
ಬೆಂಗಳೂರು: ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿವ ಅಂಬರೀಶ್ ರನ್ನು ಕೈ ಬಿಟ್ಟಿರುವುದಕ್ಕೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್, “ಇಂದು ಕನ್ನಡದ ಮೇರುನಟ, ನೇರನುಡಿಯ ಮಗುವಿನ ಮನಸ್ಸಿನಂತಹ ಮನುಷ್ಯನಿಗೆ, ಯಾವ ತಪ್ಪೂ ಮಾಡದೇ ಪ್ರಾಮಾಣಿಕವಾಗಿ ನಡೆದುಕೊಂಡವರಿಗೆ ಮಂತ್ರಿ ಪದವಿಯಿಂದ ಮುಕ್ತಗೊಳಿಸಿ ಶತಮಾನದ ತಪ್ಪನ್ನ ಕಾಂಗ್ರೆಸ್ ಮಾಡಿಬಿಟ್ಟಿತು ಎಂದು ಹೇಳಿದ್ದಾರೆ.
ಅಂತೆಯೇ “ಅದರಲ್ಲೂ ಒಬ್ಬ ಹೆಂಗಸಿನಿಂದ ಅಂತಾ ಟೀವೀಲಿ ನೋಡಿದ ಮೇಲಂತೂ ಬಹಳ ನೊಂದುಕೊಂಡೆ. ಕಾರಣ ನಾನು ಅಂಬರೀಶರನ್ನ 1983ರಿಂದ ಬಲ್ಲೆ.. ಆತ ಬೇಧಬಾವ ಮಾಡದೇ ಎಲ್ಲರನ್ನೂ ಸಮಾನವಾಗಿ ಕೂರಿಸಿ ತಾನೂ ತಿನ್ನುವ ಊಟವನ್ನೇ ಹಂಚಿ ತಿನ್ನುವ..ವಿಶಾಲ ಹೃದಯಿ.. ಅವರ ಒಂದು ತಪ್ಪು ನಾನು ಕಂಡಿದ್ದು ದೇಹಿ ಅಂದವರನ್ನ ನಂಬೋದು..ಅದೇ ಇಂದು ಅವರಿಗೆ ಮುಳುವಾಯಿತು.. ನನ್ನ ಮಗ ಗುರುರಾಜ ಅವರ ಚಿತ್ರದಲ್ಲಿ ಬಾಲನಟನಾಗಿ 88ರಲ್ಲಿ ನಟಿಸಿದ್ದ, ಆಗೇ ಅವರು ಮುಂದೆ ನಾನು ರಾಜಕೀಯದಲ್ಲಿ ಸೇರಿ ಗೆದ್ದು ಎಂಪಿಯಾಗಿ ಮಂತ್ರಿಯಾಗುತ್ತೇನೆ ಅಂದಿದ್ದರು, ಅಷ್ಟು ವಿಶ್ವಾಸ ಅವರಲ್ಲಿತ್ತು ಎಂದು ಹೇಳಿದ್ದಾರೆ.
“ಅವರ ಪ್ರಥಮ ಚುನಾವಣೆಯಲ್ಲಿ ರಾಮನಗರದಲ್ಲಿ ಅಲ್ಪ ಮತದಲ್ಲಿ ಸೋತಾಗ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ… ನಂತರ ನಡೆದ ಮಂಡ್ಯ ಎಂಪಿ ಚುನಾವಣೆಯಲ್ಲಿ ಸುಮಾರು 400 ಹಳ್ಳಿಗಳನ್ನು ಅವರಿಗಾಗಿ ಸುತ್ತಿ ಪ್ರಚಾರ ಮಾಡಿ ಗೆದ್ದಾಗ ಕುಣಿದು ಕುಪ್ಪಳಿಸಿದ್ದೆ.. ಶ್ರೀ ಬಾಲಗಂಗಾಧರ ಸ್ವಾಮೀಜಿ ನೇತೃತ್ವದ ಒಕ್ಕಲಿಗರ ಐತಿಹಾಸಿಕ ಪ್ರತಿಭಟನೆಯಲ್ಲಿ ಅವರೊಟ್ಟಿಗೆ ಭಾಗವಹಿಸಿದ್ದೆ..ಅವರ ಅನೇಕ ಚಿತ್ರಗಳಲ್ಲಿ ಸಹನಟನಾಗಿದ್ದೆ..ನನ್ನ ಪ್ರಥಮ ಚಿತ್ರ ಭಂಡ ನನ್ನ ಗಂಡ ಚಿತ್ರದಲ್ಲಿ ಹಿಂದೂ ಮುಂದು ನೋಡದೇ ಪೋಷಕ ಪಾತ್ರ ಮಾಡಿ ನನಗೆ ಪ್ರೋತ್ಸಾಹಿಸಿದ್ದರು. ಇವೇ ನನ್ನ ಅವರ ಒಡನಾಟದ ಸಂಬಂಧ..
ಅವರೇ ಬೇರೆ ಪಕ್ಷ ನಾನೇ ಬೇರೆ ಪಕ್ಷ.. ಆದರೂ ಅವರು ನನ್ನ ಅಣ್ಣ ಎಂಬುವಂಥ ಭಾವನೆ…ಇಡೀ ಕಾಂಗ್ರೆಸ್ ಪಕ್ಷದ ನಾಯಕರು ಒಟ್ಟು ಸೇರಿದರೂ ಅಂಬರೀಶ್ ಸಮವಾಗಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಯನ್ನು ಕಣ್ಣು ಬಿಡದ ಎಳಸು ಚಾಡಿಗೆ ಕೈ ಬಿಡುತ್ತಾರೆ ಎಂದರೆ ಇದಕ್ಕಿಂತ ದುರಂತ ಬೇರೆ ಯಾವುದೂ ಇಲ್ಲ ಅನ್ನಿಸಿತು. ರಾಜಕೀಯ ಪದವಿ 5 ವರ್ಷ.. ಆದರೆ ಅವರ ಮೇಲೆ ಕನ್ನಡಿಗರ ಪ್ರೀತಿ ಶತಮಾನಗಳೂ ದಾಟಿ… ಡಿಯರ್ ಅಂಬಿ ಸರ್ ನೀವು ನೀವೆ:)
2018ಕ್ಕೆ ಕರ್ನಾಟಕದ ಜನ ರಾಜಕೀಯ ಬದಲಾವಣೆ ಮಾಡುತ್ತಾರೆ..ಎಲ್ಲರನ್ನ ಮರೆಯುತ್ತಾರೆ. ನೀವು ಮಾತ್ರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತೀರಿ, ಹೊಡೀರಿ ಗೋಲಿ ಹಚ್ಚಿ ಬಣ್ಣ..ಪಡೀರಿ ಚಪ್ಪಾಳೆ..ಉರೀಲಿ ಉರಿಸಿದವರ ತಳ…ಯಾರು ಏನೇ ಮಾಡಿದ್ರು ನೀವು ಬರೀ ಮಂಡ್ಯದ ಗಂಡಲ್ಲ… ಕರ್ನಾಟಕದ ಗಂಡು.. ಇಡೀ ಚಿತ್ರರಂಗ ನಿಮ್ಮೊಟ್ಟಿಗಿದೆ..ಎಂದು ಜಗ್ಗೇಶ್ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
Comments are closed.