ಕರ್ನಾಟಕ

ನೂತನ ಸಚಿವರ ಪಟ್ಟಿಯಲ್ಲಿ ಅತೀ ಶ್ರೀಮಂತ ಧಣಿ ಸೀತಾರಾಮ್ ಆದ್ರೆ ,ಬಡ ಸಚಿವ ಕಾಗೋಡು ತಿಮ್ಮಪ್ಪ ..!

Pinterest LinkedIn Tumblr

kagodu

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಭಾನುವಾರ ಸೇರ್ಪಡೆಗೊಂಡ 13 ಸಚಿವರಲ್ಲಿ ಎಂ.ಆರ್.ಸೀತಾರಾಮ್ ಅತಿ ಶ್ರೀಮಂತ ಧಣಿಯಾಗಿದ್ದರೆ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅತ್ಯಂತ ಬಡ ಸಚಿವರಾಗಿದ್ದಾರೆ. ಸಚಿವರು ಸ್ವಯಂಪ್ರೇರಿತರಾಗಿ ಘೋಷಣೆ ಮಾಡಿಕೊಂಡಿರುವ ಆಸ್ತಿ ವಿವರದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ 86.33 ಕೋಟಿ ಚರಾಸ್ತಿ ಮತ್ತು 49.85 ಕೋಟಿ ಚಿರಾಸ್ತಿ ಹೊಂದಿದ್ದಾರ. ಸಾಗರ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು 26 ಲಕ್ಷ ಮೌಲ್ಯ ಚರ-ಚಿರಾಸ್ತಿ ಹೊಂದಿದ್ದಾರೆ.

ಎಂ.ಆರ್.ಸೀತಾರಾಮ್ ಹೊರತುಪಡಿಸಿದರೆ 2ನೆ ಅತಿ ಶ್ರೀಮಂತ ಲಕ್ಷ್ಮೀ ಪುತ್ರ ಸಚಿವನೆಂದರೆ ಬೆಳಗಾವಿಯ ರಮೇಶ್ ಜಾರಕಿ ಹೊಳಿ. 22.5 ಕೋಟಿ ಚರಾಸ್ತಿ ಹಾಗೂ 35.43 ಕೋಟಿ ರೂ. ಮೌಲ್ಯದ ಚಿರಾಸ್ತಿಯನ್ನು ಸಂಪಾದಿಸಿದ್ದಾರೆ. ರಮೇಶ್ ಜಾರಕಿ ಹೊಳಿ ನಂತರ 3ನೆ ಅತಿ ಶ್ರೀಮಂತ ಸಚಿವ ಹಾಗೂ ದಾವಣಗೆರೆಯ ಧಣಿ ಶ್ಯಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ 22 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದರೆ 30.07 ಕೋಟಿ ಚಿರಾಸ್ತಿ ಹೊಂದಿದ್ದಾರೆ.

ಅಕ್ರಮ ಗಣಿಗಾರಿಕೆ ಆರೋಪದಡಿ ಸಚಿವ ಸ್ಥಾನ ಕಳೆದುಕೊಂಡು ಪುನಃ ಮಂತ್ರಿ ಸ್ಥಾನ ಪಡೆದುಕೊಂಡಿರುವ ಗಣಿ ಧಣಿ ಸಂತೋಷ್ ಲಾಡ್ 4ನೆ ಅತಿ ಶ್ರೀಮಂತ ಸಚಿವರೆನಿಸಿಕೊಂಡಿದ್ದಾರೆ. 1.79ಕೋಟಿ ಮೌಲ್ಯದ ಚರ ಹಾಗೂ 13.33 ಕೋಟಿ ಮೌಲ್ಯದ ಚಿರಾಸ್ತಿಯನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಯುವಕ ಹಾಗೂ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಮಂತ್ರಿ ಸ್ಥಾನ ಪಡೆದುಕೊಂಡಿರುವ ಉಡುಪಿಯ ಪ್ರಮೋದ್ ಮಧ್ವರಾಜ್ 16.24 ಲಕ್ಷ ಚರಾಸ್ತಿ ಹಾಗೂ 12.08 ಕೋಟಿ ಚಿರಾಸ್ತಿ ಹೊಂದಿದ್ದಾರೆ.

ಶ್ರೀನಿವಾಸಪುರದ ಶಾಸಕ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ರಮೇಶ್‌ಕುಮಾರ್ 16.41 ಲಕ್ಷ ಚರಾಸ್ತಿ, 10.25 ಕೋಟಿ ಚಿರಾಸ್ತಿ ಹೊಂದಿದ್ದಾರೆ. ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ 5.92 ಕೋಟಿ ಚರ ಮತ್ತು ಚಿರಾಸ್ತಿ ಹೊಂದಿದ್ದಾರೆ. ಇನ್ನು ಬಸವರಾಜರಾಯರೆಡ್ಡಿ 75.29 ಲಕ್ಷ ಚರ, 2.29 ಕೋಟಿ ಚಿರಾಸ್ತಿ, ತನ್ವೀರ್ ಸೇಠ್ 78.95 ಲಕ್ಷ ಚರ, 4.03 ಕೋಟಿ ಚಿರಾಸ್ತಿ ಮತ್ತು ರುದ್ರಪ್ಪ ಲಮಾಣಿ 82.79 ಲಕ್ಷ ಚರ, 2.78 ಕೋಟಿ ಮೌಲ್ಯದ ಚಿರಾಸ್ತಿ ಹೊಂದಿದ್ದಾರೆ. ಭಾನುವಾರ ಸೇರ್ಪಡೆಯಾದ ಬಹುತೇಕ ಸಚಿವರಲ್ಲಿ ಕಾಗೋಡು ತಿಮ್ಮಪ್ಪ ಹೊರತುಪಡಿಸಿದರೆ ಉಳಿದವರು ಕೋಟಿ ಪುತ್ರರೇ ಆಗಿದ್ದಾರೆ.

Comments are closed.