*ಯೋಗೀಶ್ ಕುಂಭಾಸಿ
ಕುಂದಾಪುರ: ಜನನಿಬೀಡ ಪ್ರದೇಶದಲ್ಲಿ, ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿಯೇ ಇದ್ದ ಕೋಟದ ಮುಖ್ಯ ಪೇಟೆಯ ಸಮೀಪದ ಜ್ಯುವೆಲರ್ಸ್ ಶಾಪ್ ಗೆ ನುಗ್ಗಿ ಮಾಲಿಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳ ಪೈಕಿ ಓರ್ವನನ್ನು ಗೋವಾ ಪೊಲೀಸರಿಂದ ಕೋಟ ಪೊಲೀಸರು ತಮ್ಮ ವಶಕ್ಕೆ ಪಡೆದು ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಗೋವಾದ ಮೂಲದ ಚಂದ್ರಕಾಂತ ಬೀಸೆ(22) ಬಂಧಿತ ಆರೋಪಿಯಾಗಿದ್ದು ಮತ್ತು ಇನ್ನೋರ್ವ ಆರೋಪಿ ಪ್ರಥಮೇಶ್ ಗೋವಾ ಪೊಲೀಸರ ವಶದಲ್ಲಿದ್ದಾನೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಸಿಕ್ಕಿಂ ರಾಜ್ಯದಲ್ಲಿ ತಎಮರೆಸಿಕೊಂಡಿದ್ದು ಈ ಆರೋಪಿಗಾಗಿ ವ್ಯಾಪಕ ಶೋಧ ನಡೆಯುತ್ತಿದೆ.

ಪ್ರಕರಣದ ವಿವರ: ಮೇ.21 ಶನಿವಾರದಂದು ಕೋಟದ ದುರ್ಗಾ ಜ್ಯುವೆಲರ್‍ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂರು ಮಂದಿ ಯುವಕರು ಅಂಗಡಿಯೊಳಕ್ಕೆ ಹೊಕ್ಕು ಶಟರ್ ಮುಚ್ಚಿ ಮಾಲೀಕ ರವೀಂದ್ರ ಆಚಾರ್ಯ ಅವರಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಿನ್ನದಂಗಡಿಯೊಳಗಿದ್ದ ಚಿನ್ನಾಭರಣಗಳನ್ನು ದೋಚಿದ್ದರು. ರವೀಂದ್ರ ಆಚಾರ್ಯ ಅವರು ಹಲ್ಲೆಯಿಂದಾಗಿ ಕೂಗಿಕೊಂಡಾಗ ಪಕ್ಕದ ಅಂಗಡಿಯವರು ಬಾಗಿಲು ತೆರದು ರಕ್ಷಣೆಗೆ ಮುಂದಾಗಿದ್ದರು. ಕೂಡಲೇ ಎಚ್ಚೆತ್ತುಕೊಂಡ ದರೋಡೆಕೋರರ ಪೈಕಿ ಇಬ್ಬರು ತಾವು ತಂದಿದ್ದ ಬೈಕನ್ನೇರಿ ಪರಾರಿಯಾದರೇ ಇನ್ನೋರ್ವ ಮಾತ್ರ ಬೈಕ್ ಅಲ್ಲಿಯೇ ಬಿಟ್ಟು ಪಕ್ಕದ ಬೀದಿಯಲ್ಲಿ ಓಡಿ ಹೋಗಿದ್ದ. ತರುವಾಯ ನೆರೆದ ಜನರು ಗಂಭೀರವಾಗಿ ಗಾಯಗೊಂಡ ಜ್ಯುವೆಲರ್‍ಸ್‌ನ ಮಾಲಿಕ ರವೀಂದ್ರರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಆರೋಪಿಗಳ ಪತ್ತೆ:
ಆರೋಪಿಗಳು ಪರಾರಿಯಾಗುವ ಧಾವಂತದಲ್ಲಿ ಬಿಟ್ಟುಹೋಗಿದ್ದ ಗೋವಾ ನೋಂದಣಿ ಸಂಖ್ಯೆಯ ಹಳದಿ ಬಣ್ಣದ ಬೈಕ್ ಪೊಲೀಸರಿಗೆ ತನಿಖೆಯಲಿ ಒಂದಷ್ಟು ಸುಳಿವು ನೀಡಿತ್ತು. ಇದಲ್ಲದೇ ಕೋಟದಲ್ಲಿ ದರೋಡೆ ಮಾಡಿದ್ದ ಶನಿವಾರ ದಿನವೇ ಮಧ್ಯಾಹ್ನದ ಹೊತ್ತಿಗೆ ಆರೋಪಿಗಳು ಕುಂದಾಪುರದ ನಾಲ್ಕೈದು ಚಿನ್ನದಂಗಡಿಗಳನ್ನು ಹೊಕ್ಕು ಅಲ್ಲಿ ದರೋಡೆಗೆ ಹೊಂಚುಹಾಕಿದ್ದರು. ಇವರ ಹಾವಭಾವಗಳು ಹಾಗೂ ಅನುಮಾನಾಸ್ಪದ ನಡವಳಿಕೆ ಅಂಗಡಿಗಳಲ್ಲಿದ್ದ ಸಿ.ಸಿ.ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಕೋಟದ ಪ್ರಕರಣದ ತರುವಾಯ ಕುಂದಾಪುರ ಜ್ಯುವೆಲ್ಲರಿ ಶಾಪ್ ಮಾಲೀಕರು ಸಿ.ಸಿ. ಕ್ಯಾಮೆರಾ ದ್ರಶ್ಯಾವಳಿಗಳನ್ನು ಪರಿಶೀಲನೆ ನಡೆಸುವಾಗ ಇವರ ಗುರುತು ಪತ್ತೆಯಾಗಿತ್ತು. ಇವೆರಡು ಉನ್ನತ ಕುರುಹುಗಳನ್ನು ಕ್ರೋಡೀಕರಿಸಿದ ಕೋಟ ಪೊಲೀಸರು ಮಿಂಚಿನ ವೇಗದಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಜೂಜಲ್ಲಿ ಜೊತೆಯಾದರು…
ಗೋವಾದ ಕೆಸಿನೋ ಆಟವೊಂದರಲ್ಲಿ ಚಂದ್ರಕಾಂತ್, ಪ್ರಥಮೇಶ್ ಹಾಗೂ ಇನ್ನೋರ್ವ ಜೊತೆಯಾಗಿ ಕೆಲವೇ ದಿನಗಳಲ್ಲಿ ಆತ್ಮೀಯರಾಗುತ್ತಾರೆ. ಮೋಜು ಮಸ್ತಿಯನ್ನೇ ಜೀವನವೆಂದು ತಿಳಿದುಕೊಂಡ ಈ ಪಡ್ಡೆ ಹುಡುಗರಿಗೆ ಹಣ ಮಾಡಿ ಉಡಾಯಿಸುವುದೇ ಜೀವನ ಎಂಬಂತಿತ್ತು. ಅದಕ್ಕಾಗಿ ಇವರು ದರೋಡೆ ಮಾಡ ಹೊರಟರು. ಅಷ್ಟೇ ಅಲ್ಲ ಕೊಲೆಯನ್ನು ಮಾಡಿಯೇ ಬಿಟ್ಟರು.
ಗೋವಾದಲ್ಲಿ ಮರ್ಡರ್ ಮಾಡಿದ್ದರು…
ಕೋಟ ದರೋಡೆ ಪ್ರಕರಣದ ಆರೋಪಿಗಳು ಹಲವಾರು ಅಪರಾಧಗಳಲ್ಲಿ ಭಾಗಿಯಾಗಿದ್ದರು ಗೋವಾ ಸೇರಿದಂತೆ ಹಲವಾರು ಕಡೆ ಇವರ ಮೇಲೆ ಪ್ರಕರಣಗಳು ದಾಖಲಾಗಿತ್ತು ಎನ್ನಲಾಗಿದೆ ಹಾಗೂ ಆರೋಪಿಗಳು ಕಳ್ಳತನ ಮುಂತಾದ ಕೃತ್ಯದ ಅನಂತರ ಸಾಕಷ್ಟು ಚಾಲಾಕಿತನ ಪ್ರದರ್ಶಿಸುತ್ತಿದ್ದರು. ಮೊಬೈಲ್ ಬಳಕೆ ಮಾಡದಿರುವುದು ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಬೆಳೆಸುವ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಕೋಟದ ಪ್ರಕರಣ ನಡೆಯುವ ಇಪ್ಪತ್ತು ದಿನಗಳ ಹಿಂದೆ ವ್ರದ್ಧೆಯೋರ್ವರನ್ನು ಹಣಕ್ಕಾಗಿ ಕೊಲೆ ಮಾಡಿದ್ದ ಆರೋಪಿಗಳು ಗೋವಾ ಪೊಲೀಸರಿಗೆ ಬೇಕಾಗಿದ್ದರು. ತಾವಿದ್ದ ಪಿ.ಜಿ. ಮಾಲೀಕರಾದ ವ್ರದ್ದೆಯೋರನ್ನು ಹಣಕ್ಕಾಗಿ ಕೊಂದು ಮೂವರು ಪರಾರಿಯಾಗಿದ್ದರು.
ಗೋವಾದಿಂದ ಕುಂದಾಪುರಕ್ಕೆ…
ಗೋವಾದಲ್ಲಿ ಮರ್ಡರ್ ಮಾಡಿ ಊರುಬಿಟ್ಟ ಅವರು ದರೋಡೆ ನಡೇಸುವ ಸಲುವಾಗಿ ಕುಂದಾಪುರದತ್ತ ಬಂದಿದ್ದರು. ಇಲ್ಲಿ ದರೋಡೇ ನಡೆಸಿ ಪುನಃ ಗೋವಾಕ್ಕೆ ತೆರಳಿದ ಇವರನ್ನು ಕೋಟ ಪೊಲೀಸರು ಬೆನ್ನತ್ತಿ ಹೋದಾಗ ಇವರು ಗೋವಾದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆದರೇ ಆರೋಪಿಗಳಿಬ್ಬರು ಗೋವಾ ಪೊಲೀಸರಿಗೆ ಬೇಕಾದ ಕಾರಣ ಕೆಲವು ಕಾನೂನು ತೊಡಕುಗಳಿದ್ದ ಹಿನ್ನೆಲೆ ಅವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ಚಂದ್ರಕಾಂತನನ್ನು ಕೋಟ ಪೊಲೀಸರು ಬಾಡಿ ವಾರೆಂಟ್ ಪಡೆದು ತಮ್ಮ ವಶಕೆ ಪಡೆದುಕೊಂಡು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಕೋಟ ಪೊಲೀಸರಿಂದ ಯಶಸ್ವಿ ಕಾರ್‍ಯಾಚರಣೆ:
ಪ್ರಕರಣದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಕೋಟ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೋರ್ವ ಆರೋಪಿ ಗೋವಾ ಪೊಲೀಸರ ವಶದಲ್ಲಿದ್ದು ಮುಂದಿನ ದಿನಗಳಲ್ಲಿ ಆತನನ್ನು ಬಾಡಿ ವಾರೆಂಟ್ ಪಡೆದು ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಿದ್ದಾರೆ. ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್ ಮಾರ್ಗದರ್ಶನದಂತೆ, ಕೋಟ ಠಾಣಾಧಿಕಾರಿ ಕಬ್ಬಳ್‌ರಾಜ್ ಅವರ ತಂಡದ ಮೂಲಕ ಈ ಯಶಸ್ವಿ ಕಾರ್‍ಯಚರಣೆ ನಡೆಸಿದ್ದಾರೆ. ಕೋಟ ಠಾಣೆ ಸಿಬಂದಿಗಳಾದ ಸಂತೋಷ, ಸುರೇಶ, ಜಯಂತ್, ಸತೀಶ್, ವಿಶ್ವನಾಥ ಮುಂತಾದವರು ಆರೋಪಿಗಳನ್ನು ಬಂಧಿಸಿದ್ದ ತಂಡದಲ್ಲಿ ಕಾರ್‍ಯ ನಿರ್ವಹಿಸಿದ್ದಾರೆ.
ದರೋಡೆ ನಡೆದು ಒಂದು ತಿಂಗಳೊಳಗೆ ಆರೋಪಿಗಳನ್ನು ಪತ್ತೆಹಚ್ಚಿ, ಪ್ರಕರಣ ಬೇಧಿಸಿದ ಕೋಟ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Comments are closed.