ಬೆಂಗಳೂರು, ಮೇ ೨೪- ವೇಶ್ಯಾವಾಟಿಕೆ ಮಾಡುವುದಿದ್ದರೆ ಮುಖ್ಯಮಂತ್ರಿಗಳ ಮನೆ ಬಾಗಿಲೆ ಬೇಕೆ, ಅದು ಗಂಡ ಮಕ್ಕಳ ಜತೆ ಹೋಗಿ ವೇಶ್ಯಾವಾಟಿಕೆ ಮಾಡಲು ಆಗುತ್ತದೆಯೇ ಎಂದು ಮುಖ್ಯಮಂತ್ರಿ ಗೃಹ ಕಚೇರಿ ಎದುರು ಅವಮಾನಿತರಾಗಿ ಒಂದು ದಿನ ಪೊಲೀಸ್ ರಿಮ್ಯಾಂಡ್ ರೂಂನಲ್ಲಿದ್ದ ನಗರದ ಸುನಿತಾ ಅವರು ಗದ್ಗದಿತರಾಗಿ ನೋವಿನಿಂದ ಹೇಳಿದ ಮಾತುಗಳಿವು.
ನಾನೆಂದೂ ಆ ರೀತಿಯ ಕೆಲಸ ಮಾಡುವುದಿಲ್ಲ. ಕಷ್ಟುಪಟ್ಟು ದುಡಿದು ತಿನ್ನುತ್ತೇವೆ. ಅಂತಹ ಬದುಕಿಗೆ ಹೋದವಳಲ್ಲ ಎಂದು ಕಣ್ಣೀರಿಡತ್ತಾ ತಮ್ಮ ನೋವನ್ನು ಬಿಡಿಸಿಟ್ಟರು.
ಮುಖ್ಯಮಂತ್ರಿ ಮನೆಗೆ ಮರ್ಯಾದೆ ಇಲ್ಲದವರು ಹೋಗುತ್ತಾರೆಯೇ, ಕಚಡ ಕೆಲಸ ಮಾಡುವವರೆಲ್ಲಾ ಮುಖ್ಯಮಂತ್ರಿ ಮನೆ ಬಾಗಿಲಿಗೆ ಬರುತ್ತಾರೆಯೇ ಎಂದು ಅವರು ನೋವಿನಿಂದಲೇ ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಗಂಡ ಮಕ್ಕಳ ಜತೆ ನ್ಯಾಯ ಕೇಳಲು ಹೋದರೆ ವೇಶ್ಯಾವಾಟಿಕೆ ಆರೋಪ ಹೊರಿಸಿ ರಿಮ್ಯಾಂಡ್ ರೂಂನಲ್ಲಿ ಬಿಟ್ಟು ಹಿಂಸೆ ನೀಡಿದ್ದಾರೆ. ಮಾಧ್ಯಮದವರಿಗಾದರೂ ಹೇಳು, ಯಾರಿಗಾದರೂ ಹೇಳು ಭಯವಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಬಡವರು ಬದುಕುವುದೇ ಕಷ್ಟವಾಗಿದೆ ಎಂದರು.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪೊಲೀಸರ ಕೆಟ್ಟ ಮಾತು, ಹಿಂಸೆಗೆ ಸೋತು ನನಗೆ ವಿಷವನ್ನಾದರೂ ಕೊಡಿ ಅಥವಾ ಚಾಕುವನ್ನಾದರೂ ಕೊಡಿ ಚುಚ್ಚಿಕೊಂಡು ಸಾಯುತ್ತೇನೆ ಎಂದು ಕಣ್ಣೀರಿಡುತ್ತಾ ಪೊಲೀಸರ ಹಿಂಸೆಯನ್ನು ಮಾಜಿ ಮುಖ್ಯಮಂತ್ರಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು.
ಮೇ 17 ರ ಮಧ್ಯಾಹ್ನ ನನ್ನ ಗಂಡ ಓಡಿಸುವ ಬಾಡಿಗೆ ಆಟೋದಲ್ಲಿ ಮಕ್ಕಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗೃಹ ಕಚೇರಿಗೆ ತೆರಳಿದೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಬೇಕು. ಜನತಾದರ್ಶನ ಇದೆಯೇ ಎಂದು ವಿಚಾರಿಸಿದೆ. ಆಗ ಅಲ್ಲಿನ ಸಿಬ್ಬಂದಿ 4 ಗಂಟೆಗೆ ಬನ್ನಿ, ಮುಖ್ಯಮಂತ್ರಿ ಸಿಗುತ್ತಾರೆ ಎಂದರು. ನಂತರ ಬಿಡಿಎ ಕಚೇರಿಗೆ ತೆರಳಿ ಅಲ್ಲಿ, ನನ್ನ ಮನೆಯ ದಾಖಲೆಗಳಿಗೆ ಸಂಬಂಧಿಸಿದ ಪತ್ರಗಳನ್ನು ಜೆರಾಕ್ಸ್ ಮಾಡಿಕೊಂಡು 4 ಗಂಟೆಗೆ ಮುಖ್ಯಮಂತ್ರಿಗಳ ಕಚೇರಿ ಬಳಿ ಬಂದೆವು. 5 ಗಂಟೆಗೆ ಸಿಎಂ ಭೇಟಿಯಾಗುತ್ತಾರೆ ಎಂದು ಪೊಲೀಸರು ತಿಳಿಸಿದರು. ಅಲ್ಲಿಯೇ ನನ್ನ ಮಕ್ಕಳು ಹಾಗೂ ಗಂಡನ ಜತೆ ಕಾಯುತ್ತಾ ಕುಳಿತಿದ್ದೆ. 6 ಗಂಟೆಯಾದರೂ ಮುಖ್ಯಮಂತ್ರಿಗಳ ಭೇಟಿ ಸಾಧ್ಯವಾಗಲಿಲ್ಲ. ನನ್ನ ಗಂಡನನ್ನು ಮಕ್ಕಳಿಗೆ ಊಟ ಕೊಡಿಸಿ, ಉಪವಾಸ ಇದ್ದಾರೆ ಎಂದು ಆಟೋದಲ್ಲಿ ಕಳುಹಿಸಿ, ಅವರಿಂದ 50 ರೂ. ಪಡೆದು ನಾನು ಸಿಎಂ ಭೇಟಿಯಾಗಿ ಬರುತ್ತೇನೆಂದು ಹೇಳಿದೆ. ನಂತರ ಬೇರೆ ಜನರನ್ನು ಪೊಲೀಸರು ಒಳಗೆ ಬಿಡುತ್ತಿದ್ದರು. ನನ್ನನ್ನು ಬಿಡಿ ಎಂದು ಕೋರಿದೆ. ಆದರೆ ಆಗಲ್ಲ ಎಂದು ನನ್ನನ್ನು ಒಳಗೆ ಬಿಡಲಿಲ್ಲ. ನನ್ನ ಜತೆ ಬೇರೆ ಮಹಿಳೆಯೂ ಇದ್ದರು. ನನ್ನ ಮೊಬೈಲ್ನಲ್ಲಿ ಮುಖ್ಯಮಂತ್ರಿ ಕಚೇರಿಗೆ ದೂರವಾಣಿ ಕರೆ ಮಾಡಿ ಒಳಗೆ ಬಿಡಿ ಎಂದು ಮನವಿ ಮಾಡಿದೆ. ಆದರೂ ಬಿಡಲಿಲ್ಲ. 6 ಗಂಟೆಯಾದ ಮೇಲೆ ಯಾರನ್ನು ಒಳಗೆ ಬಿಡುವುದಿಲ್ಲ ಎಂದು ಪೊಲೀಸರು ಹೇಳಿದರು. 9 ಗಂಟೆಯಾದರೂ ಸರಿ ನಾವು ಮುಖ್ಯಮಂತ್ರಿ ನೋಡಿಯೇ ಹೋಗುವುದು ಎಂದಾಗ ಫುಟ್ಪಾತ್ನಲ್ಲಿ ಹೋಗಿ ಕುಳಿತುಕೊಳ್ಳಿ ಎಂದು ಪೊಲೀಸರು ಹೇಳಿದರು. ಹೊಯ್ಸಳ ಪೊಲೀಸರ ಜೀಪಿನಲ್ಲಿ ನನ್ನನ್ನು ಕೂರಿಸಿದರು. ಕಾವೇರಿ ಎಂಬ ಮಹಿಳಾ ಪೇದೆ ಇದ್ದರು. ಅಲ್ಲಿನಿಂದ ಮೈಗ್ರೌಂಡ್ಸ್ ಠಾಣೆಗೆ ಕರೆತಂದು ಕೆಟ್ಟಕೆಟ್ಟದಾಗಿ ನನ್ನನ್ನು ಬೈದರು. ಕಚಡಾ ಕೆಲಸ ಮಾಡುವವಳು ಎಂದು ಪೊಲೀಸ್ ಸಬ್ಇನ್ಸ್ಪೆಕ್ಟರ್ ಬೈದರು. ನಾನು ಕಚಡಾ ಕೆಲಸ ಮಾಡುತ್ತೇನೆಯೇ ಎಂದು ಕಣ್ಣೀರಿಡುತ್ತಾ ಪ್ರಶ್ನಿಸಿದರು.
ಪೊಲೀಸರ ಹಿಂಸೆ ತಾಳಲಾರದೆ ವಿಷ ಕೊಟ್ಟು ಬಿಡಿ ಸಾಯುತ್ತೇನೆ, ಇಲ್ಲ ಚಾಕು ಕೊಡಿ ಚುಚ್ಚಿಕೊಂಡು ಸಾಯುತ್ತೇನೆ ಎಂದು ಹೇಳಿದೆ. ನಂತರ ಪೊಲೀಸ್ ವಾಹನದಲ್ಲೆ ಹೊಸೂರು ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯಕ್ಕೆ ನನ್ನನ್ನು ಕರೆತಂದರು. ಆ ಮಧ್ಯೆ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ನನ್ನ ಜತೆ ಇದ್ದ ಮಹಿಳಾ ಪೊಲೀಸ್ ಪೇದೆಯಿಂದ ಏನಾಯಿತು, ಊಟ ಮಾಡಿದಳಾ, ಮಲಗಿದಳಾ ಎಂದು ಮಾಹಿತಿ ಪಡೆಯುತ್ತಿದ್ದರು. ನಾನು ನಿದ್ದೆ ಮಾಡುವಂತೆ ನಾಟಕ ವಾಡಿದೆ. ಏಕೆಂದರೆ ಪೊಲೀಸರು ನನ್ನನ್ನು ಕರೆತಂದಿರುವುದಕ್ಕೆ ಯಾವುದೇ ದಾಖಲೆ ಇರಲಿಲ್ಲ. ಮಹಿಳಾ ಪೊಲೀಸ್ ಠಾಣೆಗೆ ಬರೆದಿದ್ದ ಪತ್ರವನ್ನು ತರಲು ನಿದ್ದೆ ಮಾಡುವ ನಾಟಕವಾಡಿದೆ. ಪೊಲೀಸ್ ಪೇದೆ ಮೊದಲ ಮಹಡಿ ಮೇಲೆ ಮಲಗಿದ್ದ ಮೇಲೆ ಆ ಪತ್ರವನ್ನು ನನ್ನ ಸೀರೆಯಲ್ಲಿ ಸಿಗಿಸಿಕೊಂಡೆ. ನನ್ನನ್ನು ಠಾಣೆಗೆ ಕರೆತಂದಿದ್ದೆ ದಾಖಲೆ ಇರಲಿಲ್ಲ. ಬೆಳಿಗ್ಗೆ ಪತ್ರ ಸಿಗದಿದ್ದಕ್ಕೆ ಮಹಿಳಾ ಪೊಲೀಸ್ ಪೇದೆ ಪತ್ರ ನೀನೆ ತೆಗೆದುಕೊಂಡಿದ್ದೀಯ ಎಂದು ಸಾಕಷ್ಟು ಹಿಂಸೆ ಕೊಟ್ಟರು. ಬೆಳಿಗ್ಗೆ 10.30 ಗಂಟೆಗೆ ನನ್ನ ಗಂಡ, ಭಾವ ಮತ್ತು ಮಕ್ಕಳು ಆಟೋದಲ್ಲಿ ಬಂದರು. ಆಗ ಪೊಲೀಸ್ ಸಿಬ್ಬಂದಿ ಆತನ ತಲೆ ಮೇಲೆ ಹೊಡೆದು ಏನೋ ಮುಖ್ಯಮಂತ್ರಿ ಕಚೇರಿ ಬಳಿ ಗಲಾಟೆ ಮಾಡಲು ಹೆಂಡತಿ ಕಳುಹಿಸುತ್ತಿಯಾ ಎಂದು ಬೈದು, ನಿನ್ನ ಆಟೋವನ್ನು ಸೀಸ್ ಮಾಡುತ್ತೇನೆಂದರು. ಆಗ ನನ್ನ ಗಂಡ ಆಟೋ ನನ್ನ ಸ್ವಂತದ್ದಲ್ಲ, ಬಾಡಿಗೆಯದ್ದು ಎಂದಾಗ, ಆಟೋ ಮಾಲೀಕರ ದೂರವಾಣಿ ಸಂಖ್ಯೆ ಪಡೆದು ಕರೆ ಮಾಡಿ ಇಂಥವರಿಗೆಲ್ಲಾ ಆಟೋ ಕೊಡುತ್ತೀರೇಂದ್ರಿ, ನಿಮ್ಮ ವಿರುದ್ದವೂ ಕೇಸು ಹಾಕುತ್ತೇವೆ ಎಂದು ಬೆದರಿಸಿದರು.
ನಂತರ ಪತ್ರ ಬರೆಸಿಕೊಂಡು ನನ್ನ ಸಹಿ ಹಾಕುವಂತೆ ಹೇಳಿದರು. ಆದರೆ ನನ್ನದು ತಪ್ಪಿಲ್ಲ. ಸಹಿ ಹಾಕುವುದಿಲ್ಲ ಎಂದು ಕೂಗಾಡಿದೆ. ನಂತರ ಮಧ್ಯಾಹ್ನ 2.30ಕ್ಕೆ ನನ್ನು ಹೊರ ಬಿಟ್ಟರು ಎಂದರು.
ನಾನು ವಾಸ ಇರುವ ಮನೆಯ ಹಕ್ಕುಪತ್ರ ಕೊಡುವಂತೆ ಕೇಳಲು ಸಿಎಂ ಮನೆ ಬಳಿಗೆ ಹೋಗಿದ್ದೆ. ಸಚಿವರಾದ ಪರಮೇಶ್ವರ್, ಕೆ.ಜೆ. ಜಾರ್ಜ್, ಅಂಬರೀಶ್ ಎಲ್ಲರನ್ನೂ ಭೇಟಿ ಮಾಡಿದ್ದೆ. ಎಲ್ಲರೂ ಪರಿಶೀಲಿಸಿ ಎಂದು ಬರೆದಿದ್ದರು. ನಮ್ಮ ಮನೆಯ ಸುತ್ತಮುತ್ತಲಿನವರಿಗೆಲ್ಲಾ ಹಕ್ಕುಪತ್ರ ಸಿಕ್ಕಿದೆ. ಆದರೆ ನನಗೆ ಮಾತ್ರ ಸಿಕ್ಕಿಲ್ಲ ಎಂದು ಹೇಳಿದರು.
ಸ್ವಂತವಾಗಿ ಬದುಕಲು ಬೇಕರಿ ತೆರೆಯಲು ಖಾಸಗಿಯವರಿಂದ ಹಣ ಪಡೆಯಲು ಆಧಾರವಾಗಿ ಮನೆಯ ಹಕ್ಕುಪತ್ರ ಕೊಡಬೇಕಾಗಿತ್ತು. ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಕ್ಕೆ ಪೊಲೀಸರು ಹಾಗೂ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ನನಗೆ ಫೋನ್ ಮಾಡಿ ನಿಂದಿಸಿದ್ದಲ್ಲದೆ, ಸಾಲ ನೀಡುತ್ತಿದ್ದ ವ್ಯಕ್ತಿಗೂ ಸಾಲ ನೀಡದಂತೆ ತಾಕೀತು ಮಾಡಿದ್ದಾರೆ ಎಂದು ಆಕೆ ನೋವಿನಿಂದ ಇಡೀ ಘಟನೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಪೇದೆಯೊಬ್ಬರು ನೀಡಿದ ಸಲಹೆ ಮೇರೆಗೆ ಕುಮಾರಣ್ಣನವರನ್ನು ಭೇಟಿ ಮಾಡಿ ನೆರವು ಕೇಳಿದೆ. ಅವರಿಂದ ನನಗೆ ನ್ಯಾಯ ಸಿಗುವ ಭರವಸೆ ಇದೆ. ವಿಜಯನಗರದ ಶಾಸಕರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಮ್ಮ ಮಕ್ಕಳ ಶಾಲಾ ಶುಲ್ಕವನ್ನು ಅವರೇ ತುಂಬಿದ್ದಾರೆ ಎಂದು ನೊಂದ ಮಹಿಳೆ ಸುನಿತಾ ಹೇಳಿದರು.
ಕರ್ನಾಟಕ
Comments are closed.