ಕರ್ನಾಟಕ

ಬಿಜೆಪಿಯ ಅತೃಪ್ತರ ಮಂತ್ರಾಲೋಚನೆ

Pinterest LinkedIn Tumblr

Bjpಬೆಂಗಳೂರು, ಜು. ೧- ಬಿಜೆಪಿಯ ನೂತನ ಪದಾಧಿಕಾರಿಗಳ ನೇಮಕದ ವಿರುದ್ಧ ಬಂಡಾಯ ಎದ್ದಿರುವ ಬಿಜೆಪಿಯ ಭಿನ್ನಮತೀಯ ಮುಖಂಡರು ಇಂದು ಮತ್ತೆ ಸಭೆ ಸೇರಿ ತಮ್ಮ ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸಿದರು.

ಪಕ್ಷದಲ್ಲಿ ಮೂಡಿರುವ ಅಸಮಾಧಾನ, ಅತೃಪ್ತಿಗೆ ಪರಿಹಾರ ಕಂಡುಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಾಳೆ ಶಾಸಕರ, ಸಂಸದರ ಸಭೆ ಕರೆದಿರುವ ಬೆನ್ನಲ್ಲೆ ಇಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಈಶ್ವರಪ್ಪ ಅವರ ನಿವಾಸದಲ್ಲಿ ಸಭೆ ಸೇರಿರುವ ಭಿನ್ನಮತೀಯ ಮುಖಂಡರು ನಾಳಿನ ಸಭೆಯಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಸಿದರಾದರೂ ಸಭೆಗೆ ಗೈರು ಹಾಜರಾಗುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ನಾಳೆ ಬೆಳಿಗ್ಗೆ ಈ ಬಗ್ಗೆ ತೀರ್ಮಾನಕ್ಕೆ ಬರುವ ಸಾಧ್ಯತೆಗಳಿವೆ.
ಪದಾಧಿಕಾರಿಗಳ ನೇಮಕಾತಿ ಸಂದರ್ಭದಲ್ಲಿ ತಮ್ಮನ್ನು ಒಂದು ಮಾತು ಕೇಳಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಈ ಮುಖಂಡರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಕಳೆದ ಮೂರು ದಿನಗಳ ಹಿಂದೆ ಪಕ್ಷದ ಕಚೇರಿಯಲ್ಲೇ ಸಭೆ ನಡೆಸಿ ವರಿಷ್ಠರಿಗೆ ದೂರು ನೀಡುವ ತೀರ್ಮಾನ ಕೈಗೊಂಡಿದ್ದರು.
ಭಿನ್ನಮತೀಯ ಮುಖಂಡರ ಸಭೆ ನಡೆದ ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಎಲ್ಲರನ್ನು ಕೇಳಿಯೇ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿ ಆದರೂ ಅಸಮಾಧಾನಗೊಂಡಿರುವ ಮುಖಂಡರ ಜೊತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಾಗಿ ಹೇಳಿ ಜು. 2 ರಂದು ಎಲ್ಲ ಪ್ರಮುಖ ಮುಖಂಡರ, ಶಾಸಕರ, ಸಂಸದರ ಸಭೆಯನ್ನು ಕರೆಯುವುದಾಗಿ ಪ್ರಕಟಿಸಿದರು.
ನಾಳಿನ ಈ ಮಹತ್ವದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಬೇಕೇ ಅಥವಾ ಈ ಸಭೆಯಿಂದ ದೂರ ಉಳಿದು ವರಿಷ್ಠರ ಬಳಿಯೇ ಎಲ್ಲವನ್ನೂ ಬಗೆಹರಿಸಿಕೊಳ್ಳಬೇಕೇ ಎಂಬ ಬಗ್ಗೆ ಈಶ್ವರಪ್ಪನವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ನಾಳಿನ ಸಭೆಯಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಇನ್ನು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
ಎಲ್ಲ ಮುಖಂಡರ ಜೊತೆ ಚರ್ಚಿಸಿ ನಾಳೆ ಬೆಳಿಗ್ಗೆ ಸಭೆಯಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಯಕರೊಬ್ಬರು ತಿಳಿಸಿದರು.
ಇಂದಿನ ಸಭೆಯಲ್ಲಿ ಶಾಸಕ ಸಿ.ಟಿ ರವಿ, ವಿಧಾನ ಪರಿಷತ್ ಸದಸ್ಯ ಭಾನು ಪ್ರಕಾಶ್, ಮುಖಂಡರಾದ ನಿರ್ಮಲ್ ಕುಮಾರ್ ಸುರಾನಾ, ಸೋಮಣ್ಣ ಬೇವಿನ ಮರದ, ಸೊಗಡು ಶಿವಣ್ಣ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು ಎನ್ನಲಾಗಿದೆ.

Comments are closed.