
ಬೆಂಗಳೂರು: ಪವರ್ ಸ್ಟಾರ್ ಪುನೀತ್ ಅಭಿನಯದ ದೊಡ್ಮನೆ ಹುಡುಗ ಚಿತ್ರದ ಹಾಡಿನ ಚಿತ್ರೀಕರಣ ನಗರದ ಮಲ್ಲೇಶ್ವರಂ ಮೈದಾನದಲ್ಲಿ 200 ಜನ ನೃತ್ಯಗಾರರ ಜೊತೆ ಅದ್ಧೂರಿಯಾಗಿ ನೆರವೇರಿತು. ಮೈದಾನದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ನೂರಾರು ನೃತ್ಯಗಾರರ ನಡುವೆ ಅಭಿಮಾನಿಗಳೇ ನಮ್ಮ ದೇವರು ಎಂಬ ಹಾಡಿನ ಚಿತ್ರೀಕರಣವನ್ನು ವಿಶೇಷವಾಗಿ ಎಂಟು ಕ್ಯಾಮೆರಾಗಳನ್ನು ಬಳಸಿ ನಿರ್ದೇಶಕ ದುನಿಯಾ ಸೂರಿ ಸೆರೆ ಹಿಡಿದರು.
ಈಗಾಗಲೇ ಹುಬ್ಬಳ್ಳಿ , ಹೊಸಪೇಟೆ, ಚಿತ್ರದುರ್ಗ, ಬೆಳಗಾವಿಯಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದ್ದು , ಇಂದು ಮತ್ತು ನಾಳೆ ನಗರದಲ್ಲಿ ಚಿತ್ರೀಕರಣ ನಡೆಯಲಿದೆ. ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಜನರ ಮಧ್ಯೆಯೇ ಪುನೀತ್ ರಾಜ್ಕುಮಾರ್ ಅಭಿನಯಿಸಿರುವ ಹಾಡಿನ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪುನೀತ್ ಅವರ ಈ ಹಾಡು ವಿಶಿಷ್ಟ ಆಕರ್ಷಣೆಯಾಗಿದ್ದು, ಇದನ್ನು ಸಾವಿರಾರು ಜನರ ನಡುವೆ ಚಿತ್ರೀಕರಿಸಲಾಗುತ್ತಿದೆ.
ತಾರಾಗಣದಲ್ಲಿ ರಾಧಿಕ ಪಂಡಿತ್, ಅಂಬರೀಶ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ದೊಡ್ಡ ತಾರಾಗಣವೇ ಇದರಲ್ಲಿ ಇದೆ. ಎಂ.ಗೋವಿಂದು ಚಿತ್ರ ನಿರ್ಮಿಸುತ್ತಿದ್ದು , ಛಾಯಾಗ್ರಾಹಕರಾಗಿ ಸತ್ಯ ಹೆಗ್ಡೆ, ಸಂಗೀತ ಸಂಯೋಜನೆಯನ್ನು ವಿ.ಹರಿಕೃಷ್ಣ ನಿರ್ವಹಿಸುತ್ತಿದ್ದಾರೆ.
Comments are closed.