
ತುಮಕೂರು: ಪ್ರೇಮಿಗಳ ಮೇಲೆ ಡ್ರಾಗರ್‌ನಿಂದ ಹಲ್ಲೆ ನಡೆಸಿ ಅವರ ಬಳಿಯಿದ್ದ ದ್ವಿಚಕ್ರ ವಾಹನ, 2 ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ 5 ಮಂದಿ ಆರೋಪಿಗಳನ್ನು ಇಲ್ಲಿನ ಕ್ಯಾತ್ಸಂದ್ರ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ತಿಳಿಸಿದರು.
ನಗರಕ್ಕೆ ಸಮೀಪವಿರುವ ಕ್ಯಾತ್ಸಂದ್ರ ಪೊಲೀಸ್ ಠಾಣೆ ಆವರಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಪ್ರವಾಸಿ ತಾಣವಾಗಿರುವ ದೇವರಾಯನದುರ್ಗ-ನಾಮದ ಚಿಲುಮೆಯಲ್ಲಿ ಕುಳಿತಿದ್ದ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿ ಬೆದರಿಸಿ ಅವರ ಬಳಿಯಿದ್ದ ನಗದು, ಮೊಬೈಲ್ ಹಾಗೂ ದ್ವಿಚಕ್ರ ವಾಹನವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಬೆಂಗಳೂರಿನ ಅತ್ತಿಬೆಲೆ ವಾಸಿ ರಾಕೇಶ ಅಲಿಯಾಸ್ ರಾಕಿ (22), ಅನ್ಸರ್‌ಪಾಷ ಅಲಿಯಾಸ್ ಪಾಷ (21), ಹೆಗ್ಗೆರೆಯ ವಾಸಿಗಳಾದ ಗಿರೀಶ (19), ಅಂಜನಮೂರ್ತಿ (21) ಹಾಗೂ ನಿಥಿನ್ ಅಲಿಯಾಸ್ ಡ್ಯಾನಿಯಲ್ (18) ಎಂಬುವರನ್ನು ಮಾಲು ಸಮೇತ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದರು.
ಜೂ. 15 ರಂದು ನಾಮದ ಚಿಲುಮೆ ನಿರ್ಜನ ಪ್ರದೇಶದಲ್ಲಿ ಮಾದಗೊಂಡನಹಳ್ಳಿಯ ಮಂಜುನಾಥ್ ಮತ್ತು ಆತನ ಸ್ನೇಹಿತೆ ಮಾತನಾಡುತ್ತಾ ಕುಳಿತಿದ್ದಾಗ ಅಲ್ಲಿಗೆ ಬಂದ ಇಬ್ಬರು ಯುವಕರು ಅವರಿಗೆ ಹೆದರಿಸಿ ಮಂಜುನಾಥ್‌ನಿಗೆ ಡ್ರಾಗರ್‌ನಿಂದ ತಲೆಗೆ ಹೊಡೆದು ಹೊಟ್ಟೆಗೆ ಚುಚ್ಚಿ ಮೊಬೈಲ್, ಹಣ, ದ್ವಿಚಕ್ರ ವಾಹನ ಕಿತ್ತುಕೊಂಡು ಹೋಗಿದ್ದರು. ಮಂಜುನಾಥನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಅಡಿಷನಲ್ ಎಸ್ಪಿ ಜಿ.ಬಿ. ಮಂಜುನಾಥ್‌ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ಆರೋಪಿಗಳು ಸುಲಿಗೆ ಮಾಡಿದ ನಂತರ ಗಾಯಾಳುವಿನ ಹೊಂಡಾಶೈನ್ ವಾಹನದಲ್ಲಿ ಆರೋಪಿಗಳು ಹೋಗಿರುವ ಬಗ್ಗೆ ಹಾಗೂ ತುಮಕೂರಿಗೆ ಹೋಗುವ ಮಧ್ಯೆದಲ್ಲಿ ಎದುರುಗಡೆ ಹಾದು ಹೋದ ವಾಹನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿ ಕೆಂಪು ಬಣ್ಣದ ಡಿಯೋ ಗಾಡಿಯಲ್ಲಿ ಹೋದ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ವಿಶೇಷ ತಂಡದ ಪೊಲೀಸರು ಯಶಸ್ವಿಯಾದರು ಎಂದು ಅವರು ವಿವರಿಸಿದರು.
ನಗರ ಡಿವೈಎಸ್ಪಿ ಚಿದಾನಂದಸ್ವಾಮಿ ನೇತೃತ್ವದಲ್ಲಿ ಸಿಪಿಐ ಬಾಳೇಗೌಡ, ಪಿಎಸ್ಐಗಳಾದ ಕಿರಣ್‌ಕುಮಾರ್, ರವಿ, ಕಾಂತರಾಜು, ಜಿ.ಪಿ. ರಾಜು ಮತ್ತು ಸಿಬ್ಬಂದಿಗಳಾದ ಸೈಮನ್ ವಿಕ್ಟರ್, ಶಾಂತಕುಮಾರ್, ಉಮೇಶ್, ಲೋಕೇಶ್, ನಾಗರಾಜು, ಮಂಜುನಾಥ, ನಾರಾಯಣ, ರಮೇಶ್, ಬಸವರಾಜು, ಮಂಜುನಾಥ್, ಸಿದ್ದಪ್ಪ, ದೇವರಾಜು, ನರಸಿಂಹರಾಜುರವರ ತಂಡ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹಾಗೂ ಅಡಿಷನಲ್ ಎಸ್ಪಿ ಜಿ.ಬಿ. ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನಾ ಪತ್ರ ನೀಡಿ 10 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ.
Comments are closed.