ಬೆಂಗಳೂರು, ಜೂ. ೧೪- ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದು ರಾಜ್ಯದ ಜನರ ಪ್ರೀತಿ, ಒಲವುಗಳಿಸಿ ಅಧಿಕಾರದ ಗದ್ದುಗೆ ಏರಿದ್ದ ಜೆಡಿಎಸ್ ಪಕ್ಷ ಈಗ ಅಕ್ಷರಶಃ ಒಡೆದ ಮನೆಯಾಗಿದೆ.
ರಾಷ್ಟ್ರೀಯ ಪಕ್ಷಗಳಿಗಿಂತ ಭಿನ್ನವಾಗಿ ಜನರ ಭರವಸೆಯ ಬೆಳಕಾಗಬೇಕಿದ್ದ ಜೆಡಿಎಸ್ ದಾಯಾದಿ ಕಲಹದಿಂದ ಕತ್ತಲೆಯ ಕೂಪದಲ್ಲಿದೆ. ಪಕ್ಷ ಮತ್ತೆ ಬೆಳಗಬಲ್ಲದೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಒಳ ಜಗಳ, ಕಲಹಕ್ಕೆ ಖ್ಯಾತವಾಗಿರುವ ಜೆಡಿಎಸ್‌ನ ಈಗಿನ ಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಧೋಗತಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾದರೆ ಅಚ್ಚರಿಪಡಬೇಕಾಗಿಲ್ಲ. ಕೇವಲ ನೆನಪಾಗುವ ಸಾಧ್ಯತೆಗಳೇ ಹೆಚ್ಚು. ಜೆಡಿಎಸ್‌ಗೆ ಉಚ್ಛ್ರಾಯ ಸ್ಥಿತಿ ಮರೀಚಿಕೆ ಎಂಬತಾಗಿದ್ದು, ಪಕ್ಷದ ಕಾರ್ಯಕರ್ತರ ಸ್ಥಿತಿ ಆಯೋಮಯವಾಗಿದೆ.
ಜೆಡಿಎಸ್‌ನ ಈಗಿನ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಹೇಳುವರು ಕೇಳುವರಿಲ್ಲ ಎಂಬ ಸ್ಥಿತಿ ಇದೆ.
ಪಕ್ಷದ ಸಂಕಷ್ಟ ಸಮಯದಲ್ಲಿ ನಗರದಲ್ಲಿದ್ದು, ಪಕ್ಷದ ಕಾರ್ಯಕರ್ತರಿಗೆ ಹುರುಪು, ಹುಮ್ಮಸ್ಸು ತುಂಬ ಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಗನ ಸಿನಿಮಾ ಶೂಟಿಂಗ್‌ನಲ್ಲಿ ಸಕ್ರಿಯರಾಗಿದ್ದು ವಿದೇಶ ಪ್ರವಾಸದಲ್ಲಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರೇ ಎಲ್ಲವನ್ನು ನಿಭಾಯಿಸುವ ಒತ್ತಡದಲ್ಲಿದ್ದಾರೆ.
ಪಕ್ಷದಿಂದ ಅಮಾನತು ಆಗಿರುವ 8 ಮಂದಿ ಶಾಸಕರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ನೇರವಾಗಿಯೇ ತೊಡೆ ತಟ್ಟಿ ನಿಂತಿದ್ದಾರೆ. ಭಿನ್ನಮತೀಯ ನಾಯಕ ಜಮೀರ್ ಅಹ್ಮದ್ ಯಾವ ಗೊಡವೆಯೂ ಬೇಡ ಎಂದು ಮೆಕ್ಕಾ ಯಾತ್ರೆಗೆ ತೆರಳಿದ್ದಾರೆ.
ಪಕ್ಷದಲ್ಲಿರುವ ಕೆಲ ಶಾಸಕರಿಗೂ ವರಿಷ್ಠರ ವರ್ತನೆ ಇರುಸುಮುರಿಸು ತಂದಿದ್ದರೂ ದೇವೇಗೌಡರ ಬತ್ತಳಿಕೆಯಲ್ಲಿರುವ ಬಾಣಗಳಿಗೆ ಹೆದರಿ ಸುಮ್ಮನಿದ್ದಾರೆ. ಇವರು ಮುಂದಿನ ಚುನಾವಣಾ ಸಂದರ್ಭದಲ್ಲಿ ಪಕ್ಷಕ್ಕೆ `ಕೈ’ ಕೊಡುವ ಸಾಧ್ಯತೆಗಳಿವೆ.
ಜೆಡಿಎಸ್‌ನಲ್ಲಿ ಪಕ್ಷ ಸಂಘಟನೆ ಘೋಷಣೆಗಷ್ಟೇ ಸೀಮಿತವಾಗಿದೆ. ಸಂಘಟನೆ ಸಕ್ರಿಯಗೊಳಿಸುವ ಕೆಲಸಕ್ಕಿಂತ ಹೆಚ್ಚಾಗಿ ಒಳ ಜಗಳವೇ ಹೆಚ್ಚಿದೆ.
ಒಂದು ಕಾಲದಲ್ಲಿ ತನ್ನದೇ ಕಾರ್ಯಕ್ರಮ, ಸಿದ್ಧಾಂತಗಳಿಂದ ಜನರನ್ನು ಮೋಡಿ ಮಾಡಿದ್ದ ಜನತಾದಳ ಈಗಲೂ ಜನರ ಕಾರ್ಯಕರ್ತರ ಪಕ್ಷವಾಗಿ ಉಳಿದಿದೆಯೇ ಎಂಬ ಪ್ರಶ್ನೆಗೆ ಉತ್ತರ ಹೇಳಲು ಮುಖಂಡರು ತಡವರಿಸುವ ಸ್ಥಿತಿ ಇದೆ. ಜಾತ್ಯಾತೀತ ಜನತಾದಳ ರಾಜ್ಯದಲ್ಲಿ ಮತ್ತೆ ಬೇರೂರಲಿದೆಯೇ? ಎಂಬ ಪ್ರಶ್ನೆಗೆ ಈಗಿನ ಪರಿಸ್ಥಿತಿಯಲ್ಲಿ ಉತ್ತರ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದೆ. ಪಕ್ಷದ ಮುಖಂಡರು ಇದ್ದಾರೆ.
Comments are closed.