ಚಿತ್ರ: ಬೀಟ್
ನಿರ್ಮಾಪಕ: ಕೆ. ರಾಜು
ನಿರ್ದೇಶಕ: ಘನಶ್ಯಾಮ್
ತಾರಾಗಣ: ಅಜಿತ್, ಹರ್ಷಿಕಾ ಪೂಣಚ್ಚ, ಅಮಿತ್, ಶಂಕರ್ ಅಶ್ವತ್, ಶ್ರೀನಿವಾಸ ಪ್ರಭು ಇತರರು
*
ಇಂಗ್ಲಿಷ್ನ ‘ಬೀಟ್’ ಪದವನ್ನು ನಾವು ಎರಡು ಬಗೆಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಒಂದು ಎದುರಾಳಿಯನ್ನು ಸೋಲಿಸುವುದು, ಇನ್ನೊಂದು ಎದುರಿನವರನ್ನು ಹೊಡೆಯುವುದು. ಆದರೆ ‘ಬೀಟ್’ ಸಿನಿಮಾ ನೋಡುವಾಗ ಇದರಲ್ಲಿ ಯಾವ ಅರ್ಥವನ್ನು ಚಿತ್ರಕ್ಕೆ ಆರೋಪಿಸಬೇಕು ಎಂಬ ಗೊಂದಲ ಉಂಟಾಗುತ್ತದೆ. ಏಕೆಂದರೆ ಪ್ರೇಕ್ಷಕ ಮನಸೋಲುವಂಥದ್ದು ಚಿತ್ರದಲ್ಲಿ ಏನೂ ಇಲ್ಲ. ನಿರ್ದೇಶಕರು ಮಾತ್ರ ತಮ್ಮ ಕಥೆ ಮತ್ತು ದೃಶ್ಯ ಸರಣಿಯಿಂದ ಪ್ರೇಕ್ಷಕ ಮಹಾಪ್ರಭುವನ್ನು ಚೆನ್ನಾಗಿಯೇ ನೋಯಿಸುತ್ತಾರೆ. ಅರ್ಥಾತ್ ಬೀಟ್ ಮಾಡಿದ್ದಾರೆ.
ಐದು ವರ್ಷದ ಪ್ರೀತಿ ತನ್ನ ತಂದೆಗೆ ಗೊತ್ತಾದರೆ ಅವರು ಮದುವೆಗೆ ಒಪ್ಪಿಕೊಳ್ಳುವುದಿಲ್ಲ ಎಂದು ನಾಯಕಿ ತನು ತನ್ನ ಪ್ರೀತಿಯನ್ನು ಗುಟ್ಟಾಗಿಯೇ ಇಟ್ಟಿರುತ್ತಾಳೆ. ನಾಯಕ ಭರತ್ ಆಕೆ ಹಿಂದೆ ಅಲೆದಾಡುತ್ತಾನೆ. ಪೊರ್ಕಿಯಂತೆ ಛೇಡಿಸುತ್ತಾನೆ. ಆತನಿಂದ ದೂರವಿರು ಎಂದು ತನುಗೆ ಸ್ನೇಹಿತೆ ಶೈಲು ಹೇಳುತ್ತಿರುವಾಗಲೇ ಅವರ ಪ್ರೀತಿಯ ಗುಟ್ಟು ರಟ್ಟಾಗುತ್ತದೆ. ನಾಯಕಿಯ ತಂದೆಗೂ ವಿಷಯ ತಿಳಿದು ಆಕೆಯನ್ನು ಬಂಧನದಲ್ಲಿಡುತ್ತಾನೆ. ಪ್ರೇಮಿಯನ್ನು ಒಂದು ಕ್ಷಣವೂ ಬಿಟ್ಟಿರಲಾರದ ತನು ತನ್ನ ಸುತ್ತೆಲ್ಲ ಆತನನ್ನೇ ಕಲ್ಪಿಸಿಕೊಂಡು ನರಳುತ್ತಾಳೆ. ಅದು ವಿಶುವಲ್ ಹ್ಯಾಲುಸಿನೇಶನ್ ಎಂಬ ಕಾಯಿಲೆ. ಮಗಳ ಯಾತನೆ ನೋಡಲಾಗದ ತಂದೆ ಮತ್ತೆ ಭರತ್ ಜೊತೆಗೇ ಆಕೆಯ ಮದುವೆ ಮಾಡಿಸುತ್ತಾರೆ.
ಹೆಂಡತಿಯ ವಿಚಿತ್ರ ವರ್ತನೆಯಿಂದ ಭರತ್ ಕಂಗೆಡುತ್ತಾನೆ. ಇವರಿಬ್ಬರ ಸಂಸಾರ ಸರಿಯಾದ ಹಳಿಯಲ್ಲಿ ನಡೆಯುತ್ತಿಲ್ಲ ಎಂದು ಅರಿತುಕೊಂಡ ಶೈಲು ಹೇಗಾದರೂ ಭರತ್ನನ್ನು ವರಿಸಬೇಕು ಎಂದು ಕಾಯುತ್ತಿರುತ್ತಾಳೆ. ತನ್ನ ಆಸೆ ಪೂರೈಸಿಕೊಳ್ಳಲು ಸ್ನೇಹಿತೆ ತನುಗೆ ಇಂಜೆಕ್ಷನ್ ನೆಪದಲ್ಲಿ ಸಾವಿನ ದಾರಿ ತೋರುತ್ತಾಳೆ. ಅಂತಿಮವಾಗಿ ತನು ಸಾವಿಗೆ ನಿಜವಾಗಿ ಕಾರಣರಾದವರು ಯಾರು, ಶೈಲೂ ಆಡಿದ ಮೋಸದಾಟಕ್ಕೆ ಭರತ್ ಒಲಿಯುತ್ತಾನಾ ಎಂಬುದು ಕ್ಲೈಮ್ಯಾಕ್ಸ್.
ಮೂರು ವರ್ಷಗಳಷ್ಟು ಹಳೆಯ ಚಿತ್ರದ ಕಥೆಯಲ್ಲಿ ಗಟ್ಟಿತನವಿಲ್ಲ. ಬಹುಶಃ ಅದನ್ನು ತಿಳಿದೇ ನಿರ್ದೇಶಕರು ಚಿತ್ರಕಥೆಯನ್ನು ಹಿಂದುಮುಂದಾಗಿ ಹೇಳುವ ತಂತ್ರ ಅನುಸರಿಸಿದ್ದಾರೆ. ಆದರೆ ಅದು ಚಿತ್ರಕ್ಕೆ ಮೈನಸ್ ಪಾಯಿಂಟ್ ಆಗಿ ಪರಿಣಮಿಸಿದೆ. ಪ್ರೇಕ್ಷಕನಿಗೆ ಗೋಜಲು ಗೋಜಲು ಅನ್ನಿಸುತ್ತದೆ. ನಾಯಕಿಯ ಕಾಯಿಲೆಯನ್ನು ಸಮರ್ಥವಾಗಿ ತೋರಿಸುವ ಸಾಧ್ಯತೆಗಳನ್ನು ನಿರ್ದೇಶಕರು ಕೈ ಚೆಲ್ಲಿದ್ದಾರೆ. ಚಿತ್ರದ ‘ಶ್ರೀರಾಂಪುರದ ಹುಡುಗ, ಮಲ್ಲೇಶ್ವರಂ ಹುಡುಗಿ’ ಎಂಬ ಅಡಿಟಿಪ್ಪಣೆಯನ್ನು ಸಮರ್ಥಿಸುವ ದೃಶ್ಯಗಳೇ ನಾಪತ್ತೆಯಾಗಿವೆ.
ಇನ್ನು ನಟನೆಯ ವಿಚಾರದಲ್ಲಿ ಬಂದರೆ ನಾಯಕಿಗಿಂತ ಆಕೆಯ ಸ್ನೇಹಿತೆಯೇ ಅಡ್ಡಿ ಇಲ್ಲ. ಅಜಿತ್ ನಟನೆಯಲ್ಲೂ ಲವಲವಿಕೆಯಿಲ್ಲ. ರವಿ ಬಸ್ರೂರು ಸಂಗೀತ ಚಿತ್ರಕ್ಕೆ ಹೆಚ್ಚಿನ ಮೌಲ್ಯವನ್ನೇನೂ ಸೇರಿಸುವುದಿಲ್ಲ.
ಮನೋರಂಜನೆ
Comments are closed.