
ಮಂಗಳೂರು, ಜೂ.22: ಮಂಗಳೂರಿನಾದ್ಯಂತ ಬುಧವಾರ ಟ್ರಾಫಿಕ್ ಪೊಲೀಸರು ಶಾಲಾ ಕಾಲೇಜುಗಳ ವಾಹನಗಳ ತಪಾಸಣೆ ಆರಂಭಿಸಿದ್ದಾರೆ. ನಗರದ ಹಲವೆಡೆ ವಾಹನಗಳ ತಪಾಸಣೆ ನಡೆಸಿದ ಟ್ರಾಫಿಕ್ ಪೊಲೀಸರು ಈ ಸಂದರ್ಭ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.
ಕುಂದಾಪುರ ಸಮೀಪದ ತ್ರಾಸಿಯಲ್ಲಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವಾಹನಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಟ್ರಾಫಿಕ್ ಎಸಿಪಿ ಉದಯ್ ನಾಯಕ್ ನೇತೃತ್ವದಲ್ಲಿ ನಗರದ ಪ್ರಮುಖ ನಾಲ್ಕು ವೃತ್ತಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆಗೊಳಪಡಿಸಿದ್ದಾರೆ.

ನಗರದ ಲೇಡಿಹಿಲ್, ನವಭಾರತ್, ಬೆಂದೂರ್ವೆಲ್ ಮತ್ತು ರೊಸಾರಿಯೋ ವೃತ್ತಗಳಲ್ಲಿ ತಪಾಸಣೆ ನಡೆಸಿದ ಪೊಲೀಸರು ಮಿತಿಗಿಂತ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಹೇರಿಕೊಂಡು ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಎಚ್ಚರಿಕೆ ನೀಡಿದ್ದಾರೆ.
ತಪಾಸಣೆ ನಡೆಸುತ್ತಿದ್ದ ವೇಳೆ ಕೆಲ ಓಮ್ನಿ ಕಾರುಗಳಲ್ಲಿ 14ರಿಂದ 18 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪ್ರಕರಣಗಳೂ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ವಾಹನಕ್ಕೆ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದೊಯ್ಯದಂತೆ ವಾಹನ ಚಾಲಕ / ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.
ಹೆಲ್ಮೆಟ್ ಇಲ್ಲದ ಹಿಂಬದಿ ಸವಾರರಿಗೆ ಎಚ್ಚರಿಕೆ:
ಪ್ಟ್ರಾಫಿಕ್ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಕೆಲವು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದದ್ದು ಕಂಡು ಬಂದಿದ್ದು, ಜೊತೆಗೆ ಫೋಷಕರು ತಮ್ಮ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಇಲ್ಲದೇ ಶಾಲಾ ಕಾಲೇಜಿಗೆ ಕರೆದೊಯ್ಯುತಿರುವುದನ್ನು ಪತ್ತೆಹಚ್ಚಿರುವ ಪೊಲೀಸರು ಇಂತಹ ದ್ವಿಚಕ್ರ ಸವಾರರಿಗೆ ಕಡ್ಡಾಯವಾಗಿ ಹಿಂಬಂದಿ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾರೆ.
Comments are closed.