ರಾಷ್ಟ್ರೀಯ

ಅಸ್ಸಾಂನಲ್ಲಿ ಭೂಕುಸಿತ; ಅರುಣಾಚಲದಲ್ಲಿ ಪ್ರವಾಹ

Pinterest LinkedIn Tumblr

vjgಗುವಾಹಟಿ/ಸಿಲ್ಚಾರ/ ಇಟಾನಗರ (ಪಿಟಿಐ): ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಈಶಾನ್ಯ ರಾಜ್ಯಗಳು ತತ್ತರಿಸಿವೆ.

ಅಸ್ಸಾಂನಲ್ಲಿ ವ್ಯಾಪಕ ಮಳೆಯಿಂದ ಭೂಕುಸಿತ ಉಂಟಾಗಿದ್ದು, 10 ಜನರು ಮೃತಪಟ್ಟಿದ್ದಾರೆ. ಇತ್ತ ಅರುಣಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.

10 ಸಾವು: ಅಸ್ಸಾಂನ ಬರಾಕ್‌ ಕಣಿವೆಯ ಕರೀಂಗಂಜ್‌ ಹಾಗೂ ಹೈಲಕಂಡಿ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿ ಬುಧವಾರ 10 ಜನರು ಮೃತಪಟ್ಟಿದ್ದಾರೆ.

ಕರೀಂಗಂಜ್‌ ಜಿಲ್ಲೆಯ ಸೊನಾಚಿರಾದಲ್ಲಿ ಭೂಮಿ ಕುಸಿದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಧಾರಾಕಾರ ಮಳೆಗೆ ಪರ್ವತದ ಅಂಚಿನಲ್ಲಿದ್ದ ಮನೆಯ ಮೇಲೆ ಬೆಟ್ಟ ಕುಸಿದು ಈ ಅವಘಡ ನಡೆದಿದೆ.

ಹೈಲಕಂಡಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆ ಐವರು ಅಸು ನೀಗಿದ್ದಾರೆ. ಬಿಲೈಪುರದಲ್ಲಿ ನಾಲ್ವರು ಮೃತಪಟ್ಟಿದ್ದು, ರಾಮಚಂದಿ ಪ್ರದೇಶದಲ್ಲಿ ಆರು ವರ್ಷದ ಬಾಲಕ ಭೂಕುಸಿತಕ್ಕೆ ಬಲಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವೀಪಗಳಾದ ಗ್ರಾಮಗಳು: ಇನ್ನು, ಧಾರಕಾರ ಮಳೆಗೆ ಅರುಣಾಚಲ ಪ್ರದೇಶದ್ ನೋವಾ ದೆಹಿಂಗ್ ನದಿ ಉಕ್ಕೇರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ನಾಮಸೈ ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ನಾಮಸೈ ಜಿಲ್ಲೆಯ ಮಹಾದೇವಪುರ–1, ಮಹಾದೇವಪುರ–4 ಹಾಗೂ ಕಾಕೋನಿ ಗ್ರಾಮಗಳು ದ್ವೀಪಗಳಾಗಿ ಮಾರ್ಪಟ್ಟಿದ್ದು, ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತ್ತಗೊಂಡಿವೆ ಎಂದು ಜಲ ಸಂಪನ್ಮೂಲಗಳ ಅಭಿವೃದ್ಧಿ(ಡಬ್ಲ್ಯುಆರ್‌ಡಿ) ವರದಿ ಹೇಳಿದೆ.

ನ್ಯೂ ಸಿಲಾಟೂದಲ್ಲಿ ‌ಮೇ 10ರಂದು ನಿರ್ಮಿಸಿದ್ದ 14 ತಡೆಗೋಡೆಗಳ ಪೈಕಿ ಐದು ತಡೆಗೋಡೆಗಳು ಪ್ರವಾಹಕ್ಕೆ ಸಿಲುಕಿ ನಾಶಗೊಂಡಿದ್ದು, ಮಹದೇವಪುರ ಪಟ್ಟಣ ಅಪಾಯ ಎದುರಿಸುತ್ತಿದೆ.

ಪ್ರವಾಹ ಪರಿಸ್ಥಿತಿಯನ್ನು ಡಬ್ಲ್ಯುಆರ್‌ಡಿ ಅಧಿಕಾರಿಗಳು ಸತತವಾಗಿ ನಿಗಾವಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Comments are closed.