ಕರ್ನಾಟಕ

ಇಚ್ಛಾಶಕ್ತಿ ಕೊರತೆ, ಸ್ವಾರ್ಥಪರತೆಗೆ ಬಲಿಯಾದ ಮಹದಾಯಿ ಸಮಸ್ಯೆ

Pinterest LinkedIn Tumblr

mahaಬೆಂಗಳೂರು, ಜೂ. ೧೩- ಉತ್ತರ ಕರ್ನಾಟಕ ಭಾಗದಲ್ಲಿ ಮಹದಾಯಿ ಮತ್ತು ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗಾಗಿ ಆಗ್ರಹಿಸಿ ನಡೆಯುತ್ತಿರುವ ರೈತರು, ಸಂತರು ಹಾಗೂ ಹೋರಾಟಗಾರರ ಪ್ರತಿಭಟನೆ ಜುಲೈ 16ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹೋರಾಟಕ್ಕೆ ಹೊಸ ದಿಕ್ಕು ಸ್ವರೂಪ ನೀಡಲು ಮುಂದಾಗಿರುವ ಪ್ರತಿಭಟನಾಕಾರರು “ವರ್ಷದ ಆಕ್ರೋಶ” ಮಹಾ ಸಮ್ಮೇಳನ ನಡೆಸಲು ನಿರ್ಧರಿಸಿದ್ದಾರೆ.
ಜುಲೈ 16 ರಿಂದ 20ರ ಒಳಗೆ ನರಗುಂದ ತಾಲೂಕಿನಲ್ಲಿ ಬೃಹತ್ ರೈತರು, ಹೋರಾಟಗಾರರು ಹಾಗೂ ಸಂತರ ಸಮ್ಮೇಳನ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಜತೆಗೆ ಹೋರಾಟವನ್ನು ಮತ್ತೊಂದು ಸ್ವರೂಪಕ್ಕೆ ತೆಗೆದುಕೊಂಡು ಹೋಗಲು ಮಹದಾಯಿ, ಕಳಸಾ ಬಂಡೂರಿ ನದಿ ಜೋಡಣೆಗಾಗಿ ಹೋರಾಟದ ಪೂರ್ವಭಾವಿ ದುಂಡು ಮೇಜಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ ನ್ಯಾಯಾಧೀಕರಣದ ಹೊರಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಪ್ರತಿ ಪಕ್ಷದ ನಾಯಕರ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ರಾಜಕೀಯ ನಾಯಕರುಗಳು ಇಚ್ಛಾಶಕ್ತಿ ಕೊರತೆ ಹಾಗೂ ಅವರ ಸ್ವಾರ್ಥದಿಂದಾಗಿ ಕಳೆದ ಒಂದು ವರ್ಷದಿಂದ ಮಹಾದಾಯಿ ಹೋರಾಟ ನಡೆಯುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಸ್ವಾತಂತ್ರ್ಯ ಭಾರತದಲ್ಲಿ ಯಾವೊಂದು ಹೋರಾಟವೂ ಇಷ್ಟು ಸುದೀರ್ಘ ಕಾಲ ನಡೆದ ಇತಿಹಾಸವಿಲ್ಲ. ಮುಂದಿನ ತಿಂಗಳ 16ಕ್ಕೆ ಹೋರಾಟ ಆರಂಭವಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಜುಲೈ 16 ರಿಂದ 20ರ ಒಳಗೆ ವರ್ಷದ ಆಕ್ರೋಶ ಬೃಹತ್ ಸಮಾವೇಶ ನಡೆಸುವ ಮೂಲಕ ಹೋರಾಟಕ್ಕೆ ಹೊಸದಿಕ್ಕು ಮತ್ತು ರೂಪ ನೀಡಲು ನಿರ್ಧರಿಸಲಾಗಿದೆ ಎಂದರು.
ಕಳೆದ 40 ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ. ಜನಪ್ರತಿನಿಧಿಗಳೂ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ಮನಸ್ಸು ಮಾಡಿದ್ದರೆ 3 ನಿಮಿಷದಲ್ಲಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಅದು ಅವರಿಗೆ ಬೇಕಾಗಿಲ್ಲ. ರೈತರು, ಹೋರಾಟಗಾರರ ಸಾವಿನ ಮೇಲೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಹೋರಾಟಗಳನ್ನು ನೋಡಿದರೆ ಉತ್ತರ ಕರ್ನಾಟಕ ಅಖಂಡ ಕರ್ನಾಟಕದಲ್ಲಿ ಇದೆಯೇ? ಇಲ್ಲವೇ? ಎಂಬ ಅನುಮಾನ ಕಾಡಲಿದೆ ಎಂದು ಹೇಳಿದರು.
ನ್ಯಾಯಾಧೀಕರಣದಿಂದ ಸಮಸ್ಯೆಗೆ ಪರಿಹಾರ ಸಿಗುವ ಬದಲು ಮತ್ತಷ್ಟು ಸಮಸ್ಯೆ ಜಟಿಲವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ 3 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲು ಒತ್ತು ನೀಡುವ ಅಗತ್ಯವಿದೆ ಎಂದು ಆಗ್ರಹಿಸಿದ ಅವರು, ಪ್ರಧಾನಿಯಾದ ಬಳಿಕ ರಾಜ್ಯಕ್ಕೆ ಮೂರು ಬಾರಿ ಬಂದರೂ ಸಮಸ್ಯೆಯನ್ನು ಆಲಿಸುವ ಗೋಜಿಗೆ ಹೋಗಿಲ್ಲ. ಇದು ಅತ್ಯಂತ ಖಂಡನಾರ್ಹ ಎಂದು ಹೇಳಿದರು.
ಈ ಯೋಜನೆಯನ್ನು ಜಾರಿಗೆ ತಂದರೆ ಗೋವಾದಲ್ಲಿ ಮೀನುಗಳಿಗೆ ತೊಂದರೆಯಾಗಲಿದೆ ಎನ್ನುವ ಸಬೂಬು ನೀಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜನರು ಕುಡಿಯುವ ನೀರಿಲ್ಲದೆ ಸಾಯುತ್ತಿದ್ದಾರೆ. ಇವರಿಗೆ ಜನರಿಗಿಂತ ಮೀನುಗಳೆ ಹೆಚ್ಚೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಹೋರಾಟಗಾರ ಎಂ.ಎಂ. ಮುಳ್ಳೂರು, ಸಂಚಾಲಕ ಸಂಗಮೇಶ್ ಕೊಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments are closed.