿರ್ಬಂಧಿಸುವ ಅಗತ್ಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ.ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಅಚ್ಯುತ್ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
Comments are closed.