ರಾಷ್ಟ್ರೀಯ

17 ಕಡೆ ಸಿಬಿಐ ದಾಳಿ : ಆದಾಯ ತೆರಿಗೆ ಇಲಾಖೆಯ 9 ಅಧಿಕಾರಿಗಳ ವಿರುದ್ಧ ಪ್ರಕರಣ

Pinterest LinkedIn Tumblr

income-taxclrನವದೆಹಲಿ,ಜೂ.೨೩- ದೇಶದಾದ್ಯಂತ ಸಿಬಿಐ ದಾಳಿ ನಡೆಸಿದ್ದು, ೯ ಮಂದಿ ಹಿರಿಯ ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೆಹಲಿಯ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಎಸ್.ಕೆ.ಮಿತ್ತಲ್ ಮತ್ತು ಮೂವರು ಖಾಸಗಿ ವ್ಯಕ್ತಿಗಳ ಮೇಲೂ ದಾಳಿ ನಡೆದಿದ್ದು, ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ.

ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಖಮ್ಮಂ ಸೇರಿದಂತೆ ೧೭ ಕಡೆಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಮಿತ್ತಲ್, ಬೆಂಗಳೂರಿನ ಹೆಚ್ಚುವರಿ ಆಯುಕ್ತ(ವಿನಾಯತಿ) ಟಿ.ಎನ್.ಪ್ರಕಾಶ್, ಚೆನ್ನೈನ ಉಪ ಆಯುಕ್ತ(ತನಿಖೆ) ಎಸ್.ಮುರಳಿ ಮೋಹನ್, ಚೆನ್ನೈನ ಆಯುಕ್ತ(ಆಡಿಟ್-೨) ವಿಜಯಲಕ್ಷ್ಮೀ, ಮುಂಬೈನ ಹೆಚ್ಚುವರಿ ಆಯುಕ್ತ ಎಸ್.ಪಾಂಡಿಯನ್, ಆಯುಕ್ತ ಜಿ. ಲಕ್ಷ್ಮೀ ಬರಪ್ರಸಾದ್, ಗಾಜಿಯಾಬಾದ್‌ನ ಹೆಚ್ಚುವರಿ ನಿರ್ದೇಶಕ ವಿಕ್ರಮ್ ಗೌರ್ ಮತ್ತು ಮುಂಬೈನ ಹೆಚ್ಚುವರಿ ನಿರ್ದೇಶಕ ರಾಜೇಂದ್ರ ಕುಮಾರ್ ಅವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಚಾರ್ಟೆಡ್ ಅಕೌಂಟೆಡ್ ಸಂಜಯ್ ಬಂದಾರಿ ಮತ್ತು ಇವರ ಪುತ್ರ ಶ್ರೇಯಸ್ ಮತ್ತು ದಿವ್ಯಾಂಗ್ ಅವರ ಮೇಲೂ ಪ್ರಕರಣ ದಾಖಲಾಗಿದೆ. ಈ ಅಧಿಕಾರಿಗಳು ತಮ್ಮ ಕಕ್ಷಿದಾರರಿಗೆ ಒಳಿತು ಮಾಡುವ ಉದ್ದೇಶದಿಂದ ನಾನಾ ಸೌಲಭ್ಯಗಳು, ವಿಮಾನ ಯಾನ ಸೌಕರ್ಯ ಸೇರಿದಂತೆ ಅನೇಕ ಉಪಯೋಗಗಳನ್ನು ಪಡೆಯುವ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆ ಈ ದಾಳಿ ನಡೆಸಲಾಗಿದೆ.
ಸಿಬಿಐ ಅಧಿಕಾರಿಗಳ ತಂಡ ಏಕ ಕಾಲದಲ್ಲಿ ಈ ದಾಳಿ ನಡೆಸಿದ್ದು, ಅಧಿಕಾರಿಗಳ ಮನೆ, ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿ, ನಾನಾ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಸಿಬಿಐ ಅಧಿಕಾರಿಗಳ ಈ ದಾಳಿ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.
ಆದಾಯ ತೆರಿಗೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳ ತಂಡ ಕಾರ್ಯ ಯೋಜನೆ ರೂಪಿಸಿ, ಏಕ ಕಾಲಕ್ಕೆ ೯ ಮಂದಿ ಹಿರಿಯ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.

Comments are closed.