
ಬೆಂಗಳೂರು: ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ರೌನಕ್ ಬ್ಯಾನರ್ಜಿಯ ಆತ್ಮಹತ್ಯೆಗೆ ಸಹಪಾಠಿಯೊಬ್ಬ ಮಾಡುತ್ತಿದ್ದ ಅಪಮಾನ ಕಾರಣವಾಗಿರುವುದು ಪತ್ತೆಯಾಗಿದೆ.
ಜೆ.ಪಿ.ನಗರದ ಅಪಾರ್ಟ್‌ಮೆಂಟ್‌ನ ೧೦ನೆ ಮಹಡಿಯಿಂದ ಜೂ.೨೯ರಂದು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರೌನಕ್ ಬ್ಯಾನರ್ಜಿಯು ಸಹಪಾಠಿಯು ಮಾಡುತ್ತಿದ್ದ ಅಪಮಾನದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿರುವ ಪತ್ರ ಪೊಲೀಸರಿಗೆ ದೊರೆತಿದ್ದು ತನಿಖೆ ಕೈಗೊಂಡಿದ್ದಾರೆ.
ಅಪಮಾನ ಮಾಡಿರುವ ಸಹಪಾಠಿಯು ಅಪ್ರಾಪ್ತ ವಯಸ್ಕನಾಗಿರುವುದರಿಂದ ಪ್ರಕರಣವು ಸೂಕ್ಷ್ಮ ವಿಷಯವಾಗಿದ್ದು ಎಚ್ಚರಿಕೆಯ ಹೆಜ್ಜೆಯನ್ನಿಡಲು ಪೊಲೀಸರು ನಿರ್ಧರಿಸಿದ್ದಾರೆ.
ಮೃತ ಬಾಲಕನ ಪೋಷಕರು ಡೆಟ್‌ನೋಟ್‌ನಲ್ಲಿನ ಸಹಪಾಠಿಯ ಅಪಮಾನವನ್ನು ದೃಢೀಕರಿಸಿ, ಶಾಲಾ ಆಡಳಿತ ಮಂಡಳಿ ಹಾಗೂ ಬಾಲಕನಿಗೆ ಅಪಮಾನ ಮಾಡುತ್ತಿದ್ದ ಸಹಪಾಠಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಹಪಾಠಿಯೊಬ್ಬ ನೀಡುತ್ತಿರುವ ಅಪಮಾನವನ್ನು ನನಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಆತನೊಂದಿಗೆ ಕೆಲ ಸ್ನೇಹಿತರು ಸೇರಿದ್ದಾರೆ ಇದನ್ನು ನನಗೆ ತಡೆಯಲಾಗುತ್ತಿಲ್ಲ ಎಂದು ರೌನಕ್ ಬ್ಯಾನರ್ಜಿ ನಮ್ಮ ಬಳಿ ಹೇಳುತ್ತಿದ್ದ ಅಲ್ಲದೇ ಆತನ ಡೆತ್‌ನೋಟ್‌ನಲ್ಲಿ ಅದೇ ವಿಷಯವಿರುವುದರಿಂದ ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಗ ಶಾಲಾ ವಾಹನದಲ್ಲಿ ಮನೆಗೆ ಬರುವಾಗ ಮತ್ತು ಶಾಲಾ ಸಮಯದಲ್ಲಿ ಇತರ ಕೆಲವು ವಿದ್ಯಾರ್ಥಿಗಳು ಹಿಂಸೆ ನೀಡುತ್ತಿರುವುದು ಆತನಿಗೆ ಬಹಳ ನೋವು ನೀಡಿದಿರುವುದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ ಎಂದು ಬಾಲಕನ ಪೋಷಕರಾದ ಚಂದ್ರಜಾಯಿ ಮತ್ತು ರುಮಿ ಬ್ಯಾನರ್ಜಿ ಆರೋಪಿಸಿದ್ದಾರೆ.
ಈ ಘಟನೆಯನ್ನು ಲಘವಾಗಿ ಪರಿಗಣಿಸಬಾರದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಬಾಲಕನ ತಂದೆ ಚಂದ್ರ ಜಾಯಿ ಹೇಳುತ್ತಾರೆ.ಕೃತ್ಯವನ್ನು ಸೂಕ್ಷ್ಮವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.
Comments are closed.