ಅಂತರಾಷ್ಟ್ರೀಯ

ಮಲ್ಯ ಹಾಜರಿದ್ದ ಸಮಾರಂಭದಲ್ಲಿ ಭಾರತದ ಹೈಕಮಿಶನರ್‌: ಭುಗಿಲೆದ್ದ ವಿವಾದ

Pinterest LinkedIn Tumblr

Mallya Book Release-700ಲಂಡನ್‌ : ಒಂಬತ್ತು ಸಾವಿರ ಕೋಟಿ ರೂ. ಬ್ಯಾಂಕ್‌ ಸಾಲ ಬಾಕಿ ಇರಿಸಿ ಬ್ರಿಟನ್‌ಗೆ ಪಲಾಯನ ಗೈದಿರುವ ಕಳಂಕಿತ ಮದ್ಯ ಉದ್ಯಮಿ ವಿಜಯ್‌ ಮಲ್ಯ ಅವರು ಲಂಡನ್‌ನಲ್ಲಿ ಪಾಲ್ಗೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಡನ್‌ನಲ್ಲಿನ ಭಾರತೀಯ ಹೈಕಮಿಶರ್‌ ಕೂಡ ಪಾಲ್ಗೊಂಡಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ವಿಜಯ್‌ ಮಲ್ಯ ಅವರು ಭಾರತದಲ್ಲಿನ ನ್ಯಾಯಾಲಯವೊಂದರಿಂದ ಈಗಾಗಲೇ ಘೋಷಿತ ಅಪರಾಧಿ ಎನಿಸಿಕೊಂಡಿದ್ದಾರೆ. ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವ ಪ್ರಯತ್ನವೂ ತೀವ್ರವಾಗಿ ಜಾರಿಯಲ್ಲಿದೆ.

ಭಾರತೀಯ ಲೇಖಕ ಸುಹೇಲ್‌ ಸೇಟ್‌ ಅವರು ಪತ್ರಕರ್ತ ಸನ್ನಿ ಸೇನ್‌ ಅವರೊಡಗೂಡಿ ಬರೆದಿರುವ “ಮಂತ್ರಾಸ್‌ ಫಾರ್‌ ಸಕ್ಸಸ್‌: ಇಂಡಿಯಾಸ್‌ ಗ್ರೇಟೆಸ್ಟ್‌ ಸಿಇಓಸ್‌ ಟೆಲ್‌ ಯು ಹೌ ಟು ವಿನ್‌‌’ ಎಂಬ ಪುಸ್ತಕದ ಬಿಡುಗಡೆ ಸಮಾರಂಭ ಲಂಡನ್‌ ಸ್ಕೂಲ್‌ ಆಫ್ ಇಕಾನಮಿಕ್ಸ್‌ನಲ್ಲಿ ನಡೆದಿತ್ತು. ಈ ಸಮಾರಂಭದಲ್ಲಿ ಲಂಡನ್‌ ನಲ್ಲಿನ ಭಾರತೀಯ ಹೈಕಮಿಶನರ್‌ ನವತೇಜ್‌ ಶರಣ್‌ ಅವರು ಪಾಲ್ಗೊಂಡಿದ್ದರು. ಇದೇ ಸಮಾರಂಭದಲ್ಲಿ ಕಳಂಕಿತ ಉದ್ಯಮಿ ವಿಜಯ್‌ ಮಲ್ಯ ಕೂಡ ಉಪಸ್ಥಿತರಿದ್ದರು.

ವಿಜಯ್‌ ಮಲ್ಯ ಉಪಸ್ಥಿತರಿದ್ದ ಈ ಪುಸ್ತಕ ಬಿಡುಗಡೆ ಸಮಾರಂಭವು ಒಂದು ಮುಕ್ತ ಸಮಾರಂಭವಾಗಿದ್ದು ಟ್ವಿಟರ್‌ ಮೂಲಕ ಅದನ್ನು ಪ್ರಚುರಪಡಿಸಲಾಗಿತ್ತು ಮತ್ತು ಯಾರಿಗೂ ನಿರ್ದಿಷ್ಟ ಆಹ್ವಾನ ಪತ್ರವನ್ನು ಕಳುಹಿಸಲಾಗಿರಲಿಲ್ಲ ಎಂದು ಭಾರತೀಯ ಹೈಕಮಿಶನರ್‌ ಉಪಸ್ಥಿತಿಯ ವಿವಾದಕ್ಕೆ ಸ್ಪಷ್ಟೀಕರಣ ನೀಡುತ್ತಾ ಲೇಖಕ ಸೇಟ್‌ ಹೇಳಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಜಯ್‌ ಮಲ್ಯ ಉಪಸ್ಥಿತರಿರುವುದನ್ನು ತಿಳಿದೊಡನೆಯೇ ಭಾರತೀಯ ಹೈಕಮಿಶನರ್‌ ಆ ಬಗ್ಗೆ ತಮ್ಮ ಅಸಂತೃಪ್ತಿಯನ್ನು ವ್ಯಕ್ತಪಡಿಸಿ ಸಮಾರಂಭದಿಂದ ಒಡನೆಯೇ ನಿರ್ಗಮಿಸಿದರು ಎಂದು ಸೇಟ್‌ ಹೇಳಿದರು.
-ಉದಯವಾಣಿ

Comments are closed.