ಶಿವರಾಜ್‌ಕುಮಾರ್ ಈಗ ಮತ್ತಷ್ಟು ಬಿಜಿಯಾಗಿದ್ದಾರೆ. “ಕಬೀರ’ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. “ಶ್ರೀಕಂಠ’ ಹಾಗು “ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರಗಳು ಚಿತ್ರೀಕರಣದಲ್ಲಿವೆ. ಮೊನ್ನೆಯಷ್ಟೆ “ಟಗರು’ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಿತ್ತು. ಈಗ ಶಿವರಾಜ್‌ಕುಮಾರ್ ಮತ್ತೂಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದ ಶೀರ್ಷಿಕೆ ಕೂಡ ಹೊರಬಿದ್ದಿದೆ. ಅದು “ಶಂಕರ್‌ಗುರು’. ಹೌದು, “ಶಂಕರ್‌ಗುರು’ ಎಂಬ ಹೊಸ ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ.
ಈ ಚಿತ್ರಕ್ಕೆ ಹರಿಪ್ರಸಾದ್ ಜಯಣ್ಣ ನಿರ್ದೇಶಕರು. ಇದು ಇವರ ಮೊದಲ ನಿರ್ದೇಶನದ ಚಿತ್ರ. ಇನ್ನು, ಚಿತ್ರವನ್ನು ಎಂ.ಎನ್.ಕುಮಾರ್ ಅವರು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ “ಶಂಕರ್‌ಗುರು’ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ “ಶಂಕರ್‌ಗುರು’ ಚಿತ್ರ ಸೆಟ್ಟೇರಲಿದೆ ಎಂಬುದು ನಿರ್ಮಾಪಕ ಎಂ.ಎನ್.ಕುಮಾರ್ ಹೇಳಿಕೆ.
ಇನ್ನು “ಶಂಕರ್‌ಗುರು’ ಚಿತ್ರಕ್ಕೆ ಯೋಗರಾಜ್‌ಭಟ್ ಅವರ ಸಾಹಿತ್ಯ ಹಾಗು ಸಂಭಾಷಣೆ ಇದೆ. ನಿರ್ದೇಶಕ ಹರಿಪ್ರಸಾದ್ ಜಯಣ್ಣ ಯೋಗರಾಜ್‌ಭಟ್ ಅವರ ಜತೆ ಕೆಲಸ ಮಾಡಿದವರು. ತಮ್ಮ ಶಿಷ್ಯನ ಚೊಚ್ಚಲ ಚಿತ್ರ ಇದಾಗಿರುವುದರಿಂದ ಯೋಗರಾಜ್‌ಭಟ್, ಗೀತೆಗಳನ್ನು ಗೀಚುವುದರ ಜತೆಗೆ ಮಾತುಗಳನ್ನು ಪೋಣಿಸುತ್ತಿದ್ದಾರೆ. ಚಿತ್ರಕ್ಕೆ ಕ್ಯಾಮೆರಾಮೆನ್, ಸಂಗೀತ ನಿರ್ದೇಶಕ ಸೇರಿದಂತೆ ಉಳಿದ ತಂತ್ರಜ್ಞರ ಆಯ್ಕೆ ಇಷ್ಟರಲ್ಲೇ ಅಂತಿಮಗೊಳ್ಳಬೇಕಿದೆ. ನಾಯಕಿ ಕನ್ನಡದವರಿರುತ್ತಾರಾ, ಹೊರಗಿನವರು ಬರುತ್ತಾರಾ ಎಂಬುದು ಸದ್ಯಕ್ಕೆ ಸಸ್ಪೆನ್ಸ್.
ಇಲ್ಲಿ “ಶಂಕರ್‌ಗುರು’ ಅಂದಾಕ್ಷಣ, ಎಲ್ಲರಿಗೂ ಡಾ.ರಾಜ್‌ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ನೆನಪಾಗುತ್ತೆ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಇಲ್ಲಿ ಶಿವರಾಜ್‌ಕುಮಾರ್ ಅವರು ದ್ವಿಪಾತ್ರ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೂ ಉತ್ತರವಿಲ್ಲ. ಅದೇನಿದ್ದರೂ, ಚಿತ್ರ ಸೆಟ್ಟಾಗುವವರೆಗೂ ಕಾಯಲೇಬೇಕು. ಇನ್ನು, ಸೂರಿ ನಿರ್ದೇಶನದ “ಟಗರು’ ಚಿತ್ರದ ಬಗ್ಗೆ ಈ ಹಿಂದೆಯೇ ಹೇಳಲಾಗಿತ್ತು. ಆದರೆ, ಯಾವಾಗ ಆ ಚಿತ್ರ ಸೆಟ್ಟೇರುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈಗಾಗಲೇ ಸೂರಿ ಅವರು, ಪಕ್ಕಾ ಮಾಸ್ ಆಗಿರುವ “ಟಗರು’ ಶೀರ್ಷಿಕೆಯ ಪೋಸ್ಟರ್‌ವೊಂದನ್ನು ಹೊರಬಿಟ್ಟಿದ್ದಾರೆ. ಈ ಬಾರಿ ಸೂರಿ ಹೊಸ ತಂತ್ರಜ್ಞರ ಜತೆ ಕೆಲಸ ಮಾಡುತ್ತಿದ್ದಾರೆ.
ಮಹೇಂದ್ರಸಿಂಹ ಕ್ಯಾಮೆರಾ ಹಿಡಿಯುತ್ತಿದ್ದರೆ, ಚರಣ್‌ರಾಜ್ ಸಂಗೀತ ಕೊಡುತ್ತಿದ್ದಾರೆ. ಇನ್ನು, ಕೆ.ಪಿ.ಶ್ರೀಕಾಂತ್ ಈ ಚಿತ್ರಕ್ಕೆ ನಿರ್ಮಾಪಕರು. ಇವರ ಜತೆಯಲ್ಲಿ ನಾಗೇಂದ್ರ ಮತ್ತು ಪುರುಷೋತ್ತಮ್ ಇಬ್ಬರು ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಡಿಫರೆಂಟ್ ಡ್ಯಾನಿ ಸ್ಟಂಟ್ ಮಾಡುತ್ತಿದ್ದಾರೆ. “ಟಗರು’ ಶೀರ್ಷಿಕೆ ಕೆಳಗೆ “ಮೈ ಎಲ್ಲಾ ಪೊಗರು…’ ಎಂಬ ಅಡಿಬರಹ ಗಮನಿಸಿದರೆ, ಶಿವರಾಜ್‌ಕುಮಾರ್‌ಗೆ ಇದು ಮತ್ತೂಂದು ಭರ್ಜರಿ ಮಾಸ್ ಚಿತ್ರ ಆಗುತ್ತೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಅದೇನೆ ಇರಲಿ, ಶಿವರಾಜ್‌ಕುಮಾರ್, ಫುಲ್ ಬಿಜಿಯಾಗಿರುವುದಂತೂ ನಿಜ.
ಶಿವಲಿಂಗನ ಶತದಿನ ಕಾರ್ಯಕ್ರಮಕ್ಕೆ ತಾರೆಗಳ ದಂಡು:
ಈ ನಡುವೆ ಶಿವರಾಜ್‌ಕುಮಾರ್ ಅಭಿನಯದ “ಶಿವಲಿಂಗ’ ಚಿತ್ರ ಶತದಿನ ಪೂರೈಸಿದೆ. ಆ ಹಿನ್ನೆಲೆಯಲ್ಲಿ ಶತದಿನೋತ್ಸವ ನಡೆಸಲು ನಿರ್ಮಾಪಕ ಕೆ.ಎ.ಸುರೇಶ್ ನಿರ್ಧರಿಸಿದ್ದಾರೆ. ಜೂನ್.19 ರಂದು “ಶಿವಲಿಂಗ’ ಚಿತ್ರದ ಶತದಿನ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಚಿತ್ರತಂಡ ಆಚರಿಸಲು ಮುಂದಾಗಿದೆ. ವಿಶೇಷವೆಂದರೆ, 19 ರಂದೇ ಶಿವರಾಜ್‌ಕುಮಾರ್ ಅವರ ಮೊದಲ ಚಿತ್ರ “ಆನಂದ್’ ತೆರೆಕಂಡಿತ್ತು. ಅಲ್ಲದೆ, ಶಿವಣ್ಣ ಅವರು ಚಿತ್ರರಂಗಕ್ಕೆ ಬಂದು ಮೂರು ದಶಕ ಕಳೆದಿರುವ ಹಿನ್ನೆಲೆಯಲ್ಲಿಯೂ ಕಾರ್ಯಕ್ರಮವನ್ನು ದೊಡ್ಡದ್ದಾಗಿ ನಡೆಸಲು ಉದ್ದೇಶಿಸಿದ್ದಾರೆ ನಿರ್ಮಾಪಕರು.
ಅಂದು ಟೌನ್‌ಹಾಲ್‌ನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ತೆಲುಗಿನ ಅನೇಕ ನಟರು ಆಗಮಿಸುವ ನಿರೀಕ್ಷೆಯೂ ಇದೆ. ಕನ್ನಡ ಚಿತ್ರರಂಗದ ನಟ,ನಟಿಯರೂ ಆಗಮಿಸುತ್ತಿದ್ದಾರೆ. ಇನ್ನು, ನಿರ್ದೇಶಕ ಪಿ.ವಾಸು ಅಂದು ಚಿತ್ರರಂಗದ ಅನೇಕ ಗಣ್ಯರನ್ನು ಆಹ್ವಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್‌ಕುಮಾರ್ ಅಭಿನಯದ “ಖದರ್’ ಚಿತ್ರದ ಟೀಸರ್ ಕೂಡ ರಿಲೀಸ್ ಆಗಲಿದೆ. ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸುತ್ತಿದ್ದಾರೆ.
-ಉದಯವಾಣಿ
Comments are closed.