ಕರಾವಳಿ

ಬಾಳಿಗ ಕೊಲೆಗೆ ಮೂರು ತಿಂಗಳು : ಇನ್ನೂ ಪತ್ತೆಯಾಗದ ಪ್ರಮುಖ ಆರೋಪಿ – ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಸಲು ಅಂತಿಮ ಸಿದ್ದತೆ

Pinterest LinkedIn Tumblr

Baliga_murder_accused

ಮಂಗಳೂರು,ಜೂನ್.23: ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ್ ಪಿ. ಬಾಳಿಗಾರ ಕೊಲೆ ನಡೆದು ಪೂರ್ತಿ ಮೂರು ತಿಂಗಳು ಕಳೆದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಬಂಧನವಾಗದೇ ಇರುವುದರಿಂದ ಈ ಕೊಲೆ ಪ್ರಕರಣದ ಹಿಂದಿನ ರಹಸ್ಯ ಇನ್ನೂ ನಿಗೂಡವಾಗಿಯೇ ಉಳಿದಿದೆ.

ಆದರೆ ಇದೀಗ ಬಾಳಿಗಾ ಕೊಲೆ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲು ನಗರ ಪೊಲೀಸರು ಅಂತಿಮ ಸಿದ್ದತೆ ನಡೆಸುತ್ತಿದ್ದಾರೆ. ಈ ವಾರದ ಅಂತ್ಯದೊಳಗಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ನಗರ ಪೊಲೀಸ್ ಕಮೀಷನರ್ ಚಂದ್ರಶೇಖರ್ ನಿರ್ದೇಶದಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ತಿಲಕ್ ಚಂದ್ರ ಅವರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬಾಳಿಗಾ ಕೊಲೆ ಪ್ರಕರಣದಲ್ಲಿ ಇತ್ತೀಚೇಗಷ್ಟೆ ಬಂಧನಕ್ಕೊಳಗಾಗಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಶೀಕಾಂತ್ ಎಂಬಾತನಿಂದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಳಿಗಾ ಕೊಲೆ ಪ್ರಕರಣದಲ್ಲಿ ಪೊಲೀಸ್ ವಿಚಾರಣೆಗೆ ಬೇಕಾಗಿರುವ ಯುವ ಬ್ರಿಗೇಡ್ ನ ನರೇಶ್ ಶೆಣೈ ಬುಧವಾರ ನಗರದ ನ್ಯಾಯಾಲಯಕ್ಕೆ ಶರಣಾಗತರಾಗುತ್ತಾರೆ ಎಂಬ ಮಾಹಿತಿ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅವರಣದ ಸುತ್ತಮುತ್ತ ಹಲವಾರು ಮಂದಿ ಸೇರಿದ್ದರು. ಇದೇ ಸಂದರ್ಭದಲ್ಲಿ ನ್ಯಾಯಾಲಯದ ಅವರಣದ ಸುತ್ತ ಹಾಗೂ ನ್ಯಾಯಾಲಯದಲ್ಲಿ ಎ.ಸಿ.ಪಿ ತಿಲಕ್ ಚಂದ್ರ ನೇತ್ರತ್ವದ ಪೊಲೀಸರು ನರೇಶ್ ಶೆಣೈ ಬಂಧನಕ್ಕೆ ಕಾದು ಕುಳಿತ್ತಿದ್ದರು. ಆದರೆ ನ್ಯಾಯಾಲಯದ ಕಲಾಪಗಳು ಮುಗಿಯುವ ತನಕವೂ ನರೇಶ್ ಶೆಣೈ ಶರಣಾಗತರಾಗಿರಲಿಲ್ಲ.

ಈ ನಡುವೆ ನರೇಶ್ ಶೆಣೈಯವರನ್ನು ಪೊಲೀಸರ ಎದುರು ಹಾಜರುಪಡಿಸುವ ಪ್ರಕಿಯೆಗೆ ಕಳೆದೆರಡು ದಿನಗಳಿಂದ ಚಾಲನೆ ದೊರೆತಿದೆ. ನರೇಶ್ ಶೆಣೈ ಸಂಬಂಧಿಕರು ಮತ್ತು ಸ್ನೇಹಿತರು ಡಿ.ಸಿ.ಪಿ ಮಟ್ಟದ ಅಧಿಕಾರಿಗಳೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ತಿಂಗಳೊಳಗಾಗಿ ನರೇಶ್ ಶೆಣೈ ಪೊಲೀಸರಿಗೆ ಶರಣಾಗುವ ನಿರೀಕ್ಷೆಯಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ಆರು ಮಂದಿ ಬಂಧನ : ಪ್ರಮುಖ ಆರೋಪಿಗಾಗಿ ಶೋಧ

ಮಾರ್ಚ್ 21ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಿನಿತ್ ಪೂಜಾರಿ, ನಿಶಿತ್ ದೇವಾಡಿಗ, ಶಿವ @ ಶಿವಪ್ರಸಾದ್, ಶೈಲೇಶ್ @ ಶೈಲು, ಕೆ ಮಂಜುನಾಥ್ ಶೆಣೈ ಯಾನೆ ಮಂಜು ನಿರೇಶ್ವಾಲ್ಯ ಯಾನೆ ಮಂಜು ಹಾಗೂ ಶ್ರೀಕಾಂತ್‌ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಮಂಜು ನಿರೇಶ್ವಾಲ್ಯರಿಗೆ ಈಗಾಗಲೇ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಶಂಕಿತ ಆರೋಪಿ ನರೇಶ್ ಶೆಣೈ ಸೇರಿದಂತೆ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿರುತ್ತದೆ.

Comments are closed.