ಚಿಂತಾಮಣಿ, ಜೂ.14- ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ ಒಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯರಾತ್ರಿ ನಗರದ ಅಗ್ರಹಾರ ಪಟಾಲಮ್ಮ ದೇವಸ್ಥಾನದ ಬಳಿ ನಡೆದಿದೆ. ಮೃತನನ್ನು ತಬರೇಜ್ಖಾನ್ ಅಲಿಯಾಸ್ ದದ್ದು (35) ಎಂದು ಗುರುತಿಸಲಾಗಿದೆ. ತಳ್ಳುಗಾಡಿಯಲ್ಲಿ ಕಬಾಬ್ ಮಾರಾಟ ವೃತ್ತಿ ಮಾಡುತ್ತಿದ್ದ ತಬರೇಜ್ಗೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇದರಲ್ಲಿ ಹೆಡ್ಕಾನ್ಟೇಬಲ್ ಒಬ್ಬರ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ.
ಈತನ ಸಹಾಯಕನಾಗಿ ಹರೀಶ್ ಕೆಲಸ ಮಾಡುತ್ತಿದ್ದು, ಕಳೆದ ಒಂದು ವಾರದಿಂದ ಕೆಲಸ ಬಿಟ್ಟಿದ್ದ ಎಂದು ಹೇಳಲಾಗಿದೆ. ಈ ಸಂಬಂಧ ನಿನ್ನೆ ರಾತ್ರಿ 10.30ರಲ್ಲಿ ಶ್ರೀನಿವಾಸ್ ಎಂಬುವರು ತಬರೇಜ್ನ ಅಂಗಡಿ ಮುಂದೆ ಬಂದು ಗಲಾಟೆ ಮಾಡಿ ಹರೀಶನಿಗೆ ನೀಡಬೇಕಾದ ಹಣ ಕೊಡಬೇಕೆಂದು ಒತ್ತಾಯಿಸಿದ್ದ. ಈ ನಡುವೆ ಕೆಲವರು ಜಗಳ ಬಿಡಿಸಿ ಕಳುಹಿಸಿದ್ದರು. ನಂತರ ರಾತ್ರಿ 11.30ರಲ್ಲಿ ಮನೆ ಮುಂದೆ ಬಂದ ಹರೀಶ್ ಮತ್ತು ಶ್ರೀನಿವಾಸ್ ಇಬ್ಬರೂ ತಬರೇಜ್ನನ್ನು ಹೊರಗೆ ಕರೆದುಕೊಂಡು ಬಂದು ಥಳಿಸಿದ್ದಾರೆ.
ಇದರಿಂದ ಎಚ್ಚರಗೊಂಡು ಹೊರ ಬಂದು ನೋಡಿದಾಗ ನನ್ನ ತಮ್ಮ ಕಿರುಚಿಕೊಳ್ಳುತ್ತಿದ್ದ, ಆತನನ್ನು ರಕ್ಷಿಸಲು ಮುಂದಾದೆ, ಆದರೆ, ನನ್ನನ್ನೂ ತಳ್ಳಿದರು. ಹರೀಶ್ ಚಾಕುವಿನಿಂದ ತಬರೇಜ್ಗೆ ಇರಿದು ಪರಾರಿಯಾದ ಎಂದು ಮೃತನ ಸಹೋದರ ಬಾಬು ಪೊಲೀಸರಿಗೆ ದೂರು ನೀಡಿದ್ದಾರೆ. ತಬರೇಜ್ನ ತಂದೆಗೆ ಒಟ್ಟು 12 ಮಕ್ಕಳಿದ್ದು, ಮೊದಲನೆ ಮಗ ನಿಜಾಜ್ಖಾನ್ ಮೃತಪಟ್ಟಿದ್ದು, ಈತನೇ ಕೊನೆಯವನು. ಉಳಿದವರು ದೇವಾಲಯದ ಆಸುಪಾಸಿನಲ್ಲೇ ವಾಸವಾಗಿದ್ದಾರೆ. ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಬಿಗಿ ಭದ್ರತೆ:
ಇಂದು ಪಟಾಲಮ್ಮ ದೇವಿಯ ದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ನೂರಾರು ಭಕ್ತರು ಆಗಮಿಸುತ್ತಿದ್ದು, ಇದರ ನಡುವೆ ತಬರೇಜ್ನ ಶವವನ್ನು ದೇವಾಲಯ ಸಮೀಪವೇ ಇರಿಸಲಾಗಿದ್ದು, ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೈತ್ರಾ, ಕೋಲಾರ ಎಸ್ಪಿ ದಿವ್ಯಾ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
Comments are closed.