
ಮಂಗಳೂರು,ಜೂನ್.27 : ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟ ಪ್ರಕರಣದ ಪ್ರಮುಖ ಆರೋಪಿ ಎಂ.ನರೇಶ್ ಶೆಣೈ(39)ಯನ್ನು ಇಂದು ಬೆಳಿಗ್ಗೆ ನಗರದ ನ್ಯಾಯಾಲಯಕ್ಕೆ ಹಾಜಾರುಪಡಿಸಲಾಯಿತು.
ಉರ್ವಾ ಠಾಣೆಯ ಇನ್ಸ್ಪೆಕ್ಟರ್ ರವೀಶ್ ನಾಯಕ್ ಅವರ ಬೆಂಗಾವಲಿನಲ್ಲಿ ನ್ಯಾಯಾಲಯಕ್ಕೆ ಕರೆತರಲಾದ ನರೇಶ್ ಶೆಣೈಯನ್ನು ಈ ಕೊಲೆ ಪ್ರಕರಣದ ವಿಶೇಷ ತನಿಖಾ ಅಧಿಕಾರಿ ಎಸಿಪಿ ತಿಲಕ್ ಚಂದ್ರ ಅವರು ನಗರದ 3ನೇ JMFC ನ್ಯಾಯಾಲಯಕ್ಕೆ ಹಾಜಾರುಪಡಿಸಿದರು.

ಈ ಸಂದರ್ಭ ಕೊಲೆಗೆ ಸಂಬಂಧಪಟ್ಟ ಹೆಚ್ಚಿನ ವಿಚಾರಣೆಗಾಗಿ ನರೇಶ್ ಶೆಣೈಯನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಕೋರ್ಟಿನಲ್ಲಿ ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿ ನರೇಶ್ ಶೆಣೈಯನ್ನು ಜೂನ್ 30 ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.
ನ್ಯಾಯಾಲಯಕ್ಕೆ ಕರೆತರುವ ಮೊದಲು ನಿಯಮನುಸಾರ ನರೇಶ್ ಶೆಣೈಯನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
Comments are closed.