ಕರಾವಳಿ

ತ್ರಾಸಿ ಅಪಘಾತ ಹಿನ್ನೆಲೆ : ಜೂ.26ರಂದು ಶಾಲಾ ಮುಖ್ಯಸ್ಥರ ಹಾಗೂ ವಾಹನ ಚಾಲಕರ ಸಭೆ : ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ

Pinterest LinkedIn Tumblr

Puttur_shotout_accused_3

ಮಂಗಳೂರು, ಜೂನ್. 22 : ಕುಂದಾಪುರದ ಸಮೀಪದ ತ್ರಾಸಿಯಲ್ಲಿ ನಡೆದ ಶಾಲಾ ವಾಹನ ಅಪಘಾತ ತೀವ್ರ ಆಘಾತಕಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಎಲ್ಲಾ ಶಾಲಾ ವಾಹನಗಳ ಚಾಲಕರು ಹಾಗೂ ಶಾಲಾ ಮುಖ್ಯಸ್ಥರ ಸಭೆಯನ್ನು ಜೂ. 26ರಂದು ಕರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ತಿಳಿಸಿದ್ದಾರೆ.

ಮಂಗಳವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕುಂದಾಪುರ ಸಮೀಪದ ತ್ರಾಸಿಯಲ್ಲಿ ನಡೆದ ಶಾಲಾ ವಾಹನ ಅಪಘಾತವನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದ್ದು, ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನ ಚಾಲಕರು ಕೆಲವೊಂದು ನಿಯಮಗಳನ್ನು ಕಟ್ಟು ನಿಟ್ಟಗಿ ಪಾಲಿಸುವ ಬಗ್ಗೆ ನಿರ್ದೇಶನ ನೀಡಲಾಗುವುದು.

ಸರಕಾರಿ ಸುತ್ತೋಲೆಯ ಪ್ರಕಾರ ಶಾಲಾ ವಾಹನಗಳು ಹಳದಿ ಬಣ್ಣದಿಂದ ಕೂಡಿದ್ದು, ಹಸಿರು ಬಣ್ಣದಲ್ಲಿ ಶಾಲೆಯ ಹೆಸರನ್ನು ನಮೂದಿಸಬೇಕು ಸೇರಿದಂತೆ ಹಲವಾರು ನಿರ್ದೇಶನಗಳನ್ನು ಈಗಾಗಲೇ ಶಾಲೆಗಳಿಗೆ ನೀಡಲಾಗಿದೆ. ಈಗ ಮತ್ತೊಮ್ಮೆ ಶಾಲಾ ಮುಖ್ಯಸ್ಥರಿಗೆ ಈ ನಿರ್ದೇಶನಗಳನ್ನು ತಿಳಿಸಲಾಗುವುದಲ್ಲದೆ, ಚಾಲಕರು ಸಮರ್ಪಕ ತರಬೇತು ಹೊಂದಿರುವ ಬಗ್ಗೆ ಹಾಗೂ ಅಧಿಕ ವೇಗ ಹಾಗೂ ಓವರ್ ಟೇಕ್ ಬಗ್ಗೆ ಚಾಲಕರಿಗೆ ಸೂಕ್ತ ಮಾರ್ಗದರ್ಶನವನ್ನು ಒದಗಿಸಲಾಗುವುದು ಎಂದು ಅವರು ಈ ಸಂದರ್ಭ ಹೇಳಿದರು.

ಮೊದಲ ಹಂತದಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಮ್ಮ ಸಿಬ್ಬಂದಿಗಳು ಭೇಟಿ ನೀಡಿ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಬಳಿಕ ಇದೇ ಬಾನುವಾರದಂದು ಬಂಟ್ವಾಳ, ಪುತ್ತೂರು ಸೇರಿದಂತೆ ಜಿಲ್ಲೆಯ ಶಾಲಾ ವಾಹನಗಳ ಚಾಲಕರು ಹಾಗೂ ಶಾಲಾ ಮುಖ್ಯಸ್ಥರ ಸಭೆ ಕರೆದು ನಿಯಮಗಳ ಬಗ್ಗೆ ತಿಳಿಯಪಡಿಸಿ ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಹೆಚ್ಚಿನ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಎನ್ ಎಚ್ ಎ ಐ, ಅರಣ್ಯ ಇಲಾಖೆ, ಮತ್ತು ಮೆಸ್ಕಾಂ ಇಲಾಖೆಗಳ ಜೊತೆ ಸಭೆ ನಡೆಸಿ ರಸ್ತೆ ಸುರಕ್ಷತೆಯ ಬಗ್ಗೆ ಚರ್ಚಿಸಲಾಗುವುದು. ಜೊತೆಗೆ ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹೆದ್ದಾರಿ ಪಕ್ಕದಲ್ಲಿರುವ ದೊಡ್ಡ ಸೈನ್ ಬೋರ್ಡ್ (ಹೊರ್ಡಿಂಗ್ಸ್) ಗಳ ನಿಯಂತ್ರಣಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳ ಅಕ್ಕ ಪಕ್ಕದಲ್ಲಿರುವ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದು ಎಸ್ಪಿ ತಿಳಿಸಿದರು.

Comments are closed.