ಮ೦ಗಳೂರು, ಜೂ.15 :ಕರಾವಳಿ ಜಿಲ್ಲೆ ದ.ಕ.ಜಿಲ್ಲೆಯಾದ್ಯಂತ ಪ್ರಸ್ತುತ ಮಳೆಯಾಗುತ್ತಿದ್ದು, ಈ ಅವಧಿಯಲ್ಲಿ ಕಳೆದ ವರ್ಷಗಳಲ್ಲಿ ಉಂಟಾಗಿದ್ದ ಮಲೇರಿಯಾ, ಡೆಂಗ್ಯೂ ಮಾರಕ ರೋಗಗಳು ಈ ವರ್ಷ ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಜಾಗೃತಿ ಉಂಟುಮಾಡಲು ಜೂನ್ 16ರಿಂದ 22 ವರೆಗೆ ಜಿಲ್ಲೆಯಾದ್ಯಂತ ವಿಶೇಷ ಸ್ವಚ್ಚತಾ ಸಪ್ತಾಹವನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಾಗೂ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀ ವಿದ್ಯಾ ಅವರು ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಈ ಸಂಬಂದ ಸಭೆಯಲ್ಲಿ ಈ ವಿಷಯ ತಿಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳು, ಮಂಗಳೂರು ಮಹಾನಗರ ಪಾಲಿಕೆ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಸ್ವಯಂ ಸೇವಾ ಸಂಸ್ಥೆಗೂ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ವಿಶೇಷ ಸ್ವಚ್ಚತಾ ಸಪ್ತಾಹ ಯಶಸ್ವಿಯಾಗುವಂತೆ ಕರೆನೀಡಿದರು.
ವಿಶೇಷ ಸ್ವಚ್ಚತಾ ಸಪ್ತಾಹದ ಅಂಗವಾಗಿ ಜೂನ್ 16ರಂದು ಕೊಳಚೆ ಪ್ರದೇಶಗಳಲ್ಲಿ , 17ರಂದು ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ, 18ರಂದು ಶಿಕ್ಷಣ ಸಂಸ್ಥೆಗಳು ಮತ್ತು ಹೊಟೇಲುಗಳಲ್ಲಿ, 19 ರಂದು ಸರಕಾರಿ ಕಛೇರಿಗಳಲ್ಲಿ, 20ರಂದು ಸಾರ್ವಜನಿಕ ಪ್ರದೇಶಗಳಲ್ಲಿ, 21 ರಂದು ಆಸ್ಪತ್ರೆಗಳಲ್ಲಿ, ಮತ್ತು 22ರಂದು ಕಾರ್ಕಾನೆಗಳ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ರಾಮಕೃಷ್ಣ ರಾವ್ ಸಭೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.
Comments are closed.