ಬೆಂಗಳೂರು, ಜು.೧: ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನವನ್ನು ಬಳಕೆ ಮಾಡಬೇಕು ಎಂಬ ಭಾರತೀಯ ವಾಯು ಸೇನೆಯ ದಶಕಗಳ ಕನಸು ಇದೀಗ ನನಸಾಗಿದ್ದು, ಇಂದು ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಅಧಿಕೃತವಾಗಿ ಸೇನೆಗೆ ಸೇರ್ಪಡೆಯಾಗಿದೆ. ಈ ಮೂಲಕ ಎಚ್‌ಎಎಲ್ ಹೊಸ ಇತಿಹಾಸ ಸೃಷ್ಟಿಸಿದ್ದು, ರಕ್ಷಣಾ ಕ್ಷೇತ್ರ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ವಿಮಾನ ಹಸ್ತಾಂತರಕ್ಕೂ ಮೊದಲು ಸರ್ವಧರ್ಮ ಪ್ರಾರ್ಥನೆ ನೆರವೇರಿತು. ಎಚ್‌ಎಎಲ್ ಜನರಲ್ ಮ್ಯಾನೇಜರ್ ಶ್ರೀಧರನ್ ಅವರು ಏರ್ ಕಮಾಂಡಿಂಗ್ ಚೀಫ್ ಜಸ್ಟೀರ್ ವಾಲಿಯಾ ಅವರಿಗೆ ಏರ್‌ಕ್ರಾಫ್ಟ್ ಎಸ್ಟಾಬ್ಲಿಷ್‌ಮೆಂಟ್ ಕೇಂದ್ರದಲ್ಲಿ ವಿಮಾನದ ಮಾದರಿ ಮತ್ತು ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು.
ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮಾಧವ ಗಂಗಾಚಾರಿ ಮೊದಲ ಹಾರಾಟ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಎಚ್‌ಎಎಲ್ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಅಧಿಕಾರಿಗಳ ಮುಖದಲ್ಲಿ ಯಶಸ್ವಿನ ಹರ್ಷ ಎದ್ದುಕಾಣುತ್ತಿತ್ತು. ಸಾರ್ವಜನಿಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಏರೋನಾಟಿಕಲ್ ಡೆವಲಪ್‌ಮೆಂಟ್ ಅಥಾರಿಟಿ ನಿರ್ಮಿಸಿರುವ ಈ ವಿಮಾನಕ್ಕೆ ಎಚ್‌ಎಎಲ್ ಅಂತಿಮ ಸ್ವೂರೂಪ ನೀಡಿದೆ. ಮಿಗ್ ಸರಣಿ ಯುದ್ಧ ವಿಮಾನದ ಜಾಗದಲ್ಲಿ ತೇಜಸ್ ಇನ್ನು ಮುಂದೆ ಕಾರ್ಯಾಚರಣೆ ನಡೆಸಲಿದೆ. ಈ ಮೊದಲು ಲಘ ಯುದ್ಧ ವಿಮಾನಕ್ಕಾಗಿ ವಿದೇಶವನ್ನು ಅವಲಂಬಿಸಬೇಕಿತ್ತು.
ರೋಮಾಂಚನಕಾರಿ ಪ್ರದರ್ಶನ
ತೇಜಸ್ ವಿಮಾನವನ್ನು ವಾಯುಸೇನೆಗೆ ಸೇರ್ಪಡೆಗೊಳಿಸು ಅಧಿಕೃತ ಸಮಾರಂಭದಲ್ಲಿ ತೇಜಸ್ ವಿಮಾನ ರೋಮಾಂಚನಕಾರಿ ಪ್ರದರ್ಶನ ನೀಡಿತು. ಭಾರೀ ಶಬ್ದದೊಂದಿಗೆ ಆಕಾಶಕ್ಕೆ ಚಿಮ್ಮದ ವಿಮಾನ ಮೇಲೆ ಹೋಗುತ್ತಿದ್ದಂತೆ ತಲೆಕೆಳಗೆ ಮಾಡಿ ಪ್ರದರ್ಶಿಸಿದ ಕಸರತ್ತು ನೋಡುಗರ ಮೈಜುಮ್ಮೆನಿಸುವಂತೆ ಮಾಡಿತು. ಸಾರ್ವಜನಿಕರ ಹರ್ಷೋದ್ಗಾರ ಮತ್ತು ಕೇಕೆ ತೇಜಸ್‌ನ ಆರ್ಭಟದ ನಡುವೆ ಕರಗಿಹೋಯಿತು.
ಎಚ್‌ಎಎಲ್ ಅಧ್ಯಕ್ಷ ಟಿ.ಸುವರ್ಣ ರಾಜು ಸುದ್ದಿಗಾರರೊಂದಿಗೆ ಮಾತನಾಡಿ, ವಾರ್ಷಿಕ ೧೬ ಯುದ್ಧ ವಿಮಾನ ತಯಾರಿಸಲು ಎಚ್‌ಎಎಲ್ ಸಮರ್ಥವಾಗಿದ್ದು, ೨೦೧೮ರ ವೇಳೆಗೆ ಇನ್ನಷ್ಟು ಮೂಲಸೌಕರ್ಯ ಮತ್ತು ತಂತ್ರಜ್ಞಾನಕ್ಕೆ ಇಲ್ಲಿಗೆ ಸೇರ್ಪಡೆಯಾಗಲಿದೆ. ವಾಯುಪಡೆಯಿಂದ ೮೦ ತೇಜಸ್ ವಿಮಾನಕ್ಕೆ ಬೇಡಿಕೆ ಇದ್ದು, ವರ್ಷದಲ್ಲಿ ೧೬ರಂತೆ ವಿಮಾನ ಪೂರೈಸಲಾಗುವುದು. ಹೊರ ದೇಶದಿಂದಲೂ ಈ ವಿಮಾನಕ್ಕೆ ಬೇಡಿಕೆ ಇದ್ದು, ಸದ್ಯ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಏರ್ ಮಾರ್ಷಲ್ ಜಸ್ಟೀರ್ ವಾಲಿಯಾ ಮಾತನಾಡಿ, ಮಿಗ್ ವಿಮಾನದಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿತ್ತು. ಆದರೆ ತೇಜಸ್‌ನಲ್ಲಿ ಇಂತಹ ಯಾವುದೇ ಸಮಸ್ಯೆ ಇರುವುದಿಲ್ಲ. ರಕ್ಷಣಾ ಕ್ಷೇತ್ರದಲ್ಲಿ ಇದು ಹೊಸ ಮೈಲುಗಲ್ಲು ಎಂದು ಹೇಳಿದರು.
ಕ್ಯಾಪ್ಟನ್ ಮಾಧವ ಗಂಗಾಚಾರಿ ಮಾತನಾಡಿ, ತೇಜಸ್‌ನಲ್ಲಿ ಮೊದಲ ಹಾರಾಟ ನಡೆಸಿದ್ದು ಹೆಮ್ಮೆ ತಂದಿದೆ. ಇದು ಮೀರಾಜ್ ೨೦೦೦ಕ್ಕಿಂತ ಇದು ಭಿನ್ನವಾಗಿದೆ ಎಂದು ತನ್ನ ಅನುಭವ ಹಂಚಿಕೊಂಡಿದ್ದಾರೆ
ತೇಜಸ್ ಇತಿಹಾಸ
ತೇಜಸ್ ಯುದ್ಧ ವಿಮಾನ ಈ ಹಿಂದೆಯೇ ವಾಯು ಸೇನೆಗೆ ಸೇರ್ಪಡೆಗೊಳ್ಳಬೇಕಿತ್ತಾದರೂ, ತಾಂತ್ರಿಕ ದೋಷ ಮತ್ತು ಕಾರಣಾಂತರಗಳಿಂದ ತೇಜಸ್ ವಾಯು ಸೇನೆ ಸೇರ್ಪಡೆ ಮುಂದಕ್ಕೆ ಸಾಗುತ್ತಾ ಬಂದಿತ್ತು. ಇದೀಗ ಅಂತಿಮವಾಗಿ ತನ್ನ ಎಲ್ಲ ತೊಡಕಗಳನ್ನು ನಿವಾರಿಸಿಕೊಂಡಿರುವ ತೇಜಸ್ ಅಧಿಕೃತವಾಗಿ ಇಂದು ವಾಯು ಸೇನೆಗೆ ಸೇರ್ಪಡೆಯಾಗಿದೆ. ಸ್ವದೇಶಿ ಯುದ್ಧ ವಿಮಾನ ನಿರ್ಮಿಸಬೇಕೆಂಬ ಆಲೋಚನೆ ೧೯೭೦ರಲ್ಲೇ ಭಾರತ ಸರ್ಕಾರಕ್ಕೆ ಬಂದಿತ್ತಾದರೂ, ಇದಕ್ಕೆ ಸ್ಪಷ್ಟ ರೂಪ ಸಿಕ್ಕಿದ್ದು ೧೯೮೦ ದಶಕದಲ್ಲಿ.
೩೩ ವರ್ಷಗಳಲ್ಲಿ ಕಾರಣಾಂತರಗಳಿಂದ ವಿಮಾನ ನಿರ್ಮಾಣ ವಿಳಂಬಗೊಂಡಿತ್ತು. ಇದೀಗ ಸೇನೆಯಲ್ಲಿ ಬಳಕೆಯಲ್ಲಿರುವ ಮಿಗ್-೨೫ರ ಬದಲಾಗಿ ತೇಜಸ್ ಸೇರ್ಪಡೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಚ್‌ಎಎಲ್ ಸಂಸ್ಥೆ ಒಟ್ಟು ೪ ತೇಜಸ್ ವಿಮಾನಗಳನ್ನು ಹಸ್ತಾಂತರಿಸಲಿದ್ದು, ಮು೦ದಿನ ಸಾಲಿನಲ್ಲಿ ೮ ವಿಮಾನಗಳ ಪೂರೈಕೆ ಮಾಡಲಾಗುತ್ತದೆ.
ಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಎಂಬ ಖ್ಯಾತಿಗೆ ಭಾಜನವಾಗಿರುವ ತೇಜಸ್ ಯುದ್ಧ ವಿಮಾನ ಸೇರ್ಪಡೆಗೆ ೩೩ ವರ್ಷಗಳು ಬೇಕಾಯಿತು. ೧೯೯೦ರ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯು ತೇಜಸ್‌ನ ವಿನ್ಯಾಸ ತಯಾರಿಸಿ ಎಚ್‌ಎಎಲ್‌ಗೆ ಹಸ್ತಾಂತರಿಸಿತ್ತು. ಇದಕ್ಕೆ ಡಿಆರ್‌ಡಿಒ ಸಂಸ್ಥೆಯ ವಿಜ್ಞಾನಿಗಳು ದೇಶಿ ನಿರ್ಮಿತ ಎಂಜಿನ್ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಇಂಜಿನ್‌ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ವಿಳಂಬವಾದ್ದರಿಂದ ವಿಮಾನ ತಯಾರಿಕಾ ಯೋಜನೆಯೂ ತಡವಾಯಿತು. ಅಂತಿಮವಾಗಿ ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡ ತೇಜಸ್ ಮಾದರಿ ವಿಮಾನ ಕೊನೆಗೂ ಸಿದ್ಧಗೊಂಡು ಈ ವರ್ಷ ಹಾರಾಟಕ್ಕೆ ಅನುಮತಿ ಸಿಕ್ಕಿದೆ. ಇದೀಗ ವಾಯುಸೇನೆ ಕೂಡ ಗುಣಮಟ್ಟದ ಬಗ್ಗೆ ಸಂತಸ ವ್ಯಕ್ತಪಡಿಸಿದೆ.
ಸ್ವತಃ ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಅವರು ಈ ಹಿಂದೆ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಮೊದಲ ಬಾರಿ ಹಾರಾಟ ನಡೆಸಿ, ಭಾರತೀಯ ವಾಯುಪಡೆಗೆ ಸೇರಿಸಿಕೊಳ್ಳಲು ತೇಜಸ್ ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಮೂರು ಮಾದರಿಯ ತೇಜಸ್ ಯುದ್ಧ ವಿಮಾನ ಕರ್ತವ್ಯಕ್ಕೆ ಸಿದ್ಧ
ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಅದರಲ್ಲಿ ಒಂದು ತರಬೇತಿಗೆ ಬಳಸುವ ಯುದ್ಧ ವಿಮಾನವಾದರೆ, ಮತ್ತೊಂದು ವಾಯುಪಡೆಗೆ ಹಾಗೂ ಇನ್ನೊಂದು ನೌಕಾಪಡೆಗೆ ಬಳಸುವ ವಿಮಾನವಾಗಿದೆ. ತರಬೇತಿ ವಿಮಾನದಲ್ಲಿ ಎರಡು ಆಸನದ ವ್ಯವಸ್ಥೆಯಿದ್ದರೆ, ಉಳಿದ ಎರಡು ಮಾದರಿಗಳಲ್ಲಿ ಒಂದೇ ಆಸನವಿರುತ್ತದೆ. ಇವು ರಾಕೆಟ್, ಕ್ಷಿಪಣಿ, ಬಾಂಬ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
Comments are closed.