
ಮಂಗಳೂರು : ತಣ್ಣೀರುಬಾವಿಯಲ್ಲಿ ಗಾಲ್ಫ್ಕೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಣ್ಣೀರು ಬಾವಿಯಲ್ಲಿ ಗಾಲ್ಫ್ ಕೋರ್ಸ್ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸಿ, 2 ವರ್ಷ ಕಳೆದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸಭೆಯನ್ನು ಅರ್ಧದಲ್ಲಿಯೆ ಮೊಟಕುಗೊಳಿಸಿ ಸಭೆಯಿಂದ ಹೊರನಡೆದ ಘಟನೆ ಬುಧವಾರ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಗಾಲ್ಫ್ ಕೋರ್ಸ್ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದ ಅವರು, ತಣ್ಣೀರು ಬಾವಿಯಲ್ಲಿ ಗಾಲ್ಫ್ಕೋರ್ಸ್ ನಿರ್ಮಾಣಕ್ಕೆ ಸರಕಾರ 2 ವರ್ಷಗಳ ಹಿಂದೆ ಭೂಮಿಯನ್ನು ಹಸ್ತಾಂತರಿಸಿತ್ತು. 135 ಎಕರೆ ಭೂಮಿಯನ್ನು ಸರಕಾರ ಹಸ್ತಾಂತರಿಸಿದ್ದರೂ ಯೋಜನೆಯನ್ನು ನಿರ್ಮಾಣ ಮಾಡಬೇಕಾದ ಸಂಸ್ಥೆ ಕಾಮಗಾರಿಯನ್ನು ಇನ್ನು ಆರಂಭಿಸಿಲ್ಲ. ಗಾಲ್ಫ್ ಕೋರ್ಸ್ ನಿರ್ಮಿಸಲು 135ಎಕರೆ ಭೂಮಿಯನ್ನು ಈಗಾಗಲೇ ತಣ್ಣೀರು ಬಾವಿಯಲ್ಲಿ ಓಪಸ್ ಹೋಟೆಲ್ ರೆಸಾರ್ಟ್ ಲಿಮಿಟೆಡ್ ಸಂಸ್ಥೆಗೆ 2 ವರ್ಷಗಳ ಹಿಂದೆಯೇ ಹಸ್ತಾಂತರಿಸಲಾಗಿದೆ. ಆದರೂ ಇಲ್ಲಿತನಕ ಯಾವುದೇ ಪ್ರಗತಿ ಆಗಿಲ್ಲ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಓಪಸ್ ಹೋಟೆಲ್ ರೆಸಾರ್ಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಮಾತನಾಡಿ, ಸಿಆರ್ ಝಡ್ ಅನುಮತಿ ಸಿಗುವ ತನಕ ಈ ವಿಷಯದಲ್ಲಿ ಮುಂದುವರಿಯಲು ಕಷ್ಟ ಸಾಧ್ಯ ಎಂದು ಹೇಳಿದರು.
ಈ ಉತ್ತರಕ್ಕೆ ತೃಪ್ತರಾಗದ ಜಿಲ್ಲಾಧಿಕಾರಿಗಳು ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಆಗದಿರುವ ಬಗ್ಗೆ ಶೋಕಾಸ್ ನೋಟೀಸ್ ನೀಡಲು ಆದೇಶಿಸಿ ಸಭೆಯನ್ನು ಅರ್ಧದಲ್ಲಿಯೆ ಮೊಟಕುಗೊಳಿಸಿ ಹೊರನಡೆದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ, ಕಂದಾಯ ಇಲಾಖೆ, ಮೀನುಗಾರಿಕೆ ಬಂದರು ಇಲಾಖೆ ಅಧಿಕಾರಿಗಳು ಮತ್ತಿತರು ಉಪಸ್ಥಿತರಿದ್ದರು.
Comments are closed.