ಕರ್ನಾಟಕ

ಸೋನಿಯಾ ಒಪ್ಪಿದರೆ ಸರ್ಜರಿ : ಸಂಪುಟ ಪುನಾರಚನೆಗೆ ಸಿದ್ದು ಶಪಥ-ಸಚಿವರ ಶತಪತ

Pinterest LinkedIn Tumblr
C M Entering in to the Cabinet Hall in Vidhana Souda Today.
C M Entering in to the Cabinet Hall in Vidhana Souda Today.

ಬೆಂಗಳೂರು, ಜೂ. ೧೫- ಸಚಿವ ಸಂಪುಟ ಪುನಱ್ರಚನೆ ಖಚಿತವಾಗುತ್ತಿದ್ದಂತೆ ಸಂಪುಟದಲ್ಲಿ ಮುಂದುವರೆಯಲು ಸಚಿವರು ಒಂದೆಡೆ ಕಸರತ್ತು ನಡೆಸಿದರೆ, ಮತ್ತೊಂದೆಡೆ ಸಚಿವಾಕಾಂಕ್ಷಿಗಳು ನಡೆಸಿರುವ ಲಾಬಿಯಿಂದ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಮಂತ್ರಿಗಳಿಗೆ ಗುಡ್ ಬೈ

`ಮಂತ್ರಿಗಳೇ, ಕಳೆದ ಮೂರು ವರ್ಷಗಳಿಂದ ನೀವೆಲ್ಲಾ ಕಷ್ಟಪಟ್ಟು ಕೆಲಸ ಮಾಡಿದ್ದೀರಿ. ಇದಕ್ಕಾಗಿ ನಿಮಗೆ ಅಭಿನಂದನೆ’ ಎಂಬ ಮಾತುಗಳು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಂದ ಹೊರ ಬಿದ್ದಾಗ ಸಚಿವರ ವಲಯದಲ್ಲಿ ಒಂದು ರೀತಿಯ ನಡುಕ.

`ಹೌದು, ಚುನಾವಣೆಗೆ ಇನ್ನಿರುವುದು ಎರಡು ವರ್ಷ. ಕೆಲವರನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ಬರುವವರನ್ನು ನಿಯೋಜಿಸಬೇಕಿದೆ. ಹೀಗಾಗಿ ನೀವೆಲ್ಲರೂ ಸಹಕರಿಸಬೇಕು’ ಎಂದು ಗಂಭೀರ ಧ್ವನಿಯಲ್ಲಿ ಸಿದ್ದರಾಮಯ್ಯ ಉದ್ಗರಿಸಿದಾಗ ಎದೆಬಡಿತ ಜೋರು. ಆ ಸಮಯದಲ್ಲಿ ಕೆಲವರು ಮೇಜಿನ ಮುಂದಿದ್ದ ಲೋಟದಿಂದ ನೀರನ್ನು ಕುಡಿದದ್ದು ಮಾರ್ಮಿಕವಾಗಿತ್ತು.

ಮುಖ್ಯಮಂತ್ರಿಗಳ ಮಾತನ್ನು ಆಲಿಸಿದ ನಂತರ ಅಳೆದೂ ಸುರಿದೂ ಮಾತನಾಡಿದ `ಕೆಲವರು ಸಚಿವರೂ ನಿಮ್ಮ ಕರ್ತವ್ಯ ನೀವು ಮಾಡಿ. ನಿಮ್ಮ ಹಿಂದೆ ನಾವಿದ್ದೇವೆ’ ಎಂದು ಬಿಗುಮಾನದಿಂದ ನುಡಿದದ್ದು ಪರಿಸ್ಥಿತಿಯ ದಿಕ್ಸೂಚಿ.

ಇಂದು ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಱ್ರಚನೆ ವಿಚಾರ ಪ್ರಸ್ತಾಪಿಸಿ ಸಹಕರಿಸುವಂತೆ ಸಚಿವರಲ್ಲಿ ಮನವಿ ಮಾಡಿದಾಗ ಕೆಲವು ಸಚಿವರು ತಬ್ಬಿಬ್ಬಾಗುವಂತಾಯಿತು.

ಸಚಿವ ಸಂಪುಟದಲ್ಲಿ ಯಾಱ್ಯಾರು ಉಳಿಯುವರೋ, ಯಾಱ್ಯಾರು ಸಚಿವ ಸ್ಥಾನ ಕಳೆದುಕೊಳ್ಳಬೇಕಾದೀತು ಎಂದು ನಾನು ಈಗಲೇ ಹೇಳಲಾರೆ. ಹೈಕಮಾಂಡ್ ಹೇಳಿದಂತೆ ಕೇಳಬೇಕಾಗಿರುವುದರಿಂದ ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ನಿಮ್ಮೆಲ್ಲರಿಗೂ `ಗುಡ್ ಬೈ’ ನಿಮಗೆ ಒಳ್ಳೆಯದಾಗಲಿ ಎಂದು ಸಿದ್ದು ಶುಭ ಹಾರೈಸಿದಾಗ ಪರಿಷತ್ ಸಭೆಯಲ್ಲಿ ಅವಕ್ಕಾಗುವಂತ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಈ ಮೂಲಗಳು ತಿಳಿಸಿವೆ.

ಸಂಪುಟ ಪುನಱ್ರಚನೆಯಲ್ಲಿ ಯಾಱ್ಯಾರ ಪರಿಸ್ಥಿತಿ ಏನಾಗಲಿದೆಯೋ, ಯಾರು ಬೇಸರಿಸಿಕೊಳ್ಳಬಾರದು. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕೆಂದು ಹೇಳಿದರು.

ಕೆಲವರು ಸಚಿವರಾಗಿ ಮುಂದುವರೆಯಬಹುದು. ಮತ್ತೆ ಕೆಲವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಬಹುದು. ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆ ಎದುರಿಸಬೇಕಾಗಿರುವುದರಿಂದ ಈಗಲೇ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಬೇಕಾಗಿದೆ ಎಂದು ಹೇಳಿದರು.

ಯಾಱ್ಯಾರು ಇಱ್ತೀರಿ. ಯಾಱ್ಯಾರು ಸಚಿವ ಸ್ಥಾನ ಕಳೆದುಕೊಳ್ಳುವಿರಿ ಎಂಬುದು ಗೊತ್ತಿಲ್ಲ. ಎಲ್ಲ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಹೇಳಿದರು.

ಮಂತ್ರಿ ಪರಿಷತ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಚಿವ ಸಂಪುಟ ಪುನರ್ ರಚನೆಗೆ ಮುಂದಾಗಿರುವ ವಿಚಾರವನ್ನು ಪ್ರಸ್ತಾಪಿಸಿ, ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದಾಗ ಎಲ್ಲ ಸಚಿವರು ಯಾವುದೇ ತಕರಾರು ಎತ್ತದೆ ಸಂಪುಟ ಪುನರ್ ರಚನೆಗೆ ಒಪ್ಪಿಗೆ ನೀಡಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸಂಪುಟ ಪುನರ್ ರಚನೆ ಕುರಿತಂತೆ ಹೈಕಮಾಂಡ್ ಜತೆ ಚರ್ಚಿಸಿ ಅದರ ಆದೇಶದನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ಧರಾಮಯ್ಯ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಯಾರೂ ಅಪಸ್ವರ ಎತ್ತಲಿಲ್ಲ.

ಸಿಮ್ಲಾ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ನಾಳೆ ದೆಹಲಿಗೆ ವಾಪಸ್ಸಾಗಲಿದ್ದು ನಾಡಿದ್ದು ಒಂದು ದಿನ ದೆಹಲಿಯಲ್ಲಿರುತ್ತಾರೆ. ಆನಂತರ ಅವರು ಅಮೆರಿಕಾ ಪ್ರವಾಸಕ್ಕೆ ತೆರಳಲಿದ್ದಾರೆ. ಪರಿಸ್ಥಿತಿ ಈಗಿರುವಾಗ ಸೋನಿಯಾಗಾಂಧಿ ಅವರ ಭೇಟಿಗೆ ಅವಕಾಶ ದೊರೆತರೆ ಸಿದ್ದರಾಮಯ್ಯನವರು ನಾಳೆ ಸಂಜೆಯೊಳಗೆ ದೆಹಲಿಗೆ ತೆರಳಿ ನಾಡಿದ್ದು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡುವರಿದ್ದಾರೆ. ಒಂದು ವೇಳೆ ಈ ಭೇಟಿ ಸಾಧ್ಯವಾಗದಿದ್ದಲ್ಲಿ ಸಂಪುಟ ಪುನರ್ ರಚನೆ ಮತ್ತೆ ಮುಂದಕ್ಕೆ ಹೋಗಲಿದೆ.

ಒಂದು ವೇಳೆ ಸೋನಿಯಾ ಭೇಟಿಗೆ ಅವಕಾಶ ದೊರೆತರೂ ಸಂಪುಟ ಪುನರ್ ರಚನೆಗೆ ಅವರು ಒಪ್ಪಿಗೆ ನೀಡಲಿಲ್ಲ ಎಂದರೂ ಸಂಪುಟ ಪುನರ್ ರಚನೆಗೆ ಮಹೋರ್ತ ಕೂಡಿ ಬರುವುದು ಅನುಮಾನ.

ಸೋನಿಯಾಗಾಂಧಿ ಅವರು ಈ ತಿಂಗಳ 17 ರ ನಂತರ 15 ದಿನಗಳ ಕಾಲ ವಿದೇಶ ಪ್ರವಾಸದಲ್ಲಿರುತ್ತಾರೆ. ಅವರು ವಾಪಸ್ ಬರುವ ಹೊತ್ತಿಗೆ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಈ ನಡುವೆ ಪುನರ್ ರಚನೆ ಕುರಿತು ಹೈಕಮಾಂಡ್ ಜತೆ ಚರ್ಚಿಸುವ ಸಾಧ್ಯತೆಗಳು ಕಡಿಮೆ.

ಹಾಗೇನಾದರೂ ಆದಲ್ಲಿ ಸಂಪುಟ ಪುನರ್ ರಚನೆ ಪ್ರಕ್ರಿಯೆ ಮತ್ತೆ ಮುಂದಕ್ಕೆ ಹೋಗಲಿದೆ. ಅಧಿವೇಶನ ಮುಗಿಯುವ ತನಕ ಈ ಪ್ರಕ್ರಿಯೆಗೆ ಚಾಲನೆ ದೊರೆಯಲ್ಲ.

ಅಲ್ಲಿಯವರೆಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಜಾತಕ ಪಕ್ಷಿಯಂತೆ ಕಾಯಬೇಕಾಗುತ್ತದೆ.

ಇನ್ನೊಂದೆಡೆ ಸಚಿವ ಸ್ಥಾನ ಕಳೆದುಕೊಳ್ಳಲಿರುವ ಭೀತಿಯಲ್ಲಿರುವ ಕೆಲ ಸಚಿವರು ಅಲ್ಲಿತನಕ ನಿರಾಳವಾಗಿರಬಹುದು.

Comments are closed.