ರಾಷ್ಟ್ರೀಯ

ಮದುವೆ: ಸಂಪ್ರದಾಯ ಮುರಿಯಲು ಒಪ್ಪದ ಯುವತಿಯರು

Pinterest LinkedIn Tumblr

mmmನವದೆಹಲಿ: ಭಾರತದ ಯುವತಿಯರು ಆಧುನಿಕತೆಗೆ ತೆರೆದುಕೊಳ್ಳುವಲ್ಲಿ ಮುಂದಿದ್ದರೂ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಮಾತ್ರ ಸಾಂಪ್ರದಾಯಿಕ ಪದ್ಧತಿಯ ಮೊರೆ ಹೋಗುತ್ತಿದ್ದಾರೆ.
ದೇಶದಲ್ಲಿರುವ ಹೆಚ್ಚಿನ ಯುವತಿಯರು ಮದುವೆಗೆ ಮುನ್ನ ಪತಿ ಜತೆ ಯಾವುದೇ ವಿಧದಲ್ಲೂ ಸಂವಹನ ನಡೆಸಿಲ್ಲ ಎಂಬ ಅಂಶ 2011–12ರ ಭಾರತ ಮಾನವಾಭಿವೃದ್ಧಿ ಸಮೀಕ್ಷೆಯಿಂದ (ಐಎಚ್‌ಡಿಎಸ್‌) ತಿಳಿದುಬಂದಿದೆ.
2011–12ರ ಅವಧಿಗೆ ಮುನ್ನ ವಿವಾಹಿತರಾದ 15 ರಿಂದ 32 ವರ್ಷ ವಯಸ್ಸಿನೊಳಗಿನವರಲ್ಲಿ ಶೇ 50 ರಷ್ಟು ಮಂದಿ ಮಾತ್ರ ಭಾವಿ ಪತಿಯನ್ನು ವೈಯಕ್ತಿಕವಾಗಿ ಭೇಟಿಯಾಗಿ ಆಥವಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಹಳೆ ತಲೆಮಾರಿನ ಮಹಿಳೆಯರಲ್ಲಿ ಈ ಪ್ರಮಾಣ ಇನ್ನೂ ಕಡಿಮೆ. ಕೆಲವು ವಯೋಮಿತಿಯೊಳಗಿನ ಮಹಿಳೆಯರಲ್ಲಿ ಆರರಲ್ಲಿ ಒಬ್ಬರು ಮಾತ್ರ ಮದುವೆಗೆ ಮುನ್ನ ಪತಿ ಜತೆ ಮಾತನಾಡಿದ್ದಾರೆ.
ಗ್ರಾಮೀಣ ಪ್ರದೇಶದ ಯುವತಿಯರಿಗೆ ಹೋಲಿಸಿದರೆ ನಗರ ಪ್ರದೇಶದ ಯುವತಿಯರು ಭಾವಿ ಪತಿ ಜತೆ ಹೆಚ್ಚು ಮಾತನಾಡಿದ್ದಾರೆ. ಗ್ರಾಮೀಣ ಪ್ರದೇಶದ ಯುವತಿಯರಲ್ಲಿ ಶೇ 50 ಕ್ಕಿಂತಲೂ ಅಧಿಕ ಮಂದಿ ಮದುವೆಗೆ ಮುನ್ನ ಪತಿ ಜತೆ ಯಾವ ರೀತಿಯಲ್ಲೂ ಸಂವಹನ ನಡೆಸಿಲ್ಲ.
‘ಗ್ರಾಮೀಣ ಪ್ರದೇಶ ಮತ್ತು ಸಣ್ಣ ಪಟ್ಟಣಗಳಲ್ಲಿ ಮದುವೆಗೆ ಮುನ್ನ ಪ್ರೀತಿಸುವುದನ್ನು ಸಮಾಜ ಇನ್ನೂ ಒಪ್ಪುತ್ತಿಲ್ಲ. ಹಿರಿಯರು ನಿಶ್ಚಯಿಸಿದ ಮದುವೆಯೇ ಚಾಲ್ತಿಯಲ್ಲಿರುವುದು ಇದಕ್ಕೆ ಕಾರಣ’ ಎಂದು ಐಐಟಿ ನವದೆಹಲಿಯ ಸಮಾಜ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ರವೀಂದರ್‌ ಕೌರ್‌ ಹೇಳುತ್ತಾರೆ.
‘ದಂಪತಿ ಪ್ರೇಮ ವಿವಾಹವಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಈಗಲೂ ಹಿಂಜರಿಯುತ್ತಾರೆ. ಮದುವೆಗೆ ಮುನ್ನ ಇಬ್ಬರ ನಡುವೆ ಯಾವುದೇ ಸಂವಹನ ನಡೆದಿಲ್ಲ ಎಂದು ಹೇಳಲು ಇಷ್ಟಪಡುತ್ತಾರೆ. ಇದು ಕುಟುಂಬಗಳ ಮರ್ಯಾದೆಯ ವಿಷಯವೂ ಹೌದು. ಆದರೂ ಈ ಪ್ರವೃತ್ತಿಯಲ್ಲಿ ಈಗ ಬದಲಾವಣೆ ಉಂಟಾಗುತ್ತಿದೆ. ಯುವ ಜನಾಂಗ ಈ ನಿಯಮವನ್ನು ಮುರಿಯುತ್ತಿರುವುದನ್ನು ಕಾಣಬಹುದು’ ಎನ್ನುತ್ತಾರೆ.
ತಡವಾಗಿ ಮದುವೆ: ಮದುವೆಗೆ ಮುನ್ನ ಪರಸ್ಪರ ಸಂವಹನ ನಡೆಸುವವರ ಪ್ರಮಾಣ ಈ ದಿನಗಳಲ್ಲಿ ಹೆಚ್ಚಿದೆ. ಹೆಣ್ಣುಮಕ್ಕಳು ತಡವಾಗಿ ಮದುವೆಯಾಗುತ್ತಿರುವುದು ಕೂಡಾ ಇದಕ್ಕೆ ಕಾರಣ.
ವಿಶ್ವಸಂಸ್ಥೆಯ ಅಂಕಿ ಅಂಶದ ಪ್ರಕಾರ 2011 ರ ಅವಧಿಯಲ್ಲಿ ಭಾರತದಲ್ಲಿ ಯುವತಿಯರ ಮದುವೆಯ ಸರಾಸರಿ ವಯಸ್ಸು 21 ಆಗಿತ್ತು. 1991 ರಲ್ಲಿ ಇದು 19.3 ವರ್ಷ ಆಗಿತ್ತು. ಮದುವೆಯನ್ನು ಮುಂದೂಡುತ್ತಿರುವ ಯುವತಿಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಐಎಚ್‌ಡಿಎಸ್‌ ಸಮೀಕ್ಷೆಯೂ ತಿಳಿಸಿದೆ.
1980ರ ಬಳಿಕ ಹುಟ್ಟಿದವರಲ್ಲಿ ಶೇ 41 ಮಂದಿ 16 ರಿಂದ 18 ರ ಹರೆಯದಲ್ಲಿ ಮದುವೆಯಾಗಿದ್ದಾರೆ. ಶೇ 24ಕ್ಕಿಂತಲೂ ಅಧಿಕ ಮಂದಿ 19–21 ವಯಸ್ಸಿನಲ್ಲಿ ಹಸೆಮಣೆ ಏರಿದ್ದಾರೆ. 22–25 ವಯಸ್ಸಿನಲ್ಲಿ ಮದುವೆಯಾದವರ ಪ್ರಮಾಣ ಶೇ 11.5 ರಷ್ಟಿದೆ ಎಂಬ ವಿವರ ವರದಿಯಲ್ಲಿದೆ.
ಮಗಳೆಡೆಗಿನ ಧೋರಣೆಯಲ್ಲಿ ಬದಲಾವಣೆ: ಸಮಾಜದಲ್ಲಿ ಹೆಣ್ಣುಮಕ್ಕಳೆಡೆಗಿನ ಧೋರಣೆ ಬದಲಾಗಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ನಗರ ಪ್ರದೇಶಗಳಲ್ಲಿ ನೆಲೆಸಿರುವ ಮಹಿಳೆಯರಲ್ಲಿ ಶೇ 44.75 ಮಂದಿ ಇಳಿವಯಸ್ಸಿನಲ್ಲಿ ತಮ್ಮ ಹೆಣ್ಣುಮಕ್ಕಳಿಂದ ಹಣಕಾಸಿನ ನೆರವು ಪಡೆಯಲು ಬಯಸಿದ್ದಾರೆ ಎಂದು ವರದಿ ಹೇಳಿದೆ. 2005–05 ರಲ್ಲಿ ಈ ಪ್ರಮಾಣ ಶೇ 32.87 ರಷ್ಟಿತ್ತು.
ವೃದ್ಧಾಪ್ಯದಲ್ಲಿ ಹೆಣ್ಣುಮಕ್ಕಳ ಜತೆ ಜೀವಿಸಲು ಬಯಸುವ ಮಹಿಳೆಯರ ಸಂಖ್ಯೆ ಕೂಡಾ ಹೆಚ್ಚಿದೆ. ಹೆತ್ತವರು ತಮ್ಮ ಗಂಡುಮಕ್ಕಳ ಜತೆ ಮಾತ್ರ ಜೀವಿಸಬೇಕು, ವಿವಾಹಿತ ಹೆಣ್ಣುಮಕ್ಕಳ ಜತೆ ಇರಬಾರದು ಎಂಬ ಸಂಪ್ರದಾಯ ಭಾರತದಲ್ಲಿದೆ. ಆದರೆ ಈ ಸಂಪ್ರದಾಯ ಬದಲಾಗುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.
‘ಮಹಿಳೆಯರು ಇಂದು ಸುಶಿಕ್ಷಿತರಾಗಿದ್ದು, ಸಂಪಾದನೆ ಮಾಡುತ್ತಿದ್ದಾರೆ. ಹೆತ್ತವರು ಇಳಿ ವಯಸ್ಸಿನಲ್ಲಿ ಹೆಣ್ಣುಮಕ್ಕಳ ಜತೆ ವಾಸಿಸಲು ಬಯಸಲು ಇದೂ ಒಂದು ಕಾರಣ’ ಎಂದು ಕೌರ್‌ ಹೇಳುತ್ತಾರೆ.

Comments are closed.