
ಮಂಗಳೂರು, ಜೂ.21: ಮಳೆಗಾಲ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಬಗ್ಗೆ ಅಧಿಕಾರಿಗಳು ಪ್ರತಿ ಪಂಚಾಯತ್ ವ್ಯಾಪ್ತಿಗಳಲ್ಲಿ ಮಾಹಿತಿ ನೀಡಬೇಕು. ಸ್ಥಳೀಯ ಸಂಸ್ಥೆಗಳು, ನಗರ ಪಾಲಿಕೆ ಹಾಗೂ ಪಂಚಾಯತ್ಗಳಲ್ಲಿ ಸಮರ್ಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ವಾರಕ್ಕೊಮ್ಮೆ ಸಾಂಕ್ರಾಮಿಕ ರೋಗಗಳಲ್ಲಿ ಆಗಿರುವ ವ್ಯತ್ಯಾಸ, ಕೈಗೊಂಡ ಕ್ರಮಗಳ ಬಗ್ಗೆ ಸಭೆ ನಡೆಸುವಂತೆ ಗ್ರಾ.ಪಂ.ಗಳಿಗೆ ಸೂಚಿಸುಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು ಆರು ಡೆಂಗ್ ಸಾವು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಮೂರು ಪ್ರಕರಣಗಳು ಬೆಳ್ತಂಗಡಿ ತಾಲೂಕಿನಲ್ಲಿ ವರದಿಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಡೆಂಗ್ ಹಾವಳಿ ನಿಯಂತ್ರಣದಲ್ಲಿದೆ. ಸಪ್ತಾಹದ ಮೂಲಕ ಸ್ವಚ್ಛತಾ ಆಂದೋಲನ ಕೈಗೊಂಡು ಡೆಂಗ್ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಸಿಕಂದರ್ ಪಾಷಾ ಸಭೆಗೆ ಮಾಹಿತಿ ನೀಡಿದರು.

ಮಾದಕ ದ್ರವ್ಯಗಳ ಹಾವಳಿ ಕೂಗು
ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಯುವ ಜನಾಂಗ ಬಲಿಪಶುಗಳಾಗುತ್ತಿದ್ದಾರೆ ಎಂಬ ಕೂಗು ಶಾಸಕರು ಹಾಗೂ ನಾಮನಿರ್ದೇಶಿತ ಸದಸ್ಯರಿಂದ ವ್ಯಕ್ತವಾಯಿತು.
ಸುರತ್ಕಲ್ನಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದೆ. ಯುವ ಪೀಳಿಗೆ ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿದ್ದಾರೆ. ಪೊಲೀಸರು ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಮೊಯ್ದಿನ್ ಬಾವಾ ಆಗ್ರಹಿಸಿದರೆ, ಕಾಲೇಜು ಕಂಪೌಂಡ್ ಬಳಿಯ ಕೆಲ ಗೂಡಂಗಡಿಗಳಲ್ಲಿಯೇ ಮಾದಕ ದ್ರವ್ಯಗಳು ಸುಲಭವಾಗಿ ದೊರೆಯುತ್ತಿವೆ. ಮಾಲ್ಗಳಲ್ಲೂ ಈ ಹಾವಳಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ದೂರಿದರು.
ತೊಕ್ಕೊಟ್ಟು ಪರಿಸರದಲ್ಲಿಯೂ ಮಾದಕದ್ರವ್ಯಗಳ ಹಾವಳಿ ಎಲ್ಲೆ ಮೀರುತ್ತಿದೆ ಎಂದು ನಾಮ ನಿರ್ದೇಶಿತ ಸದಸ್ಯ ಆಲ್ವಿನ್ ಡಿಸೋಜಾ ಆಪಾದಿಸಿದರು. ಪೊಲೀಸ್ ಅಧಿಕಾರಿಗಳು ಈಸಂದರ್ಭ ಪ್ರತಿಕ್ರಿಯಿಸಿ, ಗಾಂಜಾ ಅಕ್ರಮ ದಾಸ್ತಾನಿಗೆ ಸಂಬಂಧಿಸಿ ಫೆಬ್ರವರಿ ತಿಂಗಳಲ್ಲಿ 2 ಪ್ರಕರಣ ದಾಖಲಿಸಿ, ಗಾಂಜಾ ಮತ್ತುಸಾಗಾಟಕ್ಕೆ ಬಳಸಲಾದ ಒಂದು ಆಟೋರಿಕ್ಷಾ ಮತ್ತು 1.250 ಗ್ರಾಂ ಗಾಂಜಾ ವಶಪಡಿಸಿ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿರುವುದಾಗಿ ತಿಳಿಸಿದರು.
ಪಡಿತರ ಚೀಟಿಗೆ ಆಧಾರ್ ಲಿಂಕ್: ಶೇ. 89 ಪೂರ್ಣ
ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಕಾರ್ಯ ಜಿಲ್ಲೆಯಲ್ಲಿ ಶೇ. 89ರಷ್ಟು ಪೂರ್ಣಗೊಂಡಿದೆ. ತಿಂಗಳ ಅಂತ್ಯದೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಭಾರ ಉಪ ನಿರ್ದೇಶಕರಾದ ರಾಜು ಮೊಗವೀರ ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
ಅವಘಡ ಸಂಭವಿಸಿದರೆ ಮಾಲಕರ ಬಂಧನ: ಜಿಲ್ಲಾಧಿಕಾರಿ
ಕಳೆದ ಮೂರು ವರ್ಷಗಳಲ್ಲಿ ಮೂರು ಪ್ರಮುಖ ಅಪಘಾತಗಳು ಟ್ಯಾಂಕರ್ ದುರಂತದಿಂದ ಸಂಭವಿಸಿದೆ. ಮುಂದೆ ಜಿಲ್ಲೆಯಲ್ಲಿ ಇಂತಹ ಅವಘಡಗಳು ನಡೆದರೆ ಈಗಾಗಲೇ ನೀಡಿರುವ ಸೂಚನೆಗಳನ್ನು ಪಾಲಿಸದ ಟ್ಯಾಂಕರ್ ಮಾಲಕರು ಹಾಗೂ ಇಂಧನ ಸಾಗಾಟ ಕಂಪೆನಿಗಳ ಮುಖ್ಯಸ್ಥರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ 1,800ರಷ್ಟು ಟ್ಯಾಂಕರ್ಗಳು ಪ್ರತಿನಿತ್ಯ ಓಡಾಡುತ್ತಿವೆ. ಧಾರಣಾ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಟ್ಯಾಂಕರ್ಗಳು ಸಂಚರಿಸುತ್ತಿರುತ್ತವೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.
ಪೊಲೀಸರಿಗೆ ಹಣ ನೀಡಿದರೆ ಟ್ಯಾಂಕರ್ ಸಂಚಾರಕ್ಕೆ ಅವಕಾಶ: ಆರೋಪ
ನಿಷೇಧಿತ ಅವಧಿಯಲ್ಲೂ ಪೊಲೀಸರಿಗೆ 500 ರೂ. ಕೊಟ್ಟರೆ ಟ್ಯಾಂಕರ್ಗಳ ಓಡಾಟಕ್ಕೆ ಅವಕಾಶ ನೀಡುತ್ತಿರುವ ಪ್ರಸಂಗಗಳು ಜಿಲ್ಲೆಯಲ್ಲಿ ನಡೆಯುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಗಂಭೀರ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಶಾಂತರಾಜು, ಅಂತಹ ನಿರ್ದಿಷ್ಠ ಪ್ರಕರಣಗಳ ಬಗ್ಗೆ ನೇರವಾಗಿ ನನ್ನ ಗಮನಕ್ಕೆ ತಂದರೆ ಅಂಥವರನ್ನು ತಕ್ಷಣ ಅಮಾನತುಗೊಳಿಸಲಾಗುವುದು ಎಂದು ಹೇಳಿದರು. ನಿಷೇಧಿತ ಅವಧಿಯಲ್ಲಿ ಸಂಚರಿಸುವ ಟ್ಯಾಂಕರ್ಗಳ ಪರವಾನಿಗೆಯನ್ನು ಅಮಾನತು ಮಾಡುವಂತೆ ಆರ್ಟಿಒಗೆ ಜಿಲ್ಲಾಧಿಕಾರಿ ಈ ಸಂದರ್ಭ ಸೂಚನೆ ನೀಡಿದರು.
ಶಿರಾಡಿ ಕಾಮಗಾರಿ: ಪೂರ್ಣ ಬಂದ್ ಮಾಡದಿರಲು ನಿರ್ಣಯ
ಶಿರಾಡಿ ಘಾಟಿಯ ದ್ವಿತೀಯ ಹಂತದ ಕಾಮಗಾರಿ ಇನ್ನೂ ಆರಂಭಗೊಳ್ಳದಿರುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸುವಾಗ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡದಿರಲು ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕಾಮಗಾರಿ ನಡೆಸುವ ಪ್ರಸಂಗ ಕೇವಲ ಶಿರಾಡಿ ಘಾಟಿ ರಸ್ತೆಯಲ್ಲಿ ಮಾತ್ರ. ಕಾಮಗಾರಿ ಯುದ್ಧೋಪಾದಿಯಲ್ಲಿ ಆಗಬೇಕಾಗಿದ್ದು, ಕಾಂಕ್ರಿಟೀಕರಣ ಕಾಮಗಾರಿ ವೇಳೆ ಒಂದು ಬದಿ ರಸ್ತೆಯನ್ನು ಸಂಚಾರಕ್ಕೆ ಬಿಟ್ಟು ಕಾಮಗಾರಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
Comments are closed.