ಚಿತ್ರ: ಡ್ರೆಸ್ ಕೋಡ್
ನಿರ್ಮಾಣ: ಪೃಥ್ವಿ ದಯಾನಂದ್
ನಿರ್ದೇಶನ: ಶಿವಕುಮಾರ್ ಕಡೂರ್
ತಾರಾಗಣ: ಪೃಥ್ವಿ, ದಿವ್ಯ,ಹೇಮಾ, ವೈಷ್ಣವಿ, ಕಾಂಚನಾ,ಶಿವು ಮತ್ತಿತರರು.
ಸಿನಿಮಾ ಆರಂಭವಾಗಿ ಸ್ವಲ್ಪ ಹೊತ್ತಿಗೆ ಇದೊಂದು ರಿವೆಂಜ್ ಸ್ಟೋರಿ ಎಂದು ಗೊತ್ತಾಗುತ್ತದೆ. ಹಾಗಂತ ಆ ರಿವೆಂಜ್‌ಗೆ ಒಂದು ಸಕಾರಣವಿದೆಯೇ ಎಂದರೆ ಖಂಡಿತಾ ಇಲ್ಲ. ಆತನ ಮನಸ್ಥಿತಿ ಹಾಗೂ ಸಮಾಜದಲ್ಲಿ ವ್ಯವಸ್ಥೆಯೊಂದರಿಂದ ಅವನಿಗಾದ ಅನ್ಯಾಯವೇ ಆತನ ರಿವೆಂಜ್‌ಗೆ ಕಾರಣ. “ಡ್ರೆಸ್ ಕೋಡ್’ ಎಂಬ ಚಿತ್ರದಲ್ಲಿ ಏನಿದೆ ಎಂದರೆ ಒಂದೇ ಮಾತಲ್ಲಿ ಹೇಳಿಬಿಡೋದು ಕಷ್ಟ. ಸಿಂಪಲ್ ಆಗಿ ಹೇಳಬೇಕೆಂದರೆ ಕೆಟ್ಟದಾಗಿ ವರ್ತಿಸುವ ಹಾಗೂ ಅಶ್ಲೀಲವಾಗಿ ಬಟ್ಟೆ ಹಾಕುವ ಹುಡುಗಿಯರ ವಿರುದ್ಧದ ರಿವೆಂಜ್ ಇದು ಎನ್ನಬಹುದು.
ಈ ರಿವೆಂಜ್ ಸ್ಟೋರಿ ಪ್ರೇಕ್ಷಕರಿಗೆ ಖುಷಿ ಕೊಡುತ್ತಾ, ಅವರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆಯಾ ಎಂದರೆ ಅದಕ್ಕೆ ಉತ್ತರಿಸೋದು ಕಷ್ಟ. ಏಕೆಂದರೆ, ನಿರ್ದೇಶಕರು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಪರಿಣಾಮವಾಗಿ ಸಿನಿಮಾ ನಿಮ್ಮ ತಾಳ್ಮೆ ಪರೀಕ್ಷೆ ಮಾಡುತ್ತದೆ. ಕಥೆಯ ಬಗ್ಗೆ ಮತ್ತಷ್ಟು ಗಮನಹರಿಸುವ ಜೊತೆಗೆ ಅದನ್ನು ವಿಸ್ತರಿಸಿದ್ದರೆ ತಕ್ಕಮಟ್ಟಿಗಾದರೂ ಸಿನಿಮಾ ಚೆನ್ನಾಗಿ ಮೂಡಿಬರುತ್ತಿತ್ತು. ಆದರೆ, ಆ ಕೆಲಸ ಇಲ್ಲಿ ಆಗಿಲ್ಲ.
ಒಂದು ಟೆಂಪೋ ಟ್ರಾವೆಲರ್, ದಟ್ಟ ಕಾಡು ಮತ್ತು ಏಳೆಂಟು ಮಂದಿ … ಇಡೀ ಸಿನಿಮಾ ಇವರ ಸುತ್ತವೇ ಸುತ್ತುತ್ತದೆ. ಇದು ನಾಯಕ, ನಾಯಕಿಯ ನಡುವೆ ನಡೆಯುವ ಕಥೆಯಲ್ಲ. ಒಂದು ಗುಂಪಿನ ನಡುವೆ ನಡೆಯುವ ಕಥೆ. ಟಿಟಿಯಲ್ಲಿ ಮೈಸೂರಿಗೆ ಪ್ರಯಾಣಿಸುವ ಆ ತಂಡ ಕಾಡಿನಲ್ಲಿ ಸಿಕ್ಕಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಆ ವೇಳೆ ಏನೆಲ್ಲಾ ಘಟನೆಗಳು ನಡೆಯುತ್ತದೆ ಮತ್ತು ಆ ಘಟನೆಗೆ ಕಾರಣ ಏನು ಎಂಬುದೇ ಈ “ಡ್ರೆಸ್ ಕೋಡ್’ನ ಕಥೆ. ಈ ಕಥೆಯಲ್ಲಿ ಹೊಸತನವಾಗಲಿ, ಖುಷಿಕೊಡುವ ಅಂಶಗಳನ್ನಾಗಲಿ ಹುಡುಕೋದು ಕಷ್ಟದ ಕೆಲಸ. ಏಕೆಂದರೆ, ನಿರ್ದೇಶಕರು ಅಂತಹ ಪ್ರಯತ್ನ ಮಾಡುವ ಬದಲು ತಾವೇ ತೆರೆಮೇಲೆ ಬಂದು ಡೈಲಾಗ್ ಹೇಳುವುದರಲ್ಲೇ ಖುಷಿಪಟ್ಟಿದ್ದಾರೆ. ಕಲಾವಿದರಿಂದ ನಟನೆ ತೆಗೆಸುವಲ್ಲಿಂದ ಹಿಡಿದು ಚಿತ್ರದ ತಾಂತ್ರಿಕ ಅಂಶಗಳ ಬಗ್ಗೆಯೂ ಅವರು ಹೆಚ್ಚು ಗಮನ ಹರಿಸಿದಂತಿಲ್ಲ. ಚಿತ್ರದಲ್ಲಿ ನೋಡನೋಡುತ್ತಿದಂತೆ ಗಕ್ಕನೆ ಇಂಟರ್‌ವಲ್ ಬಂದು ಬಿಡುತ್ತದೆ. ಹಾಗಂತ ಅದು ಇಂಟರ್‌ವಲ್ ಪಾಯಿಂಟ್ ಅಲ್ಲ. ಏಕೆಂದರೆ, ಒಂದು ಕುತೂಹಲದ ಘಟ್ಟದಲ್ಲಿ ಇಂಟರ್ ವಲ್ ಬರೋದು ಸಾಮಾನ್ಯ.
ಹುಡುಗಿಯರು ಹುಡುಗರನ್ನು ಕೆಟ್ಟದಾಗಿ ಬೈಯೋದು, ತಮ್ಮ ಬಗ್ಗೆ ತಾವೇ ಕೆಟ್ಟದಾಗಿ ಮಾತನಾಡಿಕೊಂಡು ಖುಷಿಪಡೋದು, ಕುಡಿತ, ಸಿಗರೇಟ್ … ಸಿನಿಮಾದ ಬಹುತೇಕ ಸಮಯ ಇದರಲ್ಲೇ ಕಳೆದು ಹೋಗಿದೆ. ಇನ್ನಷ್ಟು ಸಮಯವನ್ನು ನಿರ್ದೇಶಕರು ನೇರಾನೇರ ಕ್ಯಾಮರಾ ನೋಡುತ್ತಾ ಸಂಭಾಷಣೆ ಹೇಳಿ ಖುಷಿಪಡೆಯೋದರಲ್ಲಿ ಕಳೆದಿದ್ದಾರೆ. ಹಾಗಂತ ಆ ಸಂಭಾಷಣೆಯಿಂದ ಸಿನಿಮಾಕ್ಕೆ ಯಾವುದೇ ಸಹಾಯವಾದಂತಿಲ್ಲ. ಉಳಿದ ಸ್ವಲ್ಪ ಸಮಯದಲ್ಲಿ ಸಿನಿಮಾ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲಿ ನಿಮಗೆ ಕಾಡಿನೊಳಗೆ ರನ್ನಿಂಗ್ ರೇಸ್, ಕಿರುಚಾಟ, ಸೈಕೋ ಒಬ್ಬನ ಆರ್ಭಟ ಬಿಟ್ಟರೆ ಬೇರೇನು ಸಿಗೋದಿಲ್ಲ. ಎಲ್ಲರು ಮಾಡೋದು ಬಟ್ಟೆಗಾಗಿ!
ಚಿತ್ರದಲ್ಲಿ ತಾಳ್ಮೆ ಪರೀಕ್ಷಿಸಲು ಹಾಡುಗಳಿಲ್ಲ ಎಂಬ ಖುಷಿ ಪ್ರೇಕ್ಷಕರದು.ನಾಯಕ ಪೃಥ್ವಿ ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ನೆಗೆಟಿವ್ ಪಾತ್ರಗಳು ಅವರಿಗೆ ಹೆಚ್ಚು ಹೊಂದಿಕೆ ಯಾಗುವಂತಿದೆ. ಸೈಕೋ ಪಾತ್ರದಲ್ಲಿ ಕಾಣಿಸಿಕೊಂಡ ಶಿವು ಕೂಡಾ ಭರವಸೆ ಮೂಡಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ನಟಿಸಿರುವ ದಿವ್ಯ, ಹೇಮಾ, ವೈಷ್ಣವಿ, ಕಾಂಚನಾ ನಟನೆಯಲ್ಲಿ ಸಾಕಷ್ಟು ಪಳಗಬೇಕಿದೆ.
ರವಿಪ್ರಕಾಶ್ ರೈ
-ಉದಯವಾಣಿ
Comments are closed.