ಕರ್ನಾಟಕ

ಮೈಸೂರು ಮಹಾರಾಜನ ಮದುವೆಗೆ ರಾಷ್ಟ್ರಪತಿ, ಪ್ರಧಾನಿಗೂ ಆಮಂತ್ರಣ

Pinterest LinkedIn Tumblr

odeyar

ಮೈಸೂರು: ಮಹಾರಾಜ ಯದುವೀರ ಕೃಷ್ಣದತ್ತ ಮಹಾರಾಜ ಒಡೆಯರ್ ವಿವಾಹ ಕಾರ್ಯಕ್ರಮಗಳು ಇದೇ 24ರಿಂದ ಆರಂಭವಾಗಲಿದ್ದು, 29ರವರೆಗೆ ನಡೆಯಲಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ. ಜೂ.24ರಂದು ಕುಟುಂಬ ವರ್ಗದವರೊಡನೆ ಕೆಲವು ಕಾರ್ಯಕ್ರಮಗಳು ನಡೆಯಲಿದ್ದು, 25ರಂದು ಬೆಳಗ್ಗೆ 4 ಗಂಟೆಯಿಂದ ವಿವಾಹ ಮಹೋತ್ಸವದ ವಿವಿಧ ವಿಧಿ-ವಿಧಾನಗಳು ನೆರವೇರಲಿದೆ.  ಅಂದು ಮೊದಲು ನಾಂದಿ, ನಂತರ ದೇವತಾಕಾರ್ಯ, ಚಪ್ಪರ ಪೂಜೆ ನಡೆಸಿ ಮನೆತನದ ಹಿರಿಯರ ಪಾದ ಪೂಜೆ ನಡೆಯುವುದು. ಪರಕಾಲ ಮಠದ ಸ್ವಾಮೀಜಿಗಳ ಪಾದ ಪೂಜೆ ನೆರವೇರಿಸಲಾಗುವುದು.

 26ರಂದು ಕುಟುಂಬದವರ ಜತೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಸಿ 27ರಂದು ಅರಮನೆಯ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.05ರಿಂದ 9.30ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ವಿವಾಹ ನೆರವೇರಲಿದೆ ಎಂದರು. ಅಂದು ಸಂಜೆ ಕಲ್ಯಾಣ ಮಂಟಪದಲ್ಲಿ ಉಯ್ಯಾಲೆ ಕಾರ್ಯಕ್ರಮ, 28ರಂದು ದರ್ಬಾರ್ ಹಾಲ್‌ನಲ್ಲಿ ಆರತಕ್ಷತೆ, 29ರಂದು ಸಾರ್ವಜನಿಕರಿಗಾಗಿ ಆರತಕ್ಷತೆ ಹಾಗೂ ಮೆರವಣಿಗೆ ಏರ್ಪಡಿಸಲು ಉದ್ದೇಶಿಸಿದ್ದು, ಮೆರವಣಿಗೆಗೆ ಪೊಲೀಸರ ಅನುಮತಿ ಸಿಕ್ಕಿಲ್ಲ. ಅದು ದೊರೆತ ನಂತರ ತಿಳಿಸಲಾಗುವುದು ಎಂದು ಹೇಳಿದರು.

ವಿವಾಹ ಸಮಾರಂಭಕ್ಕೆ ರಾಷ್ಟ್ರಪತಿ, ಪ್ರಧಾನಿ , ರಾಜ್ಯದ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದು, ಕುಟುಂಬ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು. ಮದುವೆಗೆ 2000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲು ನಿರೀಕ್ಷೆ ಇದ್ದು, ಜು.2ರಂದು ಬೆಂಗಳೂರು ಅರಮನೆ ಆವರಣದಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ರಾಜಮನೆತನದ ಮನೆ ಎಂದರೆ ಭಕ್ಷ್ಯಭೋಜನಗಳ ವ್ಯವಸ್ಥೆ ಇರುತ್ತದೆ. ಆದರೆ ಈ ಬಾರಿ ಸಿಹಿ ತಿಂಡಿಗಳು ಕಡಿಮೆ ಇರುತ್ತದೆ.  ಮಹಾರಾಜ ಯದುವೀರ್ ಮದುವೆ ಸಂಭ್ರಮಕ್ಕೆ ಕೇವಲ ಅರಮನೆ ಮಾತ್ರವಲ್ಲದೆ ಇಡೀ ಮೈಸೂರು ನಗರ ಸಜ್ಜಾಗುತ್ತಿದೆ. ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರು ತಮ್ಮ ಮನೆ ಮದುವೆ ಎಂಬಂತೆ ಸಂಭ್ರಮಿ ಸುತ್ತಿರುವುದು ವಿಶೇಷವಾಗಿದೆ.

Comments are closed.